ಬಾಡಿಗೆ ಹಣ ಕೇಳಲು ಹೋದ ಮನೆ ಮಾಲಕಿಯನ್ನು ಬಾಡಿಗೆದಾರ ದಂಪತಿ ಕೊಲೆ ಮಾಡಿದ್ದಾರೆ. ನಂತರ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಪರಾರಿಯಾಗಲು ಯತ್ನಿಸುತ್ತಿದ್ದಾಗ, ಮನೆಗೆಲಸದಾಕೆಯ ಸಮಯಪ್ರಜ್ಞೆಯಿಂದಾಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಮಹಾನಗರಿಗಳಲ್ಲಿ ಅಪರಿಚಿತರಿಗೆ ಮನೆ ಬಾಡಿಗೆಗೆ ನೀಡುವಾಗ ಬಹಳ ಎಚ್ಚರಿಕೆ ವಹಿಸಬೇಕು. ಬಾಡಿಗೆಗೆಂದು ಮನೆ ಹುಡುಕಿ ಬಂದವರ ಹೆಸರು ವಿಳಾಸ ಆಧಾರ್‌ಕಾರ್ಡ್ ಎಲ್ಲದರ ಮಾಹಿತಿ ಪಡೆದು ಮನೆ ನೀಡಬೇಕು. ಇಲ್ಲದೇ ಹೋದರೆ ಮನೆ ಬಾಡಿಗೆ ಬಂದವರು ಮನೆ ಮಾಲೀಕರಿಗೆ ಮುಹೂರ್ತವಿಟ್ಟು ಬಿಡಬಹುದು. ಇಂತಹದೊಂದು ಘಟನೆ ಈಗ ರಾಷ್ಟ್ರ ರಾಜಧಾನಿಗೆ ಸಮೀಪ ಇರುವ ಉತ್ತರ ಪ್ರದೇಶಕ್ಕೆ ಸೇರಿದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಮನೆ ಬಾಡಿಗೆ ನೀಡಿ ಎಂದಿದ್ದಕ್ಕೆ ಮನೆ ಬಾಡಿಗೆ ಪಡೆದಿದ್ದ ಜೋಡಿಯೊಂದು ಮನೆ ಮಾಲೀಕರನ್ನೇ ಕೊಂದು ಸೂಟ್‌ಕೇಸ್‌ಗೆ ತುಂಬಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಟುಕ ಜೋಡಿಯನ್ನು ಗಾಜಿಯಾಬಾದ್ ಸಮೀಪ ಪೊಲೀಸರು ಬಂಧಿಸಿದ್ದಾರೆ. 48 ವರ್ಷದ ದೀಪ್ಶಿಕಾ ಶರ್ಮಾ ಕೊಲೆಯಾದ ಮನೆ ಮಾಲಕಿ.ಬಾಡಿಗೆ ಮನೆಯಲ್ಲಿದ್ದ ಸೂಟ್‌ಕೇಸೊಂದರಿಂದ ಅವರ ಶವವನ್ನು ಹೊರತೆಗೆಯಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಅಜಯ್ ಗುಪ್ತ ಹಾಗೂ ಆಕೃತಿ ಗುಪ್ತಾ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಗಾಜಿಯಾಬಾದ್‌ನ ರಾಜ್ ನಗರ ಎಕ್ಸ್‌ಟೆನ್ಶನ್‌ನ ಔರಾ ಚಿಮೆರಾ ಎಂಬ ವಸತಿ ಸಂಕೀರ್ಣದಲ್ಲಿ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಈ ವಸತಿ ಸಂಕೀರ್ಣದಲ್ಲಿ ಉಮೇಶ್ ಶರ್ಮಾ ಹಾಗೂ ದೀಪಿಕಾ ಶರ್ಮಾ ಎಂಬುವವರು ಎರಡು ಫ್ಲಾಟ್‌ಗಳನ್ನು ಹೊಂದಿದ್ದರು. ಒಂದು ಮನೆಯಲ್ಲಿ ಅವರು ವಾಸವಿದ್ದರೆ ಇನ್ನೊಂದು ಮನೆಯನ್ನು ಗುಪ್ತಾ ದಂಪತಿಗೆ ಬಾಡಿಗೆ ಕೊಟ್ಟಿದ್ದರು. ಗುಪ್ತಾ ಟ್ರಾನ್ಸ್‌ಪೋರ್ಟ್‌ಗೆ ಸಂಬಂಧಿಸಿದ ಕೆಲಸ ಮಾಡುತ್ತಿದ್ದ.
