ಪಾಕಿಸ್ತಾನದ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಭಾರತ ನಡೆಸಿದ ‘ಆಪರೇಷನ್‌ ಸಿಂದೂರ’ ಕುರಿತು ಗುರುವಾರ ಸರ್ಕಾರ ಸರ್ವಪಕ್ಷ ಸಭೆ ನಡೆಸಿ ಮಾಹಿತಿ ನೀಡಿದೆ.

ನವದೆಹಲಿ (ಮೇ.09): ಪಾಕಿಸ್ತಾನದ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಭಾರತ ನಡೆಸಿದ ‘ಆಪರೇಷನ್‌ ಸಿಂದೂರ’ ಕುರಿತು ಗುರುವಾರ ಸರ್ಕಾರ ಸರ್ವಪಕ್ಷ ಸಭೆ ನಡೆಸಿ ಮಾಹಿತಿ ನೀಡಿದೆ ಹಾಗೂ 100 ಉಗ್ರರ ಸಾಯಿಸಿರುವುದಾಗಿ ಹೇಳಿದೆ. ಸರ್ಕಾರದ ಕ್ರಮಕ್ಕೆ ಈ ವೇಳೆ ವಿಪಕ್ಷಗಳಿಂದ ಬೆಂಬಲ ವ್ಯಕ್ತವಾಗಿದೆ. ಸಭೆಯಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ‘ಭಾರತೀಯ ಸೇನೆಯ ಹೊಡೆತಕ್ಕೆ ಪಾಕ್‌ ಮತ್ತು ಪಿಒಕೆಯ ಕನಿಷ್ಠ 100 ಉಗ್ರರು ಹತರಾಗಿದ್ದಾರೆ. ಈ ಆಪರೇಷನ್ ಮುಂದುವರೆಯಲಿದ್ದು, ಪಾಕ್‌ ಪ್ರತಿದಾಳಿ ಮಾಡಿದಲ್ಲಿ ಭಾರತವೂ ತಕ್ಕ ತಿರುಗೇಟು ನೀಡಲಿದೆ’ ಎಂದರು ಎಂದು ಮೂಲಗಳು ಮಾಹಿತಿ ನೀಡಿವೆ.

ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಅವರು ಸಭೆಯ ಬಳಿಕ ಪತ್ರಕರ್ತರ ಜತೆ ಮಾತನಾಡಿ, ‘ಪಾಕ್‌ ವಿರುದ್ಧದ ಕಾರ್ಯಾಚರಣೆಯ ಬಗ್ಗೆ ರಾಜಕೀಯ ಒಮ್ಮತವನ್ನು ರೂಪಿಸಲು ಸಭೆ ಕರೆಯಲಾಗಿತ್ತು. ಎಲ್ಲಾ ನಾಯಕರು ಪ್ರಬುದ್ಧರಾಗಿ ವರ್ತಿಸಿದರು. ರಾಜನಾಥ್‌ ಸಿಂಗ್‌ ಅವರು, ನಾವು ರಾಜಕೀಯ ಮಾಡುವುದು ಸರ್ಕಾರ ರಚಿಸಲಷ್ಟೇ ಅಲ್ಲ, ರಾಷ್ಟ್ರ ನಿರ್ಮಾಣಕ್ಕೂ ಮಾಡುತ್ತೇವೆ ಎಂದರು. ಅಂತೆಯೇ, ಆಪರೇಷನ್‌ ಸಿಂದೂರ ಇನ್ನೂ ಮುಗಿಯದ ಕಾರಣ ಆ ಕುರಿತು ಸಂಪೂರ್ಣ ವಿವರಿಸಲಾಗದು. ಆದ್ದಿರಂದಲೇ ಸೇನಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿಲ್ಲ ಎಂದು ಹೇಳಿದರು. ಸರ್ಕಾರ ಹಾಗೂ ಸೇನೆಯೊಂದಿಗೆ ಇಡೀ ದೇಶವೇ ನಿಂತಿದೆ’ ಎಂದರು.

