ದೇಶದಲ್ಲಿ ತ್ರಿಭಾಷಾ ಸೂತ್ರ ಕಾನೂನು ಅಳವಡಿಕೆ ಬಗ್ಗೆ ಪರ- ವಿರೋಧದ ಬಗ್ಗೆ ಚರ್ಚೆಯಾಗುತ್ತಿರುವ ನಡುವೆಯೇ ಕರ್ನಾಟಕದ ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ನವದೆಹಲಿ (ಮಾ.13): ದೇಶದಲ್ಲಿ ತ್ರಿಭಾಷಾ ಸೂತ್ರ ಕಾನೂನು ಅಳವಡಿಕೆ ಬಗ್ಗೆ ಪರ- ವಿರೋಧದ ಬಗ್ಗೆ ಚರ್ಚೆಯಾಗುತ್ತಿರುವ ನಡುವೆಯೇ ಕರ್ನಾಟಕದ ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ‘ಒಬ್ಬರು ಹಲವು ಭಾಷೆಗಳನ್ನು ಕಲಿಯಬೇಕು’ ಎಂದಿದ್ದಾರೆ. ಬುಧವಾರ ಸಂಸತ್ತಿನ ಹೊರಗೆ ಸುದ್ದಿಗಾರರ ಜತೆ ಮಾತನಾಡಿದ ಸುಧಾ ಮೂರ್ತಿ, ‘ಒಬ್ಬರು ಬಹು ಭಾಷೆಗಳನ್ನು ಕಲಿಯಬೇಕು ಎಂಬುದು ನನ್ನ ನಿಲುವು. ನನಗೂ 7-8 ಭಾಷೆಗಳು ಗೊತ್ತು. ನಾನು ಕಲಿಯುವುದನ್ನು ಖುಷಿ ಪಡುತ್ತೇನೆ. ತ್ರಿಭಾಷಾ ಸೂತ್ರದಿಂದ ವಿದ್ಯಾರ್ಥಿಗಳು ಕೂಡ ಸಾಕಷ್ಟು ಕಲಿಯಬಹುದು’ ಎಂದರು. ತಮಿಳುನಾಡು ಸೇರಿ ಹಲವು ಭಾಷೆಗಳಲ್ಲಿ ಹಿಂದಿ ಹೇರಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದು, ದ್ವಿಭಾಷಾ ಸೂತ್ರಕ್ಕೆ ಕೂಗು ಕೇಳಿಬಂದಿದೆ. ಅದರ ನಡುವೆಯೇ ಸುಧಾ ಈ ಹೇಳಿಕೆ ನೀಡಿದ್ದಾರೆ.
ಲೋಕಸಭೆಯಲ್ಲಿ ಎನ್‌ಇಪಿ, ಹಿಂದಿ ಹೇರಿಕೆ ಮಾರ್ದನಿ: ಸಂಸತ್ ಅಧಿವೇಶನದ 2ನೇ ಚರಣ ಆರಂಭವಾದ ಮೊದಲ ದಿನವೇ ತಮಿಳುನಾಡು ಹಾಗು ಕೇಂದ್ರ ಸರ್ಕಾರದ ನಡುವೆ ನಡೆಯುತ್ತಿದ್ದ ‘ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಹೇರಿಕೆ ವಿವಾದ’ ಹಾಗೂ ‘ಹಿಂದಿ ಭಾಷಾ ಹೇರಿಕೆ ವಿವಾದ’ ಲೋಕಸಭೆಯಲ್ಲಿ ಮಾರ್ದನಿಸಿದೆ. ‘ಡಿಎಂಕೆಯವರು ಅಪ್ರಮಾಣಿಕರು. ಅನಾಗರಿಕರು. ಈ ಹಿಂದೆ ಒಪ್ಪಿದ್ದ ಅವರು ಈಗ ಯೂ-ಟರ್ನ್ ಹೊಡೆದು ಕೇವಲ ರಾಜಕೀಯ ಉದ್ದೇಶಕ್ಕೋಸ್ಕರ ಅವರು ತಮಿಳ್ನಾಡಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿ ಮಾಡುತ್ತಿಲ್ಲ ಹಾಗೂ ಕೇಂದ್ರದ ‘ಪಿಎಂ ಶ್ರೀ’ ಶಾಲೆಗಳನ್ನು ಆರಂಭಿಸುತ್ತಿಲ್ಲ’ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸದನದಲ್ಲಿ ಮಾಡಿದ ಆರೋಪವು ಭಾರಿ ವಾಕ್ಸಮರಕ್ಕೆ ನಾಂದಿ ಹಾಡಿದೆ.
