ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ಭಾರತದ 'ಆಪರೇಷನ್ ಸಿಂದೂರ್' ಮುಂದುವರೆದಿದೆ. ವಾಯುಪಡೆ ನಿಖರವಾಗಿ ಕಾರ್ಯನಿರ್ವಹಿಸಿದ್ದು, ವಿವರಗಳನ್ನು ನಂತರ ನೀಡಲಾಗುವುದು. ಪಾಕಿಸ್ತಾನ ಕದನವಿರಾಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ಸೇನಾ ಮುಖ್ಯಸ್ಥರ ಜೊತೆ ಚರ್ಚಿಸಿದ್ದಾರೆ. ಪಾಕಿಸ್ತಾನ ಡ್ರೋನ್ ದಾಳಿ ಹಿನ್ನೆಲೆಯಲ್ಲಿ ಭಾರತಕ್ಕೆ ಪ್ರತಿಕ್ರಿಯಿಸಲು ಸಂಪೂರ್ಣ ಅಧಿಕಾರ ನೀಡಲಾಗಿದೆ.
ದೆಹಲಿ (ಮೇ 11): ಪಾಕಿಸ್ತಾನದ ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತ ನಡೆಸಿದ ಆಪರೇಷನ್ ಸಿಂದೂರ್ ಅನ್ನು ಇನ್ನೂ ನಿಲ್ಲಿಸಿಲ್ಲ ಎಂದು ವಾಯುಪಡೆ ತಿಳಿಸಿದೆ. ಕಾರ್ಯಾಚರಣೆ ಎಚ್ಚರಿಕೆಯಿಂದ ಮುಂದುವರಿಯುತ್ತಿದೆ ಮತ್ತು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಲಾಗುವುದು ಎಂದು ಭಾರತೀಯ ವಾಯುಪಡೆ ತಿಳಿಸಿದೆ.
ಆಪರೇಷನ್ ಸಿಂದೂರ್‌ನಲ್ಲಿ ಭಾರತೀಯ ವಾಯುಪಡೆ ನಿಖರತೆ ಮತ್ತು ವೃತ್ತಿಪರತೆಯಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ. ಕಾರ್ಯಾಚರಣೆಗಳು ಇನ್ನೂ ನಡೆಯುತ್ತಿರುವುದರಿಂದ, ಸಮಯಕ್ಕೆ ಸರಿಯಾಗಿ ವಿವರವಾದ ವಿವರಣೆಯನ್ನು ನೀಡಲಾಗುವುದು. ನಾವು ದೃಢೀಕರಿಸದ ಮಾಹಿತಿ ಹಾಗೂ ಸುಳ್ಳು ಸುದ್ದಿ, ವದಂತಿಗಳು ಮತ್ತು ಸುಳ್ಳು ಪ್ರಚಾರಗಳಿಂದ ದೂರವಿರುವಂತೆ ಭಾರತದ ಎಲ್ಲ ನಾಗರೀಕರು ಹಾಗೂ ಜಾಗತಿಕ ಮಟ್ಟದ ರಾಷ್ಟ್ರಗಳಿಗೆ ವಾಯುಪಡೆ ಮನವಿ ಮಾಡಿದೆ.
ಸೇನಾ ಮುಖ್ಯಸ್ಥರನ್ನು ಭೇಟಿಯಾದ ಪ್ರಧಾನಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮ ಒಪ್ಪಂದವನ್ನು ಪಾಕಿಸ್ತಾನ ನಿನ್ನೆ ರಾತ್ರಿ ಉಲ್ಲಂಘಿಸಿದ ನಂತರದ ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಸೇನಾ ಮುಖ್ಯಸ್ಥರನ್ನು ಭೇಟಿಯಾದರು. ಪಾಕಿಸ್ತಾನ ಇಂದು ಮತ್ತೆ ಪ್ರಚೋದನೆ ಮಾಡಿದರೆ ತೀವ್ರವಾಗಿ ಪ್ರತಿಕ್ರಿಯಿಸುವಂತೆ ಸೂಚಿಸಲಾಗಿದೆ. ಕದನ ವಿರಾಮ ಘೋಷಿಸಿ ಎರಡು ಗಂಟೆಗಳಲ್ಲಿ ಪಾಕಿಸ್ತಾನ ನಿನ್ನೆ ಅದನ್ನು ಉಲ್ಲಂಘಿಸಿತು. ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯಂತ್ರಣ ರೇಖೆ ಮತ್ತು ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಶೆಲ್ ದಾಳಿ ನಡೆಸಿತು.
