ಪರಭಾಣಿಯ ನೂತನ ಮೇಯರ್ ಆಗಿ ಸೈಯದ್ ಇಕ್ಬಾಲ್ ಆಯ್ಕೆಯಾಗಿದ್ದನ್ನು ಬಿಜೆಪಿ ದೊಡ್ಡ ವಿಷಯ ಮಾಡುತ್ತಿರುವುದಕ್ಕೆ ಶಿವಸೇನೆ (ಯುಬಿಟಿ) ಮುಖವಾಣಿ 'ಸಾಮ್ನಾ' ಕಿಡಿಕಾರಿದೆ. ಇದು ಬಿಜೆಪಿಯ ಇಬ್ಬಗೆ ನೀತಿ ಎಂದು ಆರೋಪಿಸಿದೆ.

ಮುಂಬೈ: ಮಹಾರಾಷ್ಟ್ರದ ಪರಭಾಣಿ ಮಹಾನಗರ ಪಾಲಿಕೆಗೆ ಶಿವಸೇನೆ (ಯುಬಿಟಿ)ಯ ಮುಸ್ಲಿಂ ಕಾರ್ಪೊರೇಟರ್ ಮೇಯರ್ ಆಗಿ ಆಯ್ಕೆಯಾದ ಬೆನ್ನಲ್ಲೇ, ಇದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿರುವ ಬಿಜೆಪಿಯ ವಿರುದ್ಧ ಶಿವಸೇನೆ ಮುಖವಾಣಿ 'ಸಾಮ್ನಾ' ಕಿಡಿಕಾರಿದೆ. ಇದು ಬಿಜೆಪಿಯ ಇಬ್ಬಗೆ ನೀತಿ ಮತ್ತು ಬುದ್ಧಿಮತ್ತೆಯ ವೈಫಲ್ಯ ಎಂದು ಶನಿವಾರದ ಸಂಪಾದಕೀಯದಲ್ಲಿ ತೀಕ್ಷ್ಣವಾಗಿ ಟೀಕಿಸಲಾಗಿದೆ.

ಚುನಾವಣಾ ಫಲಿತಾಂಶ: ಬಿಜೆಪಿಗೆ ಮುಖಭಂಗ, ಇಕ್ಬಾಲ್‌ಗೆ ಐತಿಹಾಸಿಕ ಜಯ

ಶಿವಸೇನೆ (ಯುಬಿಟಿ) ಪಕ್ಷದ ಸೈಯದ್ ಇಕ್ಬಾಲ್ ಅವರು ಗುರುವಾರ ಪರಭಾಣಿಯ ನೂತನ ಮೇಯರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಶಿವಸೇನೆ ಇತಿಹಾಸದಲ್ಲೇ ಮೇಯರ್ ಪಟ್ಟ ಅಲಂಕರಿಸಿದ ಮೊದಲ ಮುಸ್ಲಿಂ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಇಕ್ಬಾಲ್ ಪಾತ್ರರಾಗಿದ್ದಾರೆ. ಕಾಂಗ್ರೆಸ್ ಬೆಂಬಲದೊಂದಿಗೆ ನಡೆದ ಈ ಚುನಾವಣೆಯಲ್ಲಿ ಇಕ್ಬಾಲ್ 39 ಮತಗಳನ್ನು ಪಡೆಯುವ ಮೂಲಕ, ಬಿಜೆಪಿಯ ಅಭ್ಯರ್ಥಿ ತಿರುಮಲ ಖಿಲ್ಲಾರೆ (13 ಮತಗಳು) ಅವರನ್ನು ಭಾರಿ ಅಂತರದಿಂದ ಸೋಲಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್‌ನ ಗಣೇಶ್ ದೇಶಮುಖ್ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ನಿಮ್ಮ ಮನೆ ದೋಸೆ ತೂತು;ಬಿಜೆಪಿಗೆ ಸಾಮ್ನಾ ಚಾಟಿ

ಪರಭಾಣಿಯಲ್ಲಿ ಮುಸ್ಲಿಂ ವ್ಯಕ್ತಿ ಮೇಯರ್ ಆಗಿದ್ದನ್ನೇ ದೊಡ್ಡ ಅಪರಾಧ ಎಂಬಂತೆ ಬಿಂಬಿಸುತ್ತಿರುವ ಬಿಜೆಪಿಯ ನಿಲುವನ್ನು 'ಸಾಮ್ನಾ' ವ್ಯಂಗ್ಯವಾಡಿದೆ. 'ರಾಜ್ಯದ ನೈಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ಈ ತಂತ್ರ ಹೂಡುತ್ತಿದೆ. ಪರಭಾಣಿಯಲ್ಲಿ 'ಖಾನ್'ರನ್ನು ಸ್ಥಾಪಿಸಿದ್ದೇವೆ ಎಂದು ಅವರು ಕೂಗಾಡುತ್ತಿದ್ದಾರೆ. ಆದರೆ, ತಮ್ಮ ಮನೆ ದೋಸೆ ತೂತು ಅಂತ ನೋಡದೆ, ಅಕ್ಕಪಕ್ಕದವರ ಮನೆ ದೋಸೆ ತೂತು ಎಂದು ಹುಡುಕುವ ಕೆಲಸ ಮಾಡುತ್ತಿದ್ದಾರೆ' ಎಂದು ಸಂಪಾದಕೀಯದಲ್ಲಿ ಲೇವಡಿ ಮಾಡಲಾಗಿದೆ.