ಈ ಹೇಳಿಕೆ ಖಂಡಿಸಿ ಡಿಎಂಕೆ ಸಂಸದರು ಪ್ರತಿಭಟನೆ ಆರಂಭಿಸಿದ ಕಾರಣ ಲೋಕಸಭೆ ಕಲಾಪ ಪದೇ ಪದೇ ಮುಂದೂಡಿಕೆ ಆಗಿದೆ. ಸದನದಲ್ಲಿ ಪಿಎಂ ಶ್ರೀ ಶಾಲೆಗಳ ಬಗ್ಗೆ ಮಾತನಾಡಿದ ಪ್ರಧಾನ್, ‘ಈ ಮುನ್ನ ಡಿಎಂಕೆಯವರು ಪಿಎಂ ಶ್ರೀ ಯೋಜನೆಯನ್ನು ಜಾರಿ ಮಾಡುವುದಾಗಿ ಹೇಳಿದ್ದರು. ಕರ್ನಾಟಕ ಸೇರಿ ವಿವಿಧ ರಾಜ್ಯಗಳ ಜತೆಗೂಡಿ ಯೋಜನೆಗೆ ಸಹಿ ಹಾಕುವುದಾಗಿ ಹೇಳಿದ್ದರು. ಸಿಎಂ ಸ್ಟಾಲಿನ್ ಕೂಡ ಮೊದಲು ಒಪ್ಪಿದ್ದರು. ಆದರೆ ನಂತರ ‘ಸೂಪರ್ ಸಿಎಂ’ (ಬಹುಶಃ ಸ್ಟಾಲಿನ್ ಪುತ್ರ, ಡಿಸಿಎಂ ಉದಯನಿಧಿ ಮಾರನ್) ಪ್ರವೇಶದ ಬಳಿಕ ಯೂ ಟರ್ನ್ (ಉಲ್ಟಾ) ಹೊಡೆದರು’ ಎಂದು ಆರೋಪಿಸಿದರು.
ಈಗ ಮಾತ್ರವಲ್ಲ, ಮುಂದಿನ ಅವಧಿಗೂ ನಾನೇ ಮುಖ್ಯಮಂತ್ರಿ ಆಗಿರ್ತೇನೆ: ಸಿದ್ದರಾಮಯ್ಯ
‘ಅವರು (ಡಿಎಂಕೆ) ಅಪ್ರಾಮಾಣಿಕರಾಗಿದ್ದಾರೆ. ಅನಾಗರಿಕರಂತೆ ವರ್ತಿಸುತ್ತಿದ್ದಾರೆ. ಅವರು ತಮಿಳುನಾಡು ವಿದ್ಯಾರ್ಥಿಗಳ ಬಗ್ಗೆ ಬದ್ಧರಾಗಿಲ್ಲ. ಅವರು ತಮಿಳುನಾಡು ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ. ಅವರ ಏಕೈಕ ಕೆಲಸ ಭಾಷಾ ಅಡೆತಡೆಗಳನ್ನು ಹುಟ್ಟುಹಾಕುವುದು. ಅವರು ರಾಜಕೀಯ ಮಾಡುತ್ತಿದ್ದಾರೆ.. ಕಿಡಿಗೇಡಿತನ ಮಾಡುತ್ತಿದ್ದಾರೆ. ಅವರು ಪ್ರಜಾಪ್ರಭುತ್ವ ವಿರೋಧಿಗಳು’ ಎಂದು ಪ್ರಧಾನ್ ಆಕ್ರೋಶ ವ್ಯಕ್ತಪಡಿಸಿದರು.
