ಐ-ಪ್ಯಾಕ್ ಮೇಲಿನ ಇಡಿ ದಾಳಿಯ ವೇಳೆ ಹಸ್ತಕ್ಷೇಪ ಮಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಡೆಯನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿದೆ. ಇದು ಪ್ರಜಾಪ್ರಭುತ್ವಕ್ಕೆ ಬೆದರಿಕೆ ಎಂದು ಬಣ್ಣಿಸಿದೆ.
ನವದೆಹಲಿ (ಏ.22): ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಜಾರಿ ನಿರ್ದೇಶನಾಲಯದ (ED) ತನಿಖೆಯಲ್ಲಿ ಹಸ್ತಕ್ಷೇಪ ಮಾಡಿರುವುದನ್ನು ಸುಪ್ರೀಂ ಕೋರ್ಟ್ ಬುಧವಾರ ತೀವ್ರವಾಗಿ ಖಂಡಿಸಿದೆ. ಐ-ಪ್ಯಾಕ್ (I-PAC) ಸಂಸ್ಥೆಯ ಮೇಲಿನ ದಾಳಿಯ ವೇಳೆ ಮಮತಾ ಬ್ಯಾನರ್ಜಿ ಅವರ ನಡೆ "ಪ್ರಜಾಪ್ರಭುತ್ವಕ್ಕೆ ಬೆದರಿಕೆ" ಎಂದು ನ್ಯಾಯಾಲಯ ಬಣ್ಣಿಸಿದೆ. ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕುಮಾರ್ ಅವರ ಪೀಠವು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. "ಯಾವುದೇ ರಾಜ್ಯದ ಮುಖ್ಯಮಂತ್ರಿ ಇಂತಹ ಕೆಲಸ ಮಾಡಿದರೆ ಅದು ಪ್ರಜಾಪ್ರಭುತ್ವಕ್ಕೆ ದೊಡ್ಡ ಬೆದರಿಕೆ. ಮುಖ್ಯಮಂತ್ರಿಯೊಬ್ಬರು ಹೀಗೆ ಮಾಡುತ್ತಾರೆ ಎಂದು ನಾನು ಎಂದೂ ಕಲ್ಪಿಸಿರಲಿಲ್ಲ' ಎಂದು ಹೇಳಿದ್ದಾರೆ. "ಇದು ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವಿನ ವಿವಾದವಲ್ಲ, ಬದಲಾಗಿ ತನಿಖಾ ಸಂಸ್ಥೆಯ ಕೆಲಸಕ್ಕೆ ಅಡ್ಡಿಪಡಿಸಿದ ಗಂಭೀರ ವಿಚಾರ' ಎಂದಿದೆ.
ಈ ವರ್ಷದ ಜನವರಿ 8 ರಂದು ಕೋಲ್ಕತ್ತಾದ ಗುಲ್ದೌನ್ ಸ್ಟ್ರೀಟ್ನಲ್ಲಿರುವ ಐ-ಪ್ಯಾಕ್ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮತ್ತು ಕಚೇರಿಯ ಮೇಲೆ ಇಡಿ ದಾಳಿ ನಡೆಸಿತ್ತು. ಮಮತಾ ಬ್ಯಾನರ್ಜಿ ಅವರ ರಾಜಕೀಯ ತಂತ್ರ ರೂಪಿಸುವ ಪ್ರತೀಕ್ ಜೈನ್ ನಿವಾಸಕ್ಕೆ ದಾಳಿಯ ಸಮಯದಲ್ಲಿ ಸ್ವತಃ ಮಮತಾ ಬ್ಯಾನರ್ಜಿ ಆಗಮಿಸಿ ಕೆಲವು ಮಹತ್ವದ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದರು ಎಂದು ಇಡಿ ಸುಪ್ರೀಂ ಕೋರ್ಟ್ಗೆ ದೂರು ನೀಡಿತ್ತು.
ಚುನಾವಣೆ ಮಧ್ಯೆಯೇ ಐ-ಪ್ಯಾಕ್ ಕಚೇರಿ ಬಂದ್!