RSS ಶತಮಾನೋತ್ಸವ ಮತ್ತು ಮೋಹನ್ ಭಾಗವತ್ ನಿಲುವು ಉಲ್ಲೇಖ

ಬಿಜೆಪಿಯ ಧರ್ಮ ರಾಜಕಾರಣವನ್ನು ಪ್ರಶ್ನಿಸಿರುವ ಸಾಮ್ನಾ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗಳನ್ನು ನೆನಪಿಸಿದೆ. 'ದೇಶದ ಸಂಸ್ಕೃತಿ ಮತ್ತು ಪದ್ಧತಿಯನ್ನು ಅಪ್ಪಿಕೊಳ್ಳುವ ಮುಸ್ಲಿಮರು ನಮ್ಮವರೇ ಎಂದು ಭಾಗವತ್ ಹೇಳುತ್ತಾರೆ. ಆರ್‌ಎಸ್‌ಎಸ್ ವೇದಿಕೆಯಲ್ಲಿ ಮುಸ್ಲಿಂ ಗಣ್ಯರನ್ನು ಕೂರಿಸುವುದು ಸರಿಯಾದ ಮೇಲೆ, ಮರಾಠಿ ಮಾತನಾಡುವ ದೇಶಭಕ್ತ ಶಿವಸೈನಿಕ ಇಕ್ಬಾಲ್ ಮೇಯರ್ ಆದರೆ ಬಿಜೆಪಿಗೆ ಯಾಕೆ ಹೊಟ್ಟೆ ಉರಿ? ಎಂದು ಪ್ರಶ್ನಿಸಿದೆ. ಅಲ್ಲದೆ, ಅದ್ನಾನ್ ಸಾಮಿ ಅವರಿಗೆ ನೀಡಿದ ಪ್ರಾಮುಖ್ಯತೆಯನ್ನು ಉಲ್ಲೇಖಿಸಿ ಬಿಜೆಪಿಯ ಮೌಲ್ಯಗಳನ್ನು ಪ್ರಶ್ನಿಸಲಾಗಿದೆ.

ಹಿಂದುತ್ವವು ಬಿಜೆಪಿಗೆ ಕೇವಲ 'ರಾಜಕೀಯ ವ್ಯವಹಾರ'

ಬಿಜೆಪಿ ಹಿಂದುತ್ವವನ್ನು ಕೇವಲ ಚುನಾವಣಾ ಲಾಭದ ವ್ಯವಹಾರವನ್ನಾಗಿ ಮಾಡಿಕೊಂಡಿದೆ ಎಂದು ಶಿವಸೇನೆ ಆರೋಪಿಸಿದೆ. 'ಮೋದಿ ಎಂಬ ದೇವರನ್ನು ಪೂಜಿಸುವ ಹಿಂದೂಗಳು ಮಾತ್ರ ಸುರಕ್ಷಿತ ಎಂಬಂತೆ ಬಿಜೆಪಿ ಬಿಂಬಿಸುತ್ತಿದೆ. ತಮಗೆ ಬೇಕಾದಾಗ ಮುಸ್ಲಿಂ ಅಧಿಕಾರಿಗಳನ್ನು (ಕರ್ನಲ್ ಸೋಫಿಯಾ ಖುರೇಷಿ ಉದಾಹರಣೆ) ಮುಂದೆ ತಂದು ಪ್ರಚಾರ ಪಡೆಯುವ ಬಿಜೆಪಿ, ಅಧಿಕಾರ ಇಲ್ಲದಿದ್ದಾಗ ಅವರನ್ನೇ ದೇಶದ್ರೋಹಿಗಳಂತೆ ಚಿತ್ರಿಸುತ್ತದೆ ಎಂದು ಸಂಪಾದಕೀಯದಲ್ಲಿ ಕಿಡಿಕಾರಲಾಗಿದೆ.

ಇಬ್ಬಗೆ ನೀತಿಯ ವಿರುದ್ಧ ಆಕ್ರೋಶ

ದೇಶದ ಉನ್ನತ ಹುದ್ದೆಗಳಾದ ರಾಷ್ಟ್ರಪತಿ, ರಾಜ್ಯಪಾಲ ಸ್ಥಾನಗಳಿಗೆ ಮುಸ್ಲಿಮರನ್ನು ನೇಮಿಸಿದಾಗ ಹೆಮ್ಮೆ ಪಡುವ ಬಿಜೆಪಿ, ಪರಭಾಣಿಯ ಸಾಮಾನ್ಯ ಮುಸ್ಲಿಂ ಕಾರ್ಯಕರ್ತ ಅಧಿಕಾರಕ್ಕೆ ಬಂದಾಗ ಅದನ್ನು ಹಿಂದೂ-ಮುಸ್ಲಿಂ ಸಂಘರ್ಷವನ್ನಾಗಿ ಬದಲಿಸುತ್ತಿದೆ. ಇದು ಬಿಜೆಪಿಯ ಸಿದ್ಧಾಂತದ ದಿವಾಳಿತನವನ್ನು ತೋರಿಸುತ್ತದೆ ಎಂದು ಸಾಮ್ನಾ ಅಭಿಪ್ರಾಯಪಟ್ಟಿದೆ. 

(ಈ ಸುದ್ದಿಯ ಹೆಡ್‌ಲೈನ್ ಹೊರತುಪಡಿಸಿ, ಉಳಿದ ಭಾಗವನ್ನು ಏಷ್ಯಾನೆಟ್ ನ್ಯೂಸಬಲ್ ಇಂಗ್ಲಿಷ್ ಸಿಬ್ಬಂದಿ ಸಂಪಾದಿಸಿಲ್ಲ ಮತ್ತು ಸಿಂಡಿಕೇಟೆಡ್ ಫೀಡ್‌ನಿಂದ ಪ್ರಕಟಿಸಲಾಗಿದೆ.)

YouTube video player