ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಹೈಕೋರ್ಟ್‌ಗಳಲ್ಲಿ ನಿವೃತ್ತ ನ್ಯಾಯಾಧೀಶರನ್ನು ಮರು ನೇಮಕ ಮಾಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಕ್ರಿಮಿನಲ್ ಕೇಸ್‌ಗಳ ವಿಚಾರಣೆಗಾಗಿ ಪ್ರತಿ ಹೈಕೋರ್ಟ್‌ಗೆ ಗರಿಷ್ಠ 5 ನಿವೃತ್ತ ನ್ಯಾಯಮೂರ್ತಿಗಳನ್ನು ನೇಮಿಸಬಹುದು.

ನವದೆಹಲಿ: ಹೈಕೋರ್ಟ್‌ಗಳ ನಿವೃತ್ತ ನ್ಯಾಯಾಧೀಶರನ್ನು ಮರಳಿ ಹೈಕೋರ್ಟ್‌ಗಳಿಗೆ ನೇಮಕ ಮಾಡಲು ಸುಪ್ರೀಂಕೋರ್ಟ್‌ ಅನುಮತಿ ನೀಡಿದೆ. ದೇಶಾದ್ಯಂತ ಉಚ್ಚ ನ್ಯಾಯಾಲಯಗಳಲ್ಲಿ ಸುಮಾರು 62 ಲಕ್ಷ ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಇರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಒಪ್ಪಿಗೆಯೊಂದಿಗೆ ಸುಪ್ರೀಂಕೋರ್ಟ್‌ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಈ ನಿರ್ಧಾರದ ಅನ್ವಯ, ಕ್ರಿಮಿನಲ್‌ ಕೇಸ್‌ಗಳ ವಿಚಾರಣೆಗಾಗಿ ಪ್ರತಿ ಹೈಕೋರ್ಟ್‌ಗೆ ಗರಿಷ್ಠ 5 ನಿವೃತ್ತ ನ್ಯಾಯಮೂರ್ತಿಗಳ ಮರುನೇಮಕ ಮಾಡಬಹುದಾಗಿದೆ. ನಿವೃತ್ತ ನ್ಯಾಯಮೂರ್ತಿಗಳು ಹೈಕೋರ್ಟ್‌ನ ಹಾಲಿ ವಿಚಾರಣಾ ಪೀಠದ ಭಾಗವಾಗಬಹುದೇ ಹೊರತು ಪೀಠದ ನೇತೃತ್ವ ವಹಿಸುವಂತಿಲ್ಲ. ಅಲ್ಲದೆ, ನಿವೃತ್ತ ನ್ಯಾಯಮೂರ್ತಿಗಳ ಪ್ರಮಾಣವು ಹೈಕೋರ್ಟ್‌ನಲ್ಲಿ ನೇಮಕಕ್ಕೆ ಅನುಮತಿ ಇರುವ ನ್ಯಾಯಮೂರ್ತಿಗಳ ಸಂಖ್ಯೆಯ ಶೇ.10ರಷ್ಟನ್ನು ದಾಟುವಂತಿಲ್ಲ.

ಇದನ್ನೂ ಓದಿ: ನಮ್ಮನ್ನು ಎದುರು ಹಾಕಿಕೊಳ್ಳಬೇಡಿ, ಬೇರೆ ಮಟ್ಠಾಳ ದೇಶವನ್ನು ಹುಡುಕಿಕೊಳ್ಳಿ: ಟ್ರಂಪ್ ಎಚ್ಚರಿಕೆ

ಸಂವಿಧಾನದ 224ಎ ಕಲಂ ಅಡಿ ಇರುವ ಅಧಿಕಾರ ಬಳಸಿಕೊಂಡು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಾಧೀಶರ ಮರುನೇಮಕಕ್ಕೆ ಅನುಮತಿ ನೀಡಿದ್ದು, ಈ ಕಲಂನಡಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ರಾಷ್ಟ್ರಪತಿಗಳ ಒಪ್ಪಿಗೆಯೊಂದಿಗೆ ನಿವೃತ್ತ ನ್ಯಾಯಮೂರ್ತಿಗಳನ್ನು ಮರು ನೇಮಕ ಮಾಡಿಕೊಳ್ಳಬಹುದಾಗಿದೆ.

ಈ ಹಿಂದಿನ ಕೆಲಸಗಳ ಆಧಾರದ ಮೇಲೆ ನಿವೃತ್ತ ನ್ಯಾಯಾಧೀಶರ ಹೆಸರನ್ನು ಹೈಕೋರ್ಟ್‌ನ ಕೊಲಿಜಿಯಂಗಳು ಸುಪ್ರೀಂ ಕೋರ್ಟ್‌ನ ಕೊಲಿಜಿಯಂಗೆ ಶಿಫಾರಸು ಮಾಡಬಹುದು. ಆ ಪಟ್ಟಿಯಲ್ಲಿ ಸೂಕ್ತರನ್ನು ಆಯ್ಕೆ ಮಾಡಿ ಹೈಕೋರ್ಟ್‌ಗೆ ಮರು ನೇಮಕ ಮಾಡಲಾಗುತ್ತದೆ. ಈ ರೀತಿ ನೇಮಕಗೊಂಡ ನಿವೃತ್ತ ನ್ಯಾಯಾಧೀಶರ ಅಧಿಕಾರಾವಧಿ ನಿರ್ದಿಷ್ಟ ಅವಧಿ ಅಥವಾ ನಿರ್ದಿಷ್ಟ ಉದ್ದೇಶ(ನಿರ್ದಿಷ್ಟ ಪ್ರಕರಣಗಳ ಇತ್ಯರ್ಥ)ಕ್ಕೆ ಸೀಮಿತವಾಗಿರಲಿದೆ.

ಇದನ್ನೂ ಓದಿ: ಮೋದಿ ಸರ್ಕಾರ ಹಿಂದೆಗಿಂತ 3 ಪಟ್ಟು ವೇಗದಲ್ಲಿ ಕೆಲಸ : ರಾಷ್ಟ್ರಪತಿ ದ್ರೌಪದಿ ಮುರ್ಮು