Operation Sindoor: ನಮ್ಮವರ ಹಂತಕರಷ್ಟೇ ಹತ್ಯೆ: ಕೆಂದ್ರ ಸಚಿವ ರಾಜನಾಥ್‌ ಸಿಂಗ್‌

ವಿಪಕ್ಷಗಳಿಂದ ಬೆಂಬಲ: ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ತಾವು ಸರ್ಕಾರದೊಂದಿಗೆ ನಿಲ್ಲುವ ಭರವಸೆ ನೀಡಿದರು. ‘ಸರ್ಕಾರ ಸಾಧ್ಯವಿರುವ ಎಲ್ಲಾ ಹೆಜ್ಜೆ ಇಡುವ ಬಗ್ಗೆ ಭರವಸೆ ನೀಡಬೇಕು. ನೀವು ಮುನ್ನಡೆಯಿರಿ. ನಾವು ಸೇನೆಯೊಂದಿಗೆ ನಿಲ್ಲುತ್ತೇವೆ ಮತ್ತು ನಿಮ್ಮೆಲ್ಲಾ ನಿರ್ಧಾರಗಳನ್ನು ಬೆಂಬಲಿಸುತ್ತೇವೆ’ ಎಂದ ಖರ್ಗೆ, ‘ರಾಹುಲ್‌ ಗಾಂಧಿ ಅವರು ಸಂಸತ್‌ ಸಮಾವೇಶ ಕರೆದು ಈ ಬಗ್ಗೆ ವಿಶ್ವಕ್ಕೇ ಸಂದೇಶ ರವಾನಿಸೋಣ ಎಂದರು. ಇದರಿಂದ ಎಲ್ಲಾ ಸಂಸದರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಒಳ್ಳೆಯ ಸಂದೇಶ ರವಾನಿಸಬಹುದು ಎಂಬುದು ಅವರ ಆಶಯವಾಗಿತ್ತು. ಆದರೆ ಸರ್ಕಾರ ಒಪ್ಪಲಿಲ್ಲ’ ಎಂದರು.

ಇತರ ಪಕ್ಷಗಳ ಬೆಂಬಲ: ಆಪರೇಷನ್‌ ಸಿಂದೂರ್‌ ನಡೆಸಿದ್ದಕ್ಕಾಗಿ ಸೇನೆ ಮತ್ತು ಸರ್ಕಾರವನ್ನು ಬೆಂಬಲಿಸುವುದಾಗಿ ತಿಳಿಸಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ, ‘ಟಿಆರ್‌ಎಫ್‌(ದ ರೆಸಿಸ್ಟನ್ಸ್‌ ಫ್ರಂಟ್‌) ವಿರುದ್ಧ ಅಂತಾರಾಷ್ಟ್ರೀಯ ಅಭಿಯಾನ ನಡೆಸಬೇಕು ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅದನ್ನು ಉಗ್ರಸಂಘಟನೆ ಎಂದು ಘೋಷಿಸಬೇಕು’ ಎಂದರು.

ಬಲೂಚಿ ಬಂಡುಕೋರರ ಅವಳಿ ದಾಳಿಗೆ 14 ಪಾಕ್‌ ಯೋಧರು ಬಲಿ

ಪ್ರಧಾನಿ ಅನುಪಸ್ಥಿತಿಗೆ ಖರ್ಗೆ ಕಿಡಿ: ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರ ಅನುಪಸ್ಥಿತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಖರ್ಗೆ, ‘ಸಭೆಯಲ್ಲಿ ಪಿಎಂ ಕೂಡ ಭಾಗವಹಿಸಿ ಕಾರ್ಯಾಚರಣೆಯ ಬಗ್ಗೆ ವಿವರಿಸಬೇಕೆಂದು ನಾವು ಬಯಸಿದ್ದರು. ಆದರೆ ಅವರು ಕಳೆದ ಬಾರಿಯಂತೆ ಸಭೆಗೆ ಬರಲೇ ಇಲ್ಲ’ ಎಂದರು. ಸಭೆಯಲ್ಲಿ ಸರ್ಕಾರದ ಪರವಾಗಿ ಸಚಿವರಾದ ಅಮಿತ್‌ ಶಾ, ಎಸ್‌. ಜೈಶಂಕರ್‌, ಜೆ.ಪಿ. ನಡ್ಡಾ, ನಿರ್ಮಲಾ ಸೀತಾರಾಮನ್‌ ಉಪಸ್ಥಿತರಿದ್ದರು.