Breaking ಬಿಲಾಸಪುರದಲ್ಲಿ ಪ್ರಯಾಣಿಕರ ರೈಲು ಅಪಘಾತ, ಸಾವಿನ ಸಂಖ್ಯೆ 5ಕ್ಕೆ ಏರಿಕೆ, ಗೂಡ್ಸ್ ರೈಲಿಗೆ ಡಿಕ್ಕಿಯಾದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದೆ. ಹಲವರು ಗಾಯಗೊಂಡಿದ್ದಾರೆ.

ಬಿಲಾಸಪುರ (ನ.04) ಕಳೆದ ಕೆಲ ದಿನಗಳಿಂದ ಅಪಘಾತದ ಸಂಖ್ಯೆ ಹೆಚ್ಚಳವಾಗಿದೆ. ಸಾವು ನೋವಿನ ಪ್ರಮಾಣವೂ ಹೆಚ್ಚಾಗಿದೆ. ಬಸ್, ಟ್ರಕ್, ಕಾರು ಸೇರಿದಂತೆ ಹಲವು ರಸ್ತೆ ಅಪಘಾತಗಳಲ್ಲಿ ಬಲಿಯಾದವರ ಸಂಖ್ಯೆ ಹೆಚ್ಚು. ಇದೀಗ ಭಾರತೀಯ ರೈಲ್ವೇಯ 68733 ಪ್ರಯಾಣಿಕರ ರೈಲು ಅಪಘಾತಕ್ಕೀಡಾಗಿದೆ. ಬಿಲಾಸಪುರ ರೈಲ್ವೇ ನಿಲ್ದಾಣ ಬಳಿ ಈ ಅಪಘಾತ ಸಂಭಿಸಿದೆ. ಗೂಡ್ಸ್ ರೈಲಿಗೆ ಪ್ರಯಾಣಿಕರ ರೈಲು ಡಿಕ್ಕಿಯಾಗಿದೆ. ಪರಿಣಾಮ ಐವರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದೆ. ಚತ್ತೀಸಘಡದ ಬಿಲಾಸಪುರದ ಲಾಲ್‌ಖಡನಾ ಬಳಿ ಅಪಘಾತ ಸಂಭವಿಸಿದೆ.

ರೈಲಿನ ಬೋಗಿಗಳು ಸಂಪೂರ್ಣ ನಜ್ಜು ಗುಜ್ಜು

ವೇಗವಾಗಿ ಸಂಚರಿಸುತ್ತಿದ್ದ ಪ್ರಯಾಣಿಕರ ರೈಲು ವಿರುದ್ಧ ದಿಕ್ಕಿನಲ್ಲಿದ್ದ ಗೂಡ್ಸ್ ರೈಲಿಗೆ ಡಿಕ್ಕಿಯಾಗಿದೆ. ಇದರ ಪರಿಣಾಣ ಪ್ರಯಾಣಿಕರ ರೈಲಿನ ಮುಂಭಾಗದ ಬೋಗಿಗಳು ಸಂಪೂರ್ಣ ನಜ್ಜು ಗುಜ್ಜಾಗಿದೆ. ಬಿಲಾಸಪರು ಸೂಪರಿಡೆಂಟ್ ಆಫ್ ಪೊಲೀಸ್ ರಜನೀಶ್ ಸಿಂಗ್ ಸ್ಥಳಕ್ಕೆ ಧಾವಿಸಿದ್ದಾರೆ. ಐವರು ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಲಾಗುತ್ತಿದೆ. ಎನ್‌ಡಿಆರ್‌ಎಫ್ ಸೇರಿದಂತೆ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ರಜನೀಶ್ ಸಿಂಗ್ ಹೇಳಿದ್ದಾರೆ. ಹಲವು ಗಾಯಾಳುಗಳು ರೈಲು ಬೋಗಿಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಹೀಗಾಗಿ ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿದೆ ಎಂದಿದ್ದಾರೆ.