ಆದರೆ ಕಳೆದ 4 ತಿಂಗಳಿನಿಂದಲೂ ಈ ಗುಪ್ತ ದಂಪತಿ ಮನೆ ಬಾಡಿಗೆ ಕೊಟ್ಟಿರಲಿಲ್ಲ. ಹೀಗಾಗಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಮನೆ ಮಾಲಕಿ ದೀಪ್ಶಿಕಾ ತನ್ನ ಬಾಡಿಗೆದಾರರನ್ನು ತಡೆದು ಬಾಡಿಗೆ ಹಣ ಕೇಳಬೇಕು ಎಂದು ನಿರ್ಧರಿಸಿದ್ದಾರೆ. ಬುಧವಾರ ಆಕೆ ತಾವು ಬಾಡಿಗೆಗೆಂದು ನೀಡಿದ ಗುಪ್ತಾ ದಂಪತಿಯ ಮನೆಗೆ ಹೋಗಿದ್ದಾರೆ. ಆದರೆ ಆ ಸಮಯದಲ್ಲಿ ದೀಪ್ಶಿಕಾ ಪತಿ ಮನೆಯಲ್ಲಿ ಇರಲಿಲ್ಲ. ಇತ್ತ ದೀಪ್ಷಿಕಾಳ ಮನೆ ಕೆಲಸದಾಕೆ ಮೀನಾ, ಮನೆ ಬಾಡಿಗೆ ಕೇಳುವುದಕ್ಕೆ ಹೋದ ತನ್ನ ಮನೆ ಮಾಲಕಿ ಎಷ್ಟು ಹೊತ್ತಾದರೂ ಮನೆಗೆ ಬಾರದೇ ಹೋದಾಗ ಅನುಮಾನಗೊಂಡು ಹುಡುಕುವುದಕ್ಕೆ ಆರಂಭಿಸಿದ್ದಾರೆ. ಅಲ್ಲದೇ ಗುಪ್ತಾ ದಂಪತಿಯ ಮನೆಗೆ ಹೋಗಿದ್ದಾಳೆ. ಆದರೆ ಅವರ ಉತ್ತರ ಆಕೆಯನ್ನು ಮತ್ತಷ್ಟು ಅನುಮಾನಗೊಳ್ಳುವಂತೆ ಮಾಡಿದೆ.
ಇದನ್ನೂ ಓದಿ: 56 ಸಾವಿರ ಪಾಕಿಸ್ತಾನಿ ಭಿಕ್ಷುಕರನ್ನು ಗಡೀಪಾರು ಮಾಡಿ ಎಚ್ಚರಿಕೆ ನೀಡಿದ ಸೌದಿ ಅರೇಬಿಯಾ
ಹೀಗಾಗಿ ಮನೆ ಕೆಲಸದಾಕೆ ಸೀದಾ ಮನೆಗೆ ಬಂದವಳೇ ಸಿಸಿ ಕ್ಯಾಮರಾವನ್ನು ಚೆಕ್ ಮಾಡಿದ್ದಾಳೆ. ಅದರಲ್ಲಿ ದೀಪ್ಶಿಕಾ, ಗುಪ್ತಾ ದಂಪತಿ ಇದ್ದ ಮನೆಗೆ ಹೋಗಿರುವುದು ಕಂಡು ಬಂದಿದೆ. ಆದರೆ ಆಕೆ ಮನೆಯಿಂದ ಹೊರಗೆ ಬಂದಿಲ್ಲ. ಹೀಗಾಗಿ ಆಕೆ ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದಾರೆ.
