Breaking News ನಾರಾಯಣಪುರ ಅರಣ್ಯದಲ್ಲಿ ವಿಮಾನ ಪತನ, ಸ್ಥಳಕ್ಕೆ ರಕ್ಷಣಾ ತಂಡಗಳ ದೌಡು, ಹೈದರಾಬಾದ್ ಹುಬ್ಬಳ್ಳಿ ವಿಮಾನ ಆತಂಕ ಪರಿಸ್ಥಿತಿ ಬೆನ್ನಲ್ಲೇ ಇದೀಗ ಖಾಸಗಿ ವಿಮಾನ ಪತನಗೊಂಡ ಮಾಹಿತಿ ಲಭ್ಯವಾಗಿದೆ.
ರಾಯ್‌ಪುರ್ (ಏ.20) ಪ್ರಯಾಣಿಕರನ್ನು ಹೊತ್ತ ಹೈದರಾಬಾದ್ ಹುಬ್ಭಳಿ ವಿಮಾನ ತಾಂತ್ರಿಕ ದೋಷದಿಂದ ಲ್ಯಾಂಡಿಂಗ್ ಆಗಲು ಪರದಾಡಿ ಕೊನೆಗೆ ಬೆಂಗಳೂರಿನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆದ ಘಟನೆ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವಿಮಾನದಲ್ಲಿನ ಪ್ರಯಾಣಿಕರು ಚೀರಾಡುತ್ತಿರುವ ದೃಶ್ಯಗಳು ಹರಿದಾಡಿತ್ತು. ಈ ಘಟನೆ ಬೆನ್ನಲ್ಲೇ ಇದೀಗ ಚತ್ತೀಸಘಡದ ಜಶಪುರ್ ಹಾಗೂ ನಾರಾಯಣಪುರ ಪ್ರದೇಶದಲ್ಲಿ ಖಾಸಗಿ ವಿಮಾನ ಪತನಗೊಂಡಿರುವ ಮಾಹಿತಿ ಲಭ್ಯವಾಗಿದೆ.
ನಾರಾಯಣಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ರತ್ನಪಹಲಿ ಕಾಡಿನಲ್ಲಿ ಈ ಘಟನೆ ನಡೆದಿದೆ. ಖಾಸಗಿ ವಿಮಾನದಲ್ಲಿ ಯಾವುದೇ ತಾಂತ್ರಿಕ ದೋಷಗಳು ಇರಲಿಲ್ಲ ಎನ್ನಲಾಗುತ್ತಿದೆ. ಪ್ರಮುಖವಾಗಿ ಈ ವಿಮಾನ ಅತೀ ಕೆಳಮಟ್ಟದಲ್ಲಿ ಹಾರಾಡುತ್ತಿದ್ದಾಗ ಘಟನೆ ನಡೆದಿದೆ ಎನ್ನಲಾಗಿದೆ. ಪರ್ವತ ಹಾಗೂ ಕಾಡು ಪ್ರದೇಶ ಆಗಮಿಸುತ್ತಿದ್ದಂತೆ ವಿಮಾನ ಮೇಲಕ್ಕೆ ಹಾರಬೇಕಿತ್ತು. ಆದರೆ ಪರ್ವತಗಳ ಮೇಲಿನ ಮರಕ್ಕೆ ಡಿಕ್ಕಿಯಾಗಿ ವಿಮಾನ ಪತನಗೊಂಡಿದೆ ಎಂದು ಪ್ರಾಥಮಿಕ ಮಾಹಿತಿಗಳು ಬಹಿರಂಗವಾಗಿದೆ.
ಈ ವಿಮಾನದಲ್ಲಿ ಎಷ್ಟು ಮಂದಿ ಪ್ರಯಾಣಿಕರಿದ್ದರು?
ಸದ್ಯ ಲಭ್ಯವಾಗಿರುವ ಮಾಹಿತಿಯಲ್ಲಿ ಈ ವಿಮಾನದಲ್ಲಿನ ಪ್ರಯಾಣಿಕರು ಹಾಗೂ ಸಿಬ್ಬಂದಿಗಳ ಕುರಿತು ಯಾವುದೇ ಮಾಹಿತಿ ಇಲ್ಲ. ನಾರಾಯಣಪುರ ಕಾಡು ಪ್ರದೇಶದಲ್ಲಿ ವಿಮಾನ ಪತನಗೊಂಡು ಹೊತ್ತಿ ಉರಿದಿದೆ. ಬೆಂಕಿ ಜ್ವಾಲೆಗಳು ದೂರದಿಂದಲೂ ಸ್ಪಷ್ಟವಾಗಿ ಕಾಣುತ್ತಿದೆ. ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸಾವು ನೋವಿನ ಕುರಿತು ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ.
ಸ್ಥಳಕ್ಕೆ ರಕ್ಷಣಾ ತಂಡಗಳ ದೌಡು
ಕಾಡು ಪ್ರದೇಶದಲ್ಲಿ ಖಾಸಗಿ ವಿಮಾನ ಪತನಗೊಂಡಿರುವ ಕಾರಣ ರಕ್ಷಣಾ ತಂಡಗಳು ತಕ್ಷಣಕ್ಕೆ ಸ್ಥಳಕ್ಕೆ ಧಾವಿಸಲು ಸಾಧ್ಯವಾಗಲಿಲ್ಲ. ಹರಸಾಹಸ ಮಾಡಿ ರಕ್ಷಣಾ ತಂಡಗಳು ಸ್ಥಳಕ್ಕೆ ದೌಡಾಯಿಸಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಕಾಡು ಪ್ರದೇಶದ ಕಾರಣ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಸ್ಥಳೀಯ ಜಿಲ್ಲಾಡಳಿತ, ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ವಿಮಾನ, ಪ್ರಯಾಣಿಕರ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಸಿಂಗಲ್ ಎಂಜಿನ್ ಪ್ರೊಪೆಲ್ಲರ್ ಏರ್‌ಕ್ರಾಫ್ಟ್ ಸಾಮಾನ್ಯವಾಗಿ ಹೆಚ್ಚು ಎತ್ತರದಲ್ಲಿ ಹಾರಾಟ ನಡೆಸುವುದಿಲ್ಲ. ಆದರೆ ಅಗತ್ಯಬಿದ್ದಾಗ, ಸುರಕ್ಷತೆಗಾಗಿ ಎತ್ತರದಲ್ಲಿ ಹಾರಾಟ ನಡೆಸಲಿದೆ. ಆದರೆ ಈ ಘಟನೆಯಲ್ಲಿ ಪೈಲೆಟ್ ಪರ್ವತ, ಕಾಡು ಪ್ರದೇಶದಲ್ಲಿ ಅಪಾಯದ ಮುನ್ಸೂಚನೆ ಇದ್ದರೂ ಕಡೆಗಣಿಸಿದ್ರಾ ಅನ್ನೋ ಅನುಮಾನಗಳು ಕಾಡತೊಡಗಿದೆ.


