ತನ್ನ ಪ್ರೇಮ ಸಂಬಂಧವನ್ನು ವಿರೋಧಿಸಿದ್ದಕ್ಕಾಗಿ 17 ವರ್ಷದ ಬಾಲಕಿಯೊಬ್ಬಳು ತನ್ನ ಗೆಳೆಯನೊಂದಿಗೆ ಸೇರಿ ಸ್ವಂತ ತಂದೆಯನ್ನೇ ಕೊಲೆ ಮಾಡಿದ್ದಾಳೆ. ಪೋಷಕರಿಗೆ ನಿದ್ರೆ ಮಾತ್ರೆ ನೀಡಿ, ಅವರು ಗಾಢ ನಿದ್ರೆಗೆ ಜಾರಿದ ನಂತರ, ಈ ಕೃತ್ಯವೆಸಗಲಾಗಿದೆ.

ವಡೋದರಾ: ತನ್ನ ಪ್ರೇಮ ಸಂಬಂಧವನ್ನು ವಿರೋಧಿಸಿ ತನ್ನನ್ನು ಮನೆಯಲ್ಲಿ ಕೂಡಿ ಹಾಕಿದ್ದರಿಂತ ಕುಪಿತಗೊಂಡ 17ರ ಹರೆಯದ ಅಪ್ರಾಪ್ತ ಯುವತಿಯೊಬ್ಬಳು ತನ್ನ ಗೆಳೆಯನ ಜೊತೆ ಸೇರಿ ತನ್ನ ಸ್ವಂತ ತಂದೆಯನ್ನೇ ಕೊಲೆ ಮಾಡಿದ್ದಾಳೆ. ಗುಜರಾತ್‌ನ ವಡೋದರಾದ ಪದ್ರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. 45 ವರ್ಷದ ವ್ಯಕ್ತಿಯ ಕೊಲೆ ಪ್ರಕರಣದ ತನಿಖೆಗೆ ಇಳಿದ ಪೊಲೀಸರಿಗೆ ಈ ಸ್ಫೋಟಕ ಸತ್ಯ ಬಯಲಾಗಿದೆ. ಡಿಸೆಂಬರ್‌ 16ರಿಂದಲೇ ತನ್ನ ಪೋಷಕರ ಕೊಲೆ ಮಾಡುವುದಕ್ಕೆ ಈ ಅಪ್ರಾಪ್ತೆ ಮೂರು ಬಾರಿ ಪ್ರಯತ್ನಿಸಿದ್ದು, ಡಿಸೆಂಬರ್ 18ರಂದು ಆಕೆ ಈ ಕೃತ್ಯದಲ್ಲಿ ಯಶಸ್ವಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೋಷಕರಿಗೆ ಈ ಬಾಲಕಿ ನಿದ್ರೆ ಮಾತ್ರೆ ಹಾಕಿದ್ದು, ಅವರು ಗಾಢನಿದ್ರೆಗೆ ಜಾರಿದ ನಂತರ ಅವಳು ತನ್ನ ಗೆಳೆಯನಿಗೆ ಕರೆ ಮಾಡಿದ್ದಾಳೆ. ಮನೆಗೆ ಬಂದ ಆಕೆಯ ಬಾಯ್‌ಫ್ರೆಂಡ್ ಯುವತಿಯ ತಂದೆಗೆ ಚಾಕುವಿನಿಂದ ಹಲವು ಭಾರಿ ಇರಿದು ಕೊಲೆ ಮಾಡಿದ್ದಾನೆ. ಈ ವೇಳೆ ಆ ಯುವತಿ ತನ್ನನ್ನು ಬಂದಿಸಿಟ್ಟಿದ್ದ ಬೀಗ ಹಾಕಿದ್ದ ಕೋಣೆಯಿಂದ ಈ ಕೃತ್ಯವನ್ನು ಗಮನಿಸುತ್ತಲೇ ಇದ್ದಳು ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಕೊಲೆಯಾದ ವ್ಯಕ್ತಿಯನ್ನು 45 ವರ್ಷದ ಶಾನಾ ಚಾವ್ಡಾ ಎಂದು ಗುರುತಿಸಲಾಗಿದೆ.

