ಕಾರ್ಗಿಲ್ ಯುದ್ಧದ ವೇಳೆ ಪಾಕಿಸ್ತಾನಿ ಸೈನಿಕರು ಹುತಾತ್ಮ ಯೋಧರ ಪಾರ್ಥಿವ ಶರೀರಕ್ಕೆ ಬದಲಾಗಿ ಮಾಧುರಿ ದೀಕ್ಷಿತ್ ಮತ್ತು ರವೀನಾ ಟಂಡನ್ ಅವರನ್ನು ಕೇಳಿದ್ದರು. ಕ್ಯಾಪ್ಟನ್ ವಿಕ್ರಮ್ ಬಾತ್ರಾ ಈ ಬೇಡಿಕೆಗೆ ಗುಂಡಿನ ಉತ್ತರ ನೀಡಿದ್ದರು. ರವೀನಾ ಟಂಡನ್ ಚಿತ್ರವಿರುವ ಕ್ಷಿಪಣಿಯನ್ನು ಭಾರತೀಯ ಸೇನೆ ಪಾಕ್‍ಗೆ ಕಳುಹಿಸಿತ್ತು.
ಭಾರತ (India) – ಪಾಕ್ ಮಧ್ಯೆ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಪಾಕ್ ಭಯೋತ್ಪಾದಕರ ಪಹಲ್ಗಾಮ್ ದಾಳಿಗೆ ಭಾರತ ಪ್ರತ್ಯುತ್ತರ ನೀಡ್ತಿದೆ. ಆಪರೇಷನ್ ಸಿಂಧೂರ (Operation Sindoor) ಅಡಿಯಲ್ಲಿ ಪಾಕಿಸ್ತಾನದ ಹುಟ್ಟಡಗಿಸುತ್ತಿದೆ. ಯುದ್ಧದ ವಿಷ್ಯ ಚರ್ಚೆಯಲ್ಲಿರುವಾಗ ಹಿಂದೆ ನಡೆದ ಅನೇಕ ಘಟನೆಗಳು ಮತ್ತೆ ಚರ್ಚೆಗೆ ಬರುತ್ತವೆ. ಅದ್ರಲ್ಲಿ ಬಾಲಿವುಡ್ ಗೆ ಸಂಬಂಧಿಸಿದ ಅನೇಕ ಘಟನೆ ಸೇರಿದೆ. 1999ರಲ್ಲಿ ನಡೆದ ಕಾರ್ಗಿಲ್ ಯುದ್ಧ ಸಮಯದಲ್ಲಿ ನಡೆದ ಘಟನೆ ಬಾಲಿವುಡ್ ಜೊತೆ ನಂಟು ಹೊಂದಿದೆ. ಪಾಕಿಸ್ತಾನಿ ಸೈನಿಕರು, ಬಾಲಿವುಡ್ ನಟಿಯರಿಗೆ ಬೇಡಿಕೆ ಇಟ್ಟಿದ್ದ ವಿಷ್ಯವೊಂದಿದೆ. ಪಾಕ್ ಸೈನಿಕರು, ಹುತಾತ್ಮರಾದ ಭಾರತೀಯ ಯೋಧರ ಪಾರ್ಥಿವ ಶರೀರ ನೀಡಲು ಬಾಲಿವುಡ್ (Bollywood) ನಟಿಯರನ್ನು ನೀಡುವಂತೆ ಬೇಡಿಕೆ ಇಟ್ಟಿದ್ರು. ಇದಕ್ಕೆ ಭಾರತೀಯ ಸೇನೆ ಪ್ರತ್ಯುತ್ತರ ನೀಡಿತ್ತು. ಬಾಲಿವುಡ್ ನಟಿಯರನ್ನು ಕೇಳಿದ್ದ ಸೈನಿಕರನ್ನು ಭಾರತೀಯ ಯೋಧರು ಹೊಡೆದುರುಳಿಸಿದ್ದರು. ಯಾವ ನಟಿಯರನ್ನು ಪಾಕ್ ಸೈನಿಕರು ಕೇಳಿದ್ರು ಎನ್ನುವ ಮಾಹಿತಿ ಇಲ್ಲಿದೆ.
ಪಾಕಿಸ್ತಾನದ ಸೈನಿಕರು ನಟಿ, ಡಾನ್ಸಿಂಗ್ ಕ್ವೀನ್ ಮಾಧುರಿ ದೀಕ್ಷಿತ್ (Madhuri Dixit) ಹಾಗೂ ರವೀನಾ ಟಂಡನ್ (Raveena Tandon) ಗೆ ಬೇಡಿಕೆ ಇಟ್ಟಿದ್ದರು. ಈ ವಿಷ್ಯವನ್ನು ಯುದ್ಧದಲ್ಲಿ ಪಾಲ್ಗೊಂಡಿದ್ದ ಭಾರತೀಯ ಯೋಧರು, ಸಂದರ್ಶನದಲ್ಲಿ ಬಹಿರಂಗಪಡಿಸಿದ್ದರು. ಹುತಾತ್ಮ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಸಂದರ್ಶನವೊಂದರಲ್ಲಿ ಈ ವಿಷ್ಯವನ್ನು ಹೇಳಿದ್ದರು.