ಜಮ್ಮು ಮತ್ತು ಕಾಶ್ಮೀರದ ಜೊತೆಗೆ ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್‌ನ ಹಲವು ನಗರಗಳಿಗೆ ಪಾಕಿಸ್ತಾನ ಡ್ರೋನ್‌ಗಳನ್ನು ಕಳುಹಿಸಿದೆ. ಇದರಿಂದಾಗಿ ಭಾರತ ಸರ್ಕಾರವು ತೀವ್ರವಾಗಿ ಪ್ರತಿಕ್ರಿಯಿಸಲು ಸೇನೆಗೆ ಸಂಪೂರ್ಣವಾಗಿ ಫ್ರೀಹ್ಯಾಂಡ್ ಅಧಿಕಾರವನ್ನು ನೀಡಲಾಗಿದೆ. ಈ ಬಗ್ಗೆ ಸ್ವತಃ ವಿದೇಶಾಂಗ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ. ಇನ್ನು ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಮಾಡಿದ ದಾಳಿಯ ಪರಿಸ್ಥಿತಿಯಲ್ಲಿ ಏನಾದರೂ ಬದಲಾವಣೆಗಳಾಗಿವೆಯೇ ಎಂದು ಸರ್ಕಾರ ಅಧಿಕೃತವಾಗಿ ದೃಢಪಡಿಸಿಲ್ಲ. ಅಮೃತಸರ್ ಸೇರಿದಂತೆ ಹಲವು ನಗರಗಳಲ್ಲಿ ಬೆಳಗ್ಗೆ ರೆಡ್ ಅಲರ್ಟ್ ಇತ್ತು. ಸದ್ಯಕ್ಕೆ ಎಚ್ಚರಿಕೆ ಮುಂದುವರಿಯಲಿದೆ ಎಂದು ಸರ್ಕಾರ ತಿಳಿಸಿದೆ.
ಕಳೆದ ನಾಲ್ಕು ದಿನಗಳಿಂದ ಭಾರತದ ಮೇಲೆ ದಾಳಿ ಮಾಡುತ್ತಿದ್ದ ಪಾಕಿಸ್ತಾನ ಸೇನೆಯು ಭಾರತ ಹಾರಿಸಿದ ಒಂದು ಬ್ರಹ್ಮೋಸ್ ಕ್ಷಿಪಣಿಯ ದಾಳಿಯಿಂದಾಗಿ ತತ್ತರಿಸಿ ಹೋಗಿದೆ. ಭಾರತದ ತೀವ್ರ ಪ್ರತಿಕ್ರಿಯೆ ಎದುರಿಸಿದ ಪಾಕಿಸ್ತಾನ ಅಮೇರಿಕಾದ ಮೂಲಕ ಭಾರತದೊಂದಿಗೆ ಕದನ ವಿರಾಮ ಮಾಡಿಕೊಳ್ಳಲು ಒಪ್ಪಿಕೊಂಡಿತು. ನಿನ್ನೆ ಬೆಳಿಗ್ಗೆ 9 ಗಂಟೆಗೆ ಪಾಕಿಸ್ತಾನದ ಡಿಜಿಎಂಒ ಇದಕ್ಕೆ ಸಮ್ಮತಿಸಿ ಸಂದೇಶ ಕಳುಹಿಸಿದ್ದರು. ಸಂಜೆ ನಡೆದ ಚರ್ಚೆಯ ನಂತರ ಒಪ್ಪಂದವಾಯಿತು. ಆದರೆ, ರಾತ್ರಿ 8 ಗಂಟೆಗೆ ಪುನಃ ಕಾಶ್ಮೀರ ಸೇರಿದಂತೆ ವಿವಿಧ ಭಾಗಗಳಲ್ಲಿ ಪಾಕಿಸ್ತಾನ ಶೆಲ್ ದಾಳಿ ಮಾಡಿದೆ. ಇನ್ನು ಕದನ ವಿರಾಮ ಒಪ್ಪಂದದಲ್ಲಿ ಸೇನಾ ಕಾರ್ಯಾಚರಣೆಗಳನ್ನು ಹೊರತುಪಡಿಸಿ ಸಿಂಧೂ ನದಿ ನೀರಿನ ಒಪ್ಪಂದ ಸೇರಿದಂತೆ ಯಾವುದೇ ವಿಷಯದಲ್ಲೂ ರಾಜಿ ಮಾಡಿಕೊಂಡಿಲ್ಲ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.