ತೃಣಮೂಲ ಕಾಂಗ್ರೆಸ್ನ (TMC) ಚುನಾವಣಾ ಪ್ರಚಾರದ ಜವಾಬ್ದಾರಿ ಹೊತ್ತಿರುವ ಐ-ಪ್ಯಾಕ್ ಸಂಸ್ಥೆಯ ಕೋಲ್ಕತ್ತಾ ಕಚೇರಿಯನ್ನು ಏಪ್ರಿಲ್ 20 ರಿಂದ ಮುಚ್ಚಲಾಗಿದೆ. ಮೊದಲ ಹಂತದ ಮತದಾನ ಮುಗಿದ ಮರುದಿನವೇ ಈ ನಿರ್ಧಾರ ಹೊರಬಿದ್ದಿದ್ದು, ಸುಮಾರು 1,300 ಉದ್ಯೋಗಿಗಳಿಗೆ ಕೆಲಸಕ್ಕೆ ಹಾಜರಾಗದಂತೆ ಎಚ್ಆರ್ ಸೂಚನೆ ನೀಡಿದೆ. ಏಪ್ರಿಲ್ 23 ರಂದು 152 ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ.
ಟಿಎಂಸಿ ಪಾಲಿಗೆ ಐ-ಪ್ಯಾಕ್ ಏಕೆ ಮುಖ್ಯ?
ಐ-ಪ್ಯಾಕ್ ನಡೆಸಿದ ಸಮೀಕ್ಷೆಯ ಆಧಾರದ ಮೇಲೆ ಟಿಎಂಸಿಯ ಶೇ. 33ರಷ್ಟು ಹಾಲಿ ಶಾಸಕರಿಗೆ ಈ ಬಾರಿ ಟಿಕೆಟ್ ನಿರಾಕರಿಸಲಾಗಿದೆ. ಬಂಗಾಳದ 93,000 ಮತದಾನ ಕೇಂದ್ರಗಳಿಗಾಗಿ ಐ-ಪ್ಯಾಕ್ 1 ಲಕ್ಷ 'ಶ್ಯಾಡೋ ಏಜೆಂಟ್'ಗಳನ್ನು ನಿಯೋಜಿಸಿತ್ತು. ಪ್ರತಿ ಕ್ಷೇತ್ರವನ್ನು ಬಲಿಷ್ಠ, ದುರ್ಬಲ ಮತ್ತು ಕಡಿಮೆ ಅಂತರದ ಕ್ಷೇತ್ರಗಳೆಂದು ವಿಂಗಡಿಸಿ ಚುನಾವಣಾ ತಂತ್ರ ರೂಪಿಸಿದೆ. ಮತದಾರರ ಪಟ್ಟಿಯಿಂದ ಡಿಲೀಟ್ ಆಗಿರುವ ಹೆಸರನ್ನು ಮರು ಸೇರಿಸಲು ಮತ್ತು ಬಿಎಲ್ಒಗಳನ್ನು ಟ್ರ್ಯಾಕ್ ಮಾಡಲು ಈ ತಂಡ ಕೆಲಸ ಮಾಡುತ್ತಿತ್ತು.
2,742 ಕೋಟಿ ರೂಪಾಯಿ ಮನಿ ಲಾಂಡರಿಂಗ್ ಪ್ರಕರಣ
ಐ-ಪ್ಯಾಕ್ ಮತ್ತು ಅದರ ನಿರ್ದೇಶಕ ಪ್ರತೀಕ್ ಜೈನ್ ವಿರುದ್ಧ ಕೋಟ್ಯಂತರ ರೂಪಾಯಿ ಮೊತ್ತದ ಕಲ್ಲಿದ್ದಲು ಕಳ್ಳತನ ಹಗರಣಕ್ಕೆ ಸಂಬಂಧಿಸಿದಂತೆ ಹಣ ವರ್ಗಾವಣೆ (Money Laundering) ಆರೋಪವಿದೆ. ಒಟ್ಟು 2,742 ಕೋಟಿ ರೂ. ಹಣ ವರ್ಗಾವಣೆ ನಡೆದಿದ್ದು, ಅದರಲ್ಲಿ 20 ಕೋಟಿ ರೂ. ಹವಾಲಾ ಮೂಲಕ ಐ-ಪ್ಯಾಕ್ ಸಂಸ್ಥೆಗೆ ವರ್ಗಾಯಿಸಲಾಗಿದೆ ಎಂದು ಇಡಿ ಆರೋಪಿಸಿದೆ. ಸಿಬಿಐ ಈ ಬಗ್ಗೆ 2020ರ ನವೆಂಬರ್ 27ರಂದು ಎಫ್ಐಆರ್ ದಾಖಲಿಸಿತ್ತು, ಮರುದಿನವೇ ಇಡಿ ತನಿಖೆ ಆರಂಭಿಸಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 8, 2026 ರಂದು ಐ-ಪ್ಯಾಕ್ ಕಚೇರಿ ಮೇಲೆ ದಾಳಿ ನಡೆದಿತ್ತು.

