ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಶಿಮ್ಲಾದಲ್ಲಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಧಿಕ ರಕ್ತದೊತ್ತಡದಿಂದಾಗಿ ಚಿಕಿತ್ಸೆ ಪಡೆದ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ. ಪ್ರಿಯಾಂಕಾ ಗಾಂಧಿ ಜೊತೆ ಶಿಮ್ಲಾಕ್ಕೆ ಭೇಟಿ ನೀಡಿದ್ದ ವೇಳೆ ಈ ಘಟನೆ ನಡೆದಿದೆ.
ಶಿಮ್ಲಾ (ಜೂ.8): ಪುತ್ರಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ಅವರ ಶಿಮ್ಲಾದಲ್ಲಿರುವ ಮನೆಗೆ ಬಂದಿದ್ದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಶನಿವಾರ ಹೈ ಬೀಪಿ ಕಾರಣ ದಿಢೀರ್ ಅಸ್ವಸ್ಥರಾಗಿದ್ದು, ಅವರನ್ನು ಕೂಡಲೇ ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರಗೆ (ಜಿಎಂಸಿ) ದಾಖಲಿಸಲಾಗಿದೆ.
ಅವರನ್ನು ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (ಎಕ್ಸರೆ ಮಾದರಿಯ) ಸೇರಿದಂತೆ ವಿವಿಧ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ. ‘ಅಧಿಕ ರಕ್ತದೊತ್ತಡದ ಕಾರಣ ಅವರನ್ನು ದಾಖಲಿಸಲಾಗಿತ್ತು. ನಿಯಮಿತ ತಪಾಸಣೆಯನ್ನು ನಡೆಸಲಾಯಿತು. ಅವರ ಆರೋಗ್ಯ ಸ್ಥಿರವಾಗಿದೆ’ ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ನರೇಶ್ ಚೌಹಾಣ್ ಹೇಳಿದ್ದಾರೆ.
ಸೋಮವಾರ ತಮ್ಮ ಮಗಳು ಪ್ರಿಯಾಂಕಾ ಅವರೊಂದಿಗೆ ಶಿಮ್ಲಾಕ್ಕೆ ವೈಯಕ್ತಿಕ ಪ್ರವಾಸಕ್ಕೆ ಬಂದಿದ್ದರು. ಅವರು ಶಿಮ್ಲಾದ ಹೊರವಲಯದಲ್ಲಿರುವ ಛರಾಬ್ರಾದಲ್ಲಿರುವ ಪ್ರಿಯಾಂಕಾ ಅವರ ಮನೆಯಲ್ಲಿ ತಂಗಿದ್ದಾರೆ.
ಇದೇ ವರ್ಷದ ಫೆಬ್ರವರಿಯಲ್ಲಿಯೂ ಸೋನಿಯಾ ಅವರನ್ನು ದೆಹಲಿಯ ಗಂಗಾರಾಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಯಾವುದೇ ದೊಡ್ಡ ಸಮಸ್ಯೆಯಿಲ್ಲ ಎಂದು ವೈದ್ಯರು ತಿಳಿಸಿದ್ದರು.
ಹಿಮಾಚಲ ಪ್ರದೇಶ ಸಿಎಂ ಸುಖವಿಂದರ್ ಸಿಂಗ್ ಸುಖು ಆಸ್ಪತ್ರೆಗೆ ಆಗಮಿಸಿ ಸೋನಿಯಾ ಅವರ ಆರೋಗ್ಯ ವಿಚಾರಿಸಿದ್ದಾರೆ.


