ಭವಾನಿಪುರದಲ್ಲಿ ತಮ್ಮ ರ್‍ಯಾಲಿ ಸಮೀಪವೇ ಬಿಜೆಪಿ ಸಭೆ ನಡೆಸಿದ್ದಕ್ಕೆ ಕೋಪಗೊಂಡ ಮಮತಾ ಬ್ಯಾನರ್ಜಿ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ ನಿರ್ಗಮಿಸಿದರು. ಈ ಘಟನೆಯು ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗದ್ದಲಕ್ಕೆ ಕಾರಣವಾಯಿತು. 

ಭವಾನಿಪುರ: ತಮ್ಮ ರ್‍ಯಾಲಿ ನಡೆಯುತ್ತಿದ್ದ ಸ್ಥಳದ ಸಮೀಪವೇ ಬಿಜೆಪಿ ಕೂಡ ಸಭೆ ಹಮ್ಮಿಕೊಂಡಿದ್ದ ಕಾರಣ, ಕೋಪಗೊಂಡ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಭಾಷಣವನ್ನು ಅರ್ಧದಲ್ಲೇ ನಿಲ್ಲಿಸಿ ವೇದಿಕೆಯಿಂದ ನಿರ್ಗಮಿಸಿದ ಘಟನೆ ಅವರ ಕ್ಷೇತ್ರವಾಗಿರುವ ಭವಾನಿಪುರದಲ್ಲಿ ಭಾನುವಾರ ನಡೆದಿದೆ.

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರು ಟಿಎಂಸಿ ವೇದಿಕೆಯಿದ್ದ 100 ಮೀ. ದೂರದಲ್ಲಿ ರ್‍ಯಾಲಿ ಆಯೋಜನೆ ಮಾಡಿದ್ದು, ಬೃಹತ್‌ ಧ್ವನಿವರ್ಧಕಗಳನ್ನು ಅಳವಡಿಸಲಾಗಿತ್ತು. ಇದರಿಂದ ಮಮತಾಗೆ ಕಿರಿಕಿರಿಯಾಗಿದ್ದು, ವೇದಿಕೆಯಿಂದ ಇಳಿದು ಹೊರನಡೆದಿದ್ದಾರೆ. ಪರಿಣಾಮ ಟಿಎಂಸಿ ಬೆಂಬಲಿಗರು ಬಿಜೆಪಿ ರ್‍ಯಾಲಿ ನಡೆಯುತ್ತಿದ್ದಲ್ಲಿಗೆ ತೆರಳಿ ಗದ್ದಲ ಎಬ್ಬಿಸಿದ್ದಾರೆ. ಎರಡೂ ಕಡೆಯವರು ಘೋಷಣೆ ಕೂಗತೊಡಗಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಬೇಕಾಯಿತು.

ಸೋಲಿನ ಭಯದಿಂದ ಹೀಗಾಗಿದೆ: ಬಿಜೆಪಿ ಟೀಕೆ

ಗಲಾಟೆ ನಡೆದ ವೇಳೆ ರ್‍ಯಾಲಿಗೆ ಆಗಮಿಸಿರದ ಅಧಿಕಾರಿ ಪ್ರತಿಕ್ರಿಯಿಸಿ, ‘ಮಮತಾರಿಂದಲೇ ಗದ್ದಲ ಸೃಷ್ಟಿಯಾಗಿದೆ. ಈ ಗೂಂಡಾ ಆಡಳಿತಕ್ಕೆ ತಕ್ಕ ಉತ್ತರ ಕೊಡುತ್ತೇವೆ’ ಎಂದು ತಿರುಗೇಟು ನೀಡಿದರು. ಅತ್ತ ಅಮಿತ್‌ ಮಾಳವೀಯ ಮಾತನಾಡಿ, ‘ಪಕ್ಷದ ಸೋಲಿನ ಭಯದಿಂದ ಹೀಗಾಗಿದೆ’ ಎಂದು ವ್ಯಂಗ್ಯವಾಡಿದ್ದಾರೆ.

ಸ್ತ್ರೀಹಂತಕ ಗೂಂಡಾಗಳಿಗೆ ಟಿಎಂಸಿ ರಕ್ಷಣೆ: ಮೋದಿ

‘ಮಹಿಳೆಯರ ಮೇಲೆ ದೌರ್ಜನ್ಯವೆಸಗುವ ಗೂಂಡಾಗಳಿಗೆ ಟಿಎಂಸಿ ರಕ್ಷಣೆ ನೀಡುತ್ತಿದೆ. ಆದರೆ ಬಿಜೆಪಿಯು ಸಂದೇಶಖಾಲಿಯಲ್ಲಿ ದಾಳಿಗೀಡಾಗಿದ್ದ ರೇಖಾ ಪಾತ್ರಾ ಹಾಗೂ ಆರ್‌ಜಿ ಕರ್‌ ಅತ್ಯಾ*ಚಾರ ಸಂತ್ರಸ್ತೆಯ ತಾಯಿ ರತ್ನಾ ದೇಬನಾಥ್‌ಗೆ ಟಿಕೆಟ್‌ ನೀಡಿದೆ. ಇದು ಮಹಿಳೆಯರ ಭದ್ರತೆಯನ್ನು ಖಾತ್ರಿಪಡಿಸುವ ಪಕ್ಷದ ಬದ್ಧತೆಗೆ ಪುರಾವೆಯಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.

ಮತುವಾ ಸಮುದಾಯದ ಭದ್ರಕೋಟೆಯಾಗಿರುವ, ಉತ್ತರ 24 ಪರಗಣ ಜಿಲ್ಲೆಯ ಬಾನ್‌ಗಾಂನ ಠಾಕೂರ್‌ ನಗರದಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ‘ರೇಖಾ ಪಾತ್ರಾ ಮತ್ತು ರತ್ನಾ ದೇಬನಾಥ್‌ ಅವರಿಗೆ ಟಿಕೆಟ್ ನೀಡುವ ಬಿಜೆಪಿ ನಿರ್ಧಾರವು, ಬಂಗಾಳದ ಸ್ತ್ರೀಯರ ಭದ್ರತೆಗೆ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಟಿಎಂಸಿಯ ಕ್ರೂರ ಸರ್ಕಾರವು ಮಹಿಳೆಯರನ್ನು ಹಿಂಸಿಸುವ ಗೂಂಡಾಗಳ ಜೊತೆ ನಿಂತಿದೆ. ನಾವು ಇನ್ನು ಮುಂದೆ ಸಹಿಸುವುದಿಲ್ಲ ಎಂದು ಹೇಳುವ ಸಮಯ ಬಂದಿದೆ. ಮಹಿಳೆಯರ ಮೇಲೆ ಅತ್ಯಾ*ಚಾರ ನಡೆಸುವ ಮತ್ತು ಚಿತ್ರಹಿಂಸೆ ನೀಡುವ ದುಷ್ಕರ್ಮಿಗಳನ್ನು ಮೇ 4ರ ನಂತರ (ಚುನಾವಣಾ ಫಲಿತಾಂಶದ ದಿನ) ಬಂಗಾಳದ ಹೊಸ ಬಿಜೆಪಿ ಸರ್ಕಾರವು ಶಿಕ್