ಕೊಲೆ ಮಾಡಿದ ಪ್ರಮುಖ ಆರೋಪಿಯನ್ನು 25 ವರ್ಷದ ರಂಜಿತ್ ವಾಘೇಲಾ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಪೋಸ್ಕೋ ಕಾಯಿದೆಯಡಿ ಪ್ರಕರಣ ದಾಖಲಾಗಿತ್ತು. ಈತ ಈ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ. ಯುವತಿಯ ತಂದೆ ಶಾನಾ ಚಾವ್ಡಾ ನೀಡಿದ ದೂರಿನಡಿ ಆತ ಜೈಲಿಗೆ ಹೋಗಿದ್ದ ಈತ ಜಾಮೀನಿನ ಮೇಲೆ ಹೊರಬಂದಿದ್ದ. ಶುಕ್ರವಾರ ಬೆಳಗ್ಗೆ ಶಾನಾ ಚಾವ್ಡಾ ಕೊಲೆಯಾಗಿ ಪತ್ತೆಯಾದ ನಂತರ ಅವರ ಸೋದರ 50 ವರ್ಷದ ಮೋತಿ ಅವರು ರಂಜಿತ್ ವಾಘೇಲಾ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ರಂಜಿತ್ ವಾಘೇಲಾ ತನ್ನ ಅಪ್ರಾಪ್ತ ಪುತ್ರಿಯ(ಅಣ್ಣನ ಮಗಳು) ಜೊತೆ ಸಂಬಂಧ ಹೊಂದಿದ್ದಾನೆ. ಅವನೇ ಈ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದರು.

ಕಳೆದ ಜುಲೈನಲ್ಲಿ ಹುಡುಗಿ ವಘೇಲಾ ಜೊತೆ ಓಡಿಹೋಗಿದ್ದಳು ಎಂದು ಆಕೆಯ ಚಿಕ್ಕಪ್ಪ ಮೋತಿ ಪೊಲೀಸರಿಗೆ ತಿಳಿಸಿದ್ದರು. ನಂತರ ಶಾನಾ ಅವರು ಆತನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿದರು. ನಂತರ ರಂಜಿತ್ ವಘೇಲಾನನ್ನು ಬಂಧಿಸಲಾಯಿತು ಆದರೆ ನಂತರ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಸುಮಾರು ಹದಿನೈದು ದಿನಗಳ ಹಿಂದೆ ರಂಜಿತ್ ವಘೇಲಾ ತಮ್ಮ ಮಗಳ ಜೊತೆ ಮತ್ತೆ ಸುತ್ತಾಡುವುದನ್ನು ನೋಡಿ, ಶಾನಾ ಚಾವ್ಡಾ ಹಾಗೂ ಆತನಿಗೆ ಜಗಳವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಆಗ ರಂಜಿತ್ ವಘೇಲಾ ತಾನು ಮದುವೆಯಾಗುವುದಾದರೆ ಆ ಹುಡುಗಿಯನ್ನು ಮಾತ್ರ ಮದುವೆಯಾಗುವುದಾಗಿ ಮತ್ತು ಈ ವಿಚಾರದಲ್ಲಿ ಆಕೆಯ ಕುಟುಂಬದವರು ಯಾರಾದರು ಅಡ್ಡಿ ಬಂದರೆ ಅವರನ್ನು ಕೊಲ್ಲುವುದಕ್ಕೂ ಹಿಂಜರಿಯುವುದಿಲ್ಲ ಎಂದ ಆತ ಬೆದರಿಕೆ ಹಾಕಿದ್ದ ಎಂದು ಮೋತಿ ಆರೋಪಿಸಿದ್ದಾರೆ. ಆರಂಭದಲ್ಲಿ ಈ ಬೆದರಿಕೆಯ ಬಗ್ಗೆ ಗಂಭೀರವಾಗಿ ಯೋಚನೆ ಮಾಡದ ಪೊಲೀಸರಿಗೆ ತನಿಖೆ ಮುಂದುವರೆಯುತ್ತಿದ್ದಂತೆ ಶಾನಾ ಅವರ ಮಗಳೇ ಈ ಕೊಲೆಗೆ ಸಂಚು ರೂಪಿಸಿದ್ದು ತಿಳಿದು ಬಂತು.

ಶಾನಾ ಅವರು ರಾತ್ರಿಯಲ್ಲಿ ತನ್ನ ಮಗಳು ಮತ್ತು ಹೆಂಡತಿ ಭಾವನಾಳನ್ನು ಕೋಣೆಯಲ್ಲಿ ಕೂಡಿ ಹಾಕಿ ತಾವು ಹೊರಗೆ ಮಲಗುತ್ತಿದ್ದರು. ವಿಶೇಷವಾಗಿ ಅವರ ಹಿರಿಯ ಮಗಳು ಸಹ ಅವರ ಇಚ್ಛೆಗೆ ವಿರುದ್ಧವಾಗಿ ಬೇರೆ ಮದುವೆಯಾಗಿದ್ದರಿಂದಾಗಿ ಶಾನಾ ಅವರು ತಮ್ಮ ಎರಡನೇ ಪುತ್ರಿಯ ಪ್ರೇಮ ಸಂಬಂಧವನ್ನು ಬಲವಾಗಿ ವಿರೋಧಿಸಿದ್ದರು ಎಂದು ವಡೋದರಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸುಶೀಲ್ ಅಗರ್ವಾಲ್ ಹೇಳಿದ್ದಾರೆ.

