‘ದೇಶಾದ್ಯಂತ 54,000 ಕೋಟಿ ರು.ಗಳಿಗೂ ಅಧಿಕ ಮೊತ್ತವನ್ನು ಡಿಜಿಟಲ್‌ ವಂಚನೆ ಮೂಲಕ ದೋಚಲಾಗಿದೆ. ಇದು ಸಂಪೂರ್ಣ ದರೋಡೆ ಅಥವಾ ಡಕಾಯಿತಿ’ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಗರಂ ಆಗಿದೆ.

ನವದೆಹಲಿ : ‘ದೇಶಾದ್ಯಂತ 54,000 ಕೋಟಿ ರು.ಗಳಿಗೂ ಅಧಿಕ ಮೊತ್ತವನ್ನು ಡಿಜಿಟಲ್‌ ವಂಚನೆ ಮೂಲಕ ದೋಚಲಾಗಿದೆ. ಇದು ಸಂಪೂರ್ಣ ದರೋಡೆ ಅಥವಾ ಡಕಾಯಿತಿ’ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಗರಂ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಆರ್‌ಬಿಐ, ಬ್ಯಾಂಕ್‌ಗಳು ಮತ್ತು ದೂರಸಂಪರ್ಕ ಇಲಾಖೆಯಂತಹ ಪಾಲುದಾರರ ಜೊತೆ ಸಮಾಲೋಚನೆ ನಡೆಸಿ ನಿರ್ದಿಷ್ಟ ಕಾರ್ಯಾಚರಣಾ ವಿಧಾನವನ್ನು (ಎಸ್‌ಒಪಿ) ರೂಪಿಸಬೇಕೆಂದು ಆದೇಶಿಸಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ಎನ್‌.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು, ಡಿಜಿಟಲ್ ವಂಚನೆಯಿಂದ ದೋಚಲಾದ ಮೊತ್ತವು ಅನೇಕ ಚಿಕ್ಕ ರಾಜ್ಯಗಳ ಬಜೆಟ್‌ಗಿಂತ ಹೆಚ್ಚು ಎಂದು ಆಘಾತ ವ್ಯಕ್ತಪಡಿಸಿತು. ‘ಈ ಅಪರಾಧಗಳು ಬ್ಯಾಂಕ್ ಅಧಿಕಾರಿಗಳ ಸಹಕಾರ ಅಥವಾ ನಿರ್ಲಕ್ಷ್ಯದಿಂದ ಉಂಟಾಗಬಹುದು. ಆರ್‌ಬಿಐ ಮತ್ತು ಬ್ಯಾಂಕ್‌ಗಳು ಸಕಾಲಿಕ ಕ್ರಮ ಕೈಗೊಳ್ಳಬೇಕು.

4 ವಾರಗಳಲ್ಲಿ ಕರಡು ತಿಳಿವಳಿಕೆ ಪತ್ರ ರೂಪಿಸಬೇಕು

ಗೃಹ ಸಚಿವಾಲಯವು ಆರ್‌ಬಿಐ ಮತ್ತು ದೂರಸಂಪರ್ಕ ಇಲಾಖೆಯ ಎಸ್‌ಒಪಿಯನ್ನು ಪರಿಗಣಿಸಿ, ಇವುಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು 4 ವಾರಗಳಲ್ಲಿ ಕರಡು ತಿಳಿವಳಿಕೆ ಪತ್ರ (ಎಂಒಯು) ರೂಪಿಸಬೇಕು’ ಎಂದು ಸೂಚಿಸಿತು.ಜತೆಗೆ, ಡಿಜಿಟಲ್‌ ಅರೆಸ್ಟ್ ಪ್ರಕರಣಗಳ ಮೇಲೆ ಕಣ್ಣಿಡುವಂತೆ ಕೇಂದ್ರೀಯ ತನಿಖಾ ಸಂಸ್ಥೆಗೆ (ಸಿಬಿಐ) ಸೂಚಿಸಿದ ಪೀಠ, ‘ಗುಜರಾತ್ ಮತ್ತು ದೆಹಲಿ ಸರ್ಕಾರಗಳು ಡಿಜಿಟಲ್ ಅರೆಸ್ಟ್ ಪ್ರಕರಣಗಳ ತನಿಖೆ ಮುಂದುವರಿಸಲು ಸಿಬಿಐಗೆ ಅನುಮತಿ ನೀಡಬೇಕು. ಇಂಥ ಪ್ರಕರಣಗಳಲ್ಲಿ ಪರಿಹಾರ ಒದಗಿಸುವ ನಿಯಮ ರೂಪಿಸಲು ಆರ್‌ಬಿಐ, ದೂರಸಂಪರ್ಕ ಇಲಾಖೆ ಮತ್ತು ಇತರರು ಒಟ್ಟಾಗಿ ಸಭೆ ನಡೆಸಬೇಕು. ಡಿಜಿಟಲ್ ಅರೆಸ್ಟ್ ಬಲಿಪಶುಗಳಿಗೆ ಪರಿಹಾರ ನೀಡುವ ವಿಷಯದಲ್ಲಿ ಪ್ರಾಯೋಗಿಕ ಮತ್ತು ಉದಾರ ವಿಧಾನ ಅಗತ್ಯ’ ಎಂದು ಅಭಿಪ್ರಾಯಪಟ್ಟಿತು.

ಕನಿಷ್ಠ ಬ್ಯಾಲೆನ್ಸ್‌ ಇರದ ಖಾತೆಗಳಿಂದ ₹ 8,000 ಕೋಟಿ ವಸೂಲಿ

ನವದೆಹಲಿ: ಬ್ಯಾಂಕ್‌ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್‌ ಕಾಯ್ದುಕೊಳ್ಳದ್ದಕ್ಕೆ ದೇಶದ 12 ಸಾರ್ವಜನಿಕ ವಲಯ ಬ್ಯಾಂಕುಗಳು ಗ್ರಾಹಕರಿಂದ ಕಳೆದ 3 ವರ್ಷದಲ್ಲಿ ಬರೋಬ್ಬರಿ 8000 ಕೋಟಿ ರು. ಶುಲ್ಕ ವಸೂಲಿ ಮಾಡಿವೆ.

ವಸೂಲಿಯಲ್ಲಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಮೊದಲ ಸ್ಥಾನದಲ್ಲಿದ್ದು 1500 ಕೋಟಿ ರು. ವಸೂಲು ಮಾಡಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಅಂಕಿ ಅಂಶ ನೀಡಿದೆ.ಬ್ಯಾಂಕ್‌ ಆಫ್ ಬರೋಡಾ 1272 ಕೋಟಿ ರು. , ಇಂಡಿಯನ್‌ ಬ್ಯಾಂಕ್‌ ಶೇ.1166 ಕೋಟಿ ರು. , ಕೆನರಾ ಬ್ಯಾಂಕ್‌ 1027 ಕೋಟಿ ರು. , ಎಸ್‌ಬಿಐ 932 ಕೋಟಿ ರು.ಗಳಷ್ಟು ಶುಲ್ಕ ವಸೂಲಿ ಮಾಡಿವೆ . ಎಸ್‌ಬಿಐ ಹೊರತುಪಡಿಸಿ ಎಲ್ಲಾ ಬ್ಯಾಂಕುಗಳು ಒಟ್ಟಾರೆ 3388 ಕೋಟಿ ರು. ಹಣವನ್ನು 3 ವರ್ಷದಲ್ಲಿ ಎಸ್‌ಎಂಎಸ್‌ ಸೌಲಭ್ಯಕ್ಕಾಗಿ ವಿಧಿಸಿವೆ.