ಬಿಹಾರ ಚುನಾವಣೆ ಕಸರತ್ತು, ಮೀನುಗಾರರ ಜೊತೆ ಕೆರೆಗೆ ಜಿಗಿದು ಮೀನು ಹಿಡಿದ ರಾಹುಲ್ ಗಾಂಧಿ, ಬೋಟಿನಲ್ಲಿದ್ದ ರಾಹುಲ್ ಗಾಂಧಿ ದಿಢೀರ್ ಕೆರೆಗೆ ಜಿಗಿದಿದ್ದಾರೆ. ಬಳಿಕ ಮೀನುಗಾರರ ಜೊತೆ ಬಲೆ ಹಾಕಿ ಮೀನು ಹಿಡಿದಿದ್ದಾರೆ. ಇದೇ ವೇಳೆ ಮೀನುಗಾರರ ಸಮಸ್ಯೆಗಳ ಕುರಿತು ಮಾತನಾಡಿದ್ದಾರೆ.

ಪಾಟ್ನಾ (ನ.02) ಬಿಹಾರ ಚುನಾವಣೆ ಕಾವೇರುತ್ತಿದೆ. ಅಂತಿಮ ಹಂತದ ಪ್ರಚಾರ ಕಸರತ್ತು ನಡೆಯುತ್ತಿದೆ. ಮತದಾರರ ಸೆಳೆಯಲು ನಾಯಕರು ಹಲವು ಕಸರತ್ತು ಮಾಡುತ್ತಿದ್ದಾರೆ. ಇತ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಚಾರದ ನಡುವೆ ಬಿಡುವು ಮಾಡಿಕೊಂಡು ಬೇಗುಸರಾಜ್‌ನ ಮೀನುಗಾರರ ಸಮಸ್ಯೆಗಳನ್ನು ಆಲಿಸಲು ತೆರಳಿದ್ದರು. ಈ ವೇಳೆ ಮೀನುಗಾರರ ಜೊತೆ ಬೋಟ್‌ನಲ್ಲಿ ತೆರಳಿದ ರಾಹುಲ್ ಗಾಂಧಿ ಕೆರೆಗೆ ಜಿಗಿದು ಬಲೆ ಹಾಕಿ ಮೀನು ಹಿಡಿದಿದ್ದಾರೆ. ಬೋಟಿನಲ್ಲಿ ತೆರಳುತ್ತಿದ್ದ ರಾಹುಲ್ ಗಾಂಧಿ ದಿಢೀರ್ ನೀರಿಗೆ ಧುಮುಕಿದ್ದಾರೆ. ಬಳಿಕ ಈಜಾಡುತ್ತಾ ದಡ ಸೇರಿದ್ದಾರೆ. ಈ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ.

ಸತತ ಚುನಾವಣಾ ಪ್ರಚಾರದ ನಡುವ ರಾಹುಲ್ ಗಾಂಧಿ ಅಚ್ಚರಿ

ಬಿಹಾರದಲ್ಲಿ ಸತತ ಚುನಾವಣಾ ಪ್ರಚಾರ ನಡೆಸುತ್ತಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಇದರ ನಡುವೆ ರಾಹುಲ್ ಗಾಂಧಿ ಬೆಗುಸರಾಜ್‌ಗೆ ತೆರಳಿದ್ದಾರೆ. ಇಂಡಿಯಾ ಒಕ್ಕೂಟದ ಪ್ರಮುಖ ಮೈತ್ರಿ ಪಕ್ಷವಾಗಿರುವ ಬಿಹಾರದದ ವೀಕಾಸಶೀಲ ಇನ್ಸಾನ್ ಪಾರ್ಟಿ (ವಿಐಪಿ) ನಾಯಕ ಮುಕೇಶ್ ಸಹನಿ ಜೊತೆ ಬೋಟು ಮೂಲಕ ಮೀನುಗಾರರತ್ತೆ ತೆರಳಿದ್ದಾರೆ. ವಿಕಾಸ್ ಸಹನಿ ಮೀನುಗಾರ ಸಮುದಾಯದ ಅತೀ ದೊಡ್ಡ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ ಈ ಬಾರಿ ಇಂಡಿಯಾ ಒಕ್ಕೂಟದ ಉಪ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ. ಕೆರೆಯಲ್ಲಿ ಬೋಟ್ ಮೂಲಕ ಸಹನಿ ಜೊತೆ ತೆರಳಿದ ರಾಹುಲ್ ಗಾಂಧಿ, ಕೆರಯ ಮಧ್ಯಭಾಗದಲ್ಲಿ ಬೋಟಿನಿಂದ ಕೆರೆಗೆ ಜಿಗಿದಿದ್ದಾರೆ.

ರಾಹುಲ್ ಗಾಂಧಿ ತಮ್ಮ ಬಿಳಿ ಟಿಶರ್ಟ್ ಹಾಗೂ ಕಾರ್ಗೋ ಪ್ಯಾಂಟ್‌ ಧರಿಸಿದ್ದರು. ಬೋಟಿನಿಂದ ರಾಹುಲ್ ಗಾಂಧಿಗೆ ಕೆರೆಗೆ ಜಿಗಿದ ಬೆನ್ನಲ್ಲೇ ಮುಕೇಶ್ ಸಹನಿ ಕೂಡ ಕೆರೆಗೆ ಜಿಗಿದಿದ್ದಾರೆ. ಕೆರೆ ನೀರಿನಲ್ಲಿ ಈಜಾಡುತ್ತಾ ರಾಹುಲ್ ಗಾಂಧಿ ದಡ ಸೇರಿದ್ದಾರೆ. ಬಳಿಕ ಮೀನುಗಾರರ ಜೊತೆ ಮತ್ತೆ ಕೆರೆಯತ್ತ ತೆರಳಿ ಮೀನಿಗೆ ಬಲೆ ಹಾಕಿದ್ದಾರೆ. ಇತ್ತ ಮೀನುಗಾರರು ರಾಹುಲ್ ಗಾಂಧಿ ನಡೆಯಿಂದ ಖುಷಿಯಾಗಿದ್ದಾರೆ. ತಮ್ಮ ಜೊತೆ ಕೆರೆಯ ನೀರಿನಲ್ಲಿ ಮೀನು ಹಿಡಿದ ರಾಹುಲ್ ಗಾಂಧಿಗೆ ಶುಭ ಹಾರೈಸಿದ್ದಾರೆ.

ಮೀನುಗಾರರಿಗೆ ಹಲವು ಭರವಸೆ ನೀಡಿದ ರಾಹುಲ್ ಗಾಂಧಿ

ಕೆರೆಗೆ ಹಾರಿ ಮೀನುಗಾರರ ಜೊತೆ ಕೆಲ ಸಮಯ ಕಳೆದ ರಾಹುಲ್ ಗಾಂಧಿ, ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ. ಇದೇ ವೇಳೆ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮೀನುಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಮೀನುಗಾರರಿಗೆ ವಿಮೆ, ಮೀನುಗಾರಿಕೆ ಇಲ್ಲದ ವೇಳೆ ಆರ್ಥಿಕ ನೆರವು ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದ್ದಾರೆ.ಮೀನುಗಾರಿಗೆ ನಿಷೇಧ ಮಾಡುವ ಮೂರು ತಿಂಗಳಲ್ಲಿ ಪ್ರತಿ ತಿಂಗಳು 5,000 ರೂಪಾಯಿಯಂತೆ ಆರ್ಥಿಕ ನೆರವು ನೀಡುವುದಾಗಿ ಹೇಳಿದ್ದಾರೆ.

View post on Instagram