ಯುವತಿ ಈ ಹಿಂದೆಯೇ ಎರಡು ಬಾರಿ ನೀರಿನಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿ ತನ್ನ ಹೆತ್ತವರ ಕತೆ ಮುಗಿಸಲು ಪ್ರಯತ್ನಿಸಿದ್ದಳು. ಆದರೆ ಆಕೆಯ ತಾಯಿಗೆ ಅದರ ರುಚಿ ವಿಭಿನ್ನವೆನಿಸಿದ್ದರಿಂದ ಅವರು ಅದನ್ನು ಕುಡಿಯಲಿಲ್ಲ. ಈ ಆರಂಭಿಕ ಯೋಜನೆ ವಿಫಲವಾದ ನಂತರ, ಮಂಗಳವಾರ ರಾತ್ರಿ ಹುಡುಗಿ ಮತ್ತೆ ತನ್ನ ಹೆತ್ತವರ ಆಹಾರದಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿದಳು. ಅವರು ನಿದ್ರೆಯ ಅಮಲಿನಲ್ಲಿ ಇದ್ದಾರೆಯೇ ಎಂದು ಪರಿಶೀಲಿಸಲು ಅವಳು ಶಬ್ದ ಮಾಡಿದಳು ಮತ್ತು ಆಗ ತಾಯಿ ಎಚ್ಚರಗೊಂಡಳು ಹೀಗಾಗಿ ಹುಡುಗಿ ಈ ಯೋಜನೆಯನ್ನು ಕೈಬಿಡುವಂತೆ ತನ್ನ ಗೆಳೆಯನಿಗೆ ಹೇಳಿದಳು. ಡಿಸೆಂಬರ್ 18 ರಂದು ರಾತ್ರಿ ಅವಳು ಮತ್ತೆ ಆಹಾರಕ್ಕೆ ನಿದ್ರೆ ಮಾತ್ರೆ ಬೆರೆಸಿ ವಾಘೇಲಾಗೆ ಕರೆ ಮಾಡಿದಳು.

ಇದನ್ನೂ ಓದಿ: 14 ವರ್ಷಗಳಲ್ಲಿ ಭಾರತೀಯ ಪೌರತ್ವ ತ್ಯಜಿಸಿದವರ ಸಂಖ್ಯೆ ಎಷ್ಟು? ಈ ವಲಸೆಗೆ ಏನು ಕಾರಣ?

ನಂತರ ತನ್ನ ಸ್ನೇಹಿತ ಭವ್ಯ ವಾಸವ(23) ಜೊತೆಗೆ ಬಂದ ರಂಜಿತ್ ವಾಘೇಲಾ ಹುಡುಗಿಯ ತಂದೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಕೊಲೆ ನಡೆದ ಸಮಯದಲ್ಲಿ ಬಾಲಕಿ ಬೀಗ ಹಾಕಿದ ಕೋಣೆಯೊಳಗೆ ಇದ್ದಳು ಮತ್ತು ಕಿಟಕಿಯ ಮೂಲಕ ಹತ್ಯೆಯನ್ನು ನೋಡಿದ್ದಳು, ಆದರೆ ಆಕೆಯ ತಾಯಿ ಅವಳ ಪಕ್ಕದಲ್ಲಿ ಮಲಗಿದ್ದಳು. ನಾವು ವಘೇಲಾ ಮತ್ತು ಭವ್ಯ ವಾಸವ ಅವರನ್ನು ಬಂಧಿಸಿದ್ದೇವೆ. ಆರೋಪಿಗಳು ಇಷ್ಟೊಂದು ದೊಡ್ಡ ಪ್ರಮಾಣದ ನಿದ್ರೆ ಮಾತ್ರೆಗಳನ್ನು ಹೇಗೆ ಪಡೆದರು ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಎಸ್‌ಪಿ ಸುಶೀಲ್ ಅಗರ್ವಾಲ್ ಹೇಳಿದ್ದಾರೆ.

ಇದನ್ನೂ ಓದಿ: ಸೈಕಲ್‌ನಲ್ಲಿ ಓಡಾಡ್ತಿದ್ದ ಯೂಟ್ಯೂಬರ್ ಬಳಿ ಈಗ ಹಲವು ಐಷಾರಾಮಿ ಕಾರು: ದುಬೈನಲ್ಲಿ ಅದ್ದೂರಿ ಮದುವೆ: ಇಡಿ ದಾಳಿ