ಶಬರಿಮಲೆ ದೇಗುಲವೂ ಸೇರಿ ಕೆಲ ಧಾರ್ಮಿಕ ಸ್ಥಳಗಳಿಗೆ ಮಹಿಳೆಯರ ಪ್ರವೇಶಕ್ಕೆ ನಿರಾಕರಿಸುವಂಥ ತಾರತಮ್ಯ ಕುರಿತ ಅರ್ಜಿಗಳ ಅಂತಿಮ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸೋಮವಾರ ಒಂಬತ್ತು ಮಂದಿ ನ್ಯಾಯಾಧೀಶರ ಸಾಂವಿಧಾನಿಕ ಪೀಠ ರಚಿಸಿ ಆದೇಶಿಸಿದೆ.

ನವದೆಹಲಿ: ಶಬರಿಮಲೆ ದೇಗುಲವೂ ಸೇರಿ ಕೆಲ ಧಾರ್ಮಿಕ ಸ್ಥಳಗಳಿಗೆ ಮಹಿಳೆಯರ ಪ್ರವೇಶಕ್ಕೆ ನಿರಾಕರಿಸುವಂಥ ತಾರತಮ್ಯ ಕುರಿತ ಅರ್ಜಿಗಳ ಅಂತಿಮ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸೋಮವಾರ ಒಂಬತ್ತು ಮಂದಿ ನ್ಯಾಯಾಧೀಶರ ಸಾಂವಿಧಾನಿಕ ಪೀಠ ರಚಿಸಿ ಆದೇಶಿಸಿದೆ.

ಸಾಂವಿಧಾನಿಕ ಪೀಠವು ಏ.7ರಿಂದ ಈ ಅರ್ಜಿಗಳ ವಿಚಾರಣೆ ಆರಂಭಿಸಿ ಏ.22ರೊಳಗೆ ಮುಕ್ತಾಯಗೊಳಿಸಲಿದೆ. ಪುನರ್‌ ಪರಿಶೀಲನೆಯನ್ನು ಬೆಂಬಲಿಸುವವರ ಅರ್ಜಿ ಏ.7ರಿಂದ ಏ.9ರ ನಡುವೆ ವಿಚಾರಣೆಗೆ ಬರಲಿದೆ. ಆ ಬಳಿಕ ಏ.14ರಿಂದ ಏ.16ರ ವರೆಗೆ ತೀರ್ಪಿನ ಪುನರ್‌ ಪರಿಶೀಲನಾ ಅರ್ಜಿಗಳ ವಿಚಾರಣೆ ನಡೆಸಲಾಗುವುದು. ಪ್ರತ್ಯುತ್ತರ ಸಲ್ಲಿಸಲು ಏ.21ರಂದು ಅವಕಾಶ ಸಲ್ಲಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಮತ್ತು ನ್ಯಾ. ಜೋಯ್‌ಮಲ್ಯಾ ಬಗಾಚಿ, ನ್ಯಾ.ವಿಪುಲ್‌ ಎಂ. ಪಾಂಚೋಲಿ ಅವರಿದ್ದ ತ್ರಿಸದಸ್ಯ ಪೀಠವು ಹೇಳಿದೆ.

2018ರಲ್ಲಿ ಅನುಮತಿ ನೀಡಿ ತೀರ್ಪು:

2018ರಲ್ಲಿ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅ‍ವಕಾಶ ನೀಡಿ ಆದೇಶಿಸಿತ್ತು. ಈ ಮೂಲಕ ಶತಮಾನಗಳಿಂದ ಪಾಲಿಸಿಕೊಂಡು ಬಂದಿದ್ದ 10 ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ ವಿಧಿಸಿದ್ದ ನಿರ್ಬಂಧವನ್ನು ರದ್ದು ಮಾಡಿತ್ತು.

ವಿರೋಧ:

ಸಾಂವಿಧಾನಿಕ ಪೀಠ ರಚನೆ ಬೆನ್ನಲ್ಲೇ, ಶಬರಿಮಲೆಗೆ ಮಹಿಳೆಯರಿಗೆ ಅನುಮತಿ ನೀಡುವ ವಿಚಾರ ಕುರಿತು ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕೇರಳ ಸರ್ಕಾರ ಹೇಳಿದರೆ, ಮುಟ್ಟಿನ ವಯಸ್ಸಿನ ಮಹಿಳೆಯರು ಯಾವುದೇ ಕಾರಣಕ್ಕೂ ಶಬರಿಮಲೆ ದೇಗುಲಕ್ಕೆ ಪ್ರವೇಶಿಸಬಾರದು. ಮಹಿಳೆಯರ ಪ್ರವೇಶಕ್ಕೆ ಅನುಮತಿಸಿದ್ದ ಸುಪ್ರೀಂ ಕೋರ್ಟ್‌ ತೀರ್ಪನ್ನು ಪುನರ್‌ ಪರಿಶೀಲಿಸಬೇಕು ಎಂದು ಕೇರಳದ 2 ಪ್ರಮುಖ ಹಿಂದೂ ಸಂಘಟನೆಗಳಾದ ಎನ್‌ಎಸ್‌ಎಸ್‌ ಮತ್ತು ಎಸ್‌ಎನ್‌ಡಿಪಿ ಯೋಗಂ ಇದೇ ವೇಳೆ ಆಗ್ರಹಿಸಿವೆ.