ಕ್ಯಾಪ್ಟನ್ ವಿಕ್ರಮ್ ಬಾತ್ರಾ ಹೇಳಿದ್ದೇನು? : ಕಾರ್ಗಿಲ್ ಯುದ್ಧದಲ್ಲಿ ಅನೇಕ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಯುದ್ಧದ ಸಮಯದಲ್ಲಿ ಕೆಲ ಯೋಧರ ಪಾರ್ಥಿವ ಶರೀರಿ ಪಾಕಿಸ್ತಾನದ ಬದಿಯಲ್ಲಿ ಬಿದ್ದಿತ್ತು. ಭಾರತೀಯ ಸೈನಿಕರಿಗೆ ಅದನ್ನು ತರೋದು ಸಾಧ್ಯವಾಗಿರಲಿಲ್ಲ. ಪಾಕಿಸ್ತಾನಿ ಸೈನಿಕರನ್ನು ಮಣಿಸಲು, ಭಾರತೀಯ ಯೋಧರು ಗುಂಡು ಹಾರಿಸ್ತಿದ್ರು. ಇದ್ರ ಜೊತೆಗೆ ಪಾರ್ಥಿವ ಶರೀರವನ್ನು ಭಾರತಕ್ಕೆ ತರುವ ಪ್ರಯತ್ನವೂ ನಡೆಯುತ್ತಿತ್ತು. ಈ ವೇಳೆ ಎದುರಿಗಿದ್ದ ಪಾಕ್ ಸೈನಿಕನೊಬ್ಬ, ನಮಗೆ ನಟಿ ಮಾಧುರಿ ದೀಕ್ಷಿತ್ ಅವರನ್ನು ನೀಡಿ, ನಾವು ಇಲ್ಲಿಂದ ಹೊರಟು ಹೋಗ್ತೆವೆ ಎಂದಿದ್ದ. ಸೈನಿಕನ ಮಾತು ಕೇಳಿಸಿಕೊಂಡ ಬೆಟಾಲಿಯನ್ನ ಕ್ಯಾಪ್ಟನ್ ಆಗಿದ್ದ ವಿಕ್ರಮ್ ಬಾತ್ರಾ ತಮ್ಮ AK 47 ನಿಂದ ಗುಂಡು ಹಾರಿಸಿ ಪಾಕಿಸ್ತಾನಿ ಸೈನ್ಯಕ್ಕೆ ಸೂಕ್ತ ಉತ್ತರ ನೀಡಿದ್ದರು. ಮಾಧುರಿ ವತಿಯಿಂದ ಪ್ರೀತಿಯಿಂದ ಎನ್ನುತ್ತಲೇ ಗುಂಡು ಹಾರಿಸಿದ್ದರು. ಆ ಸಮಯದಲ್ಲಿ ಈ ಘಟನೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ರವೀನಾ ಟಂಡನ್ಗೆ ಸಂಬಂಧಿಸಿದ ಘಟನೆ ಏನು? : ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಯೋಧರ ಪಾರ್ಥಿವ ಶರೀರಿ ನೀಡುವಂತೆ ಭಾರತೀಯ ಸೇನೆ, ಪಾಕ್ ಸೇನೆಯನ್ನು ಕೇಳಿತ್ತು. ಆಗ ಪಾಕ್ ಸೈನಿಕರು ಮತ್ತೆ ತಮ್ಮ ಹಳೆ ರಾಗ ಎಳೆದಿದ್ದರು. ಆದ್ರೆ ಈ ಬಾರಿ ಮಾಧುರಿ ದೀಕ್ಷಿತ್ ಬದಲು ರವೀನಾ ಟಂಡನ್ ಗೆ ಬೇಡಿಕೆ ಇಟ್ಟಿದ್ದರು. ಆಗ ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಕೂಡ ರವೀನಾ ಟಂಡನ್ ಫ್ಯಾನ್ ಆಗಿದ್ರು. ಇದನ್ನು ಅರಿತ ಭಾರತೀಯ ಸೇನೆ ಅದ್ರ ಲಾಭ ಪಡೆದಿತ್ತು. ರವೀನಾ ಟಂಡನ್ ಸಂದೇಶದೊಂದಿಗೆ ಕ್ಷಿಪಣಿಯನ್ನು ಕಳುಹಿಸಿತ್ತು. ಅದ್ರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಈಗ್ಲೂ ಇವೆ.