ಅಂದಾಜು ಅದೇ ಸಮಯಕ್ಕೆ ಗುಪ್ತಾ ದಂಪತಿ ದೊಡ್ಡದಾದ ಸೂಟ್‌ಕೇಸ್‌ನೊಂದಿಗೆ ಮನೆಯಿಂದ ಹೊರಗೆ ಬರುತ್ತಿರುವುದು ಕಂಡು ಬಂದಿದೆ. ಜೊತೆಗೆ ಅವರು ಆಟೋ ರಿಕ್ಷಾಗೂ ಕರೆ ಮಾಡಿದ್ದಾರೆ. ಆದರೆ ಅವರು ಇನ್ನೂ ಅಲ್ಲಿಂದ ಹೋಗಿರಲಿಲ್ಲ. ಹೀಗಾಗಿ ಮನೆ ಕೆಲಸದಾಕೆ ಮೀನಾ ಅವರನ್ನು ತಡೆದಿದ್ದರಿಂದ ಅವರು ಮತ್ತೆ ಫ್ಲಾಟ್‌ಗೆ ಒತ್ತಾಯಪೂರ್ವಕವಾಗಿ ಬರುವಂತಾಗಿದೆ. ದೀದಿ ಬರುವವರೆಗೂ ನೀವು ಎಲ್ಲಿಗೂ ಹೋಗುವಂತಿಲ್ಲ ಎಂದು ನಾನು ಅವರಿಗೆ ಹೇಳಿದೆ ಎಂದು ಅಳುತ್ತಲೇ ಮನೆ ಕೆಲಸದಾಕೆ ಮೀನಾ ಪೊಲೀಸರಿಗೆ ಹೇಳಿದ್ದಾಳೆ.
ಇದನ್ನೂ ಓದಿ: ರೇಪ್ ಆರೋಪಿ ಜೊತೆ ಸೇರಿಕೊಂಡು ವ್ಯಕ್ತಿ ವಿರುದ್ಧ ಸುಳ್ಳು ರೇಪ್ ಕೇಸ್ ಹಾಕಿದ ಮಹಿಳೆ ಬಂಧನ
ನಂತರ ಪೊಲೀಸರು ಮನೆಗೆ ಬಂದು ಗುಪ್ತಾ ದಂಪತಿ ಇದ್ದ ಬಾಡಿಗೆ ಮನೆಯಲ್ಲಿ ಹುಡುಕಾಟ ನಡೆಸಿದಾಗ ಅವರಿಗೆ ಆಘಾತವಾಗಿದೆ. ದೀಪ್ಶಿಕಾ ಶರ್ಮಾ ಅವರ ಶವ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿದೆ. ಮನೆ ಬಾಡಿಗೆ ಕೇಳಿ ದೀಪ್ಶಿಕಾ ಮನೆಗೆ ಬಂದಾಗ ಬಾಡಿಗೆದಾರ ದಂಪತಿ ಹಾಗೂ ಅವರ ಮಧ್ಯೆ ವಾಗ್ವಾದ ನಡೆದಿದ್ದು, ಬಳಿಕ ಬಾಡಿಗೆದಾರರು ಆಕೆಯನ್ನು ಕೊಲೆ ಮಾಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಮಯದಲ್ಲಿ ಮನೆ ಕೆಲಸದಾಕೆ ನೋಡದೇ ಹೋಗಿದ್ದರೆ ಈ ಇವರು ಆಕೆಯ ಮೃತದೇಹವೂ ಕೂಡ ಕುಟುಂಬಕ್ಕೆ ಸಿಗದಂತೆ ಮಾಡಿ ಬಿಡುತ್ತಿದ್ದರು.
ನಾನು ದೀಪ್ಷಿಕಾಗೆ ಒಬ್ಬರೇ ಅವರ ಮನೆಗೆ ಹೋಗದಂತೆ ಹೇಳಿದೆ. ನಾನು ಜೊತೆಗೆ ಬರುತ್ತೇನೆ ಎಂದು ಹೇಳಿದೆ. ಆದರೆ ಅವರು ಒಬ್ಬರೇ ಹೋದರು ಎಂದು ಮೀನಾ ಹೇಳಿದ್ದಾರೆ. ತನಿಖೆ ನಡೆಸುತ್ತಿರುವ ಪೊಲೀಸರ ಪ್ರಕಾರ, ಆರೋಪಿಗಳು ಮೊದಲಿಗೆ ದೀಪ್ಶಿಕಾ ತಲಗೆ ಫ್ರೆಶರ್ ಕುಕ್ಕರ್‌ನಿಂದ ಹೊಡೆದಿದ್ದಾರೆ ನಂತರ ದುಪ್ಪಟ್ಟದಿಂದ ಉಸಿರುಕಟ್ಟಿಸಿ ಕೊಲೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದೀಪ್ಶಿಕಾ ಶರ್ಮಾ ಅವರ ಕುಟುಂಬದವವರು ದೂರು ನೀಡಿದ್ದು, ಕೇಸು ದಾಖಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಉಪಾಸನಾ ಪಾಂಡೆ ಹೇಳಿದ್ದಾರೆ.