ಆ್ಯಂಬುಲೆನ್ಸ್, ವೈದ್ಯರ ತಂಡಗಳು ಸ್ಥಳಕ್ಕೆ ಧಾವಿಸಿದೆ. ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಇತ್ತ ಬೋಗಿಯ ಅಡಿಯಲ್ಲಿರುವವರ ರಕ್ಷಣೆ ನಡೆಯುತ್ತಿದೆ. ಈ ಪೈಕಿ ಮಗುವನ್ನು ರಕ್ಷಿಸಲಾಗಿದೆ. ಗಾಯಾಳುಗಳಿಗೆ ವೈದ್ಯರ ತಂಡ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸುವ ಕೆಲಸ ನಡೆಯುತ್ತಿದೆ.

ರೈಲು ಡಿಕ್ಕೆಯಾಗಲು ಕಾರಣವೇನು?

ಪ್ರಾಥಮಿಕ ವರದಿಗಳ ಪ್ರಕಾರ ಪ್ರಯಾಣಿಕರ 68733 ರೈಲು ಡಿಕ್ಕಿಯಾಗಲು ಎಲೆಕ್ಟ್ರಿಕ್ ವೈಯರಿಂಗ್ ಹಾಗೂ ಸಿಗ್ನಲ್ ಸಿಸ್ಟಮ್‌ನಲ್ಲಿನ ವೈಫಲ್ಯ ಕಾರಣ ಎಂದು ಹೇಳಲಾಗುತ್ತಿದೆ. ರೈಲ್ವೇ ಅಧಿಕಾರಿಗಳು ತನಿಖೆಗೆ ಆದೇಶ ನೀಡಿದ್ದಾರೆ. ಇತ್ತ ತನಿಖಾ ಅಧಿಕಾರಿಗಳ ತಂಡ ಕೂಡ ಸ್ಥಳಕ್ಕೆ ಧಾವಿಸಿದೆ.

ಹಲವು ರೈಲು ಪ್ರಯಾಣದಲ್ಲಿ ಅಡಚಣೆ

ಬಿಲಾಸಪುರ ಕತ್ನಿ ಸೆಕ್ಷನ್‌ನಲ್ಲಿ ಈ ಅಪಘಾತ ಸಂಭವಿಸಿದೆ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ ಹಲವು ರೈಲುಗಳಿಗೆ ಅಡಚಣೆಯಾಗಿದೆ. ಕೆಲ ರೈಲು ಸೇವೆ ರದ್ದಾಗಿದೆ. ಹಲವು ರೈಲುಗಳ ಮಾರ್ಗ ಬದಲಿಸಲಾಗಿದೆ. ತಾಂತ್ರಿಕ ತಂಡ, ಸಿಬ್ಬಂದಿಗಳು ರೈಲು ಹಳಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ.

ರೈಲ್ವೇಯಿಂದ ಸಹಾಯವಾಣಿ

ಅಪಘಾತದ ತೀವ್ರತೆ ಹೆಚ್ಚಾಗಿದೆ. ಗಾಯಾಳುಗಳ ಸಂಖ್ಯೆ ಹೆಚ್ಚಾಗಿದೆ. ಘಟನೆ ಬೆನ್ನಲ್ಲೇ ಭಾರತೀಯ ರೈಲ್ವೇ ಸಹಾಯವಾಣಿ ತೆರೆದಿದೆ. ಪ್ರಯಾಣಿಕರು, ಕುಟುಂಬಸ್ಥರಿಗೆ ಸೂಕ್ತ ಮಾಹಿತಿ ನೀಡಲು ಅಧಿಕಾರಿಗಳು ಕಾರ್ಯಪ್ರೃತ್ತರಾಗಿದ್ದರೆ.

ಅಪಘಾತ ನಡೆದ ಸ್ಥಳದ ಸಹಾಯವಾಣಿ ಸಂಖ್ಯೆ

  • 9752485499
  • 8602007202
  1. ಚಂಪಾ ಜಂಕ್ಷನ್: 808595652
  2. ರಾಯಿಘಡ:975248560
  3. ಪಂದ್ರ ರಸ್ತೆ: 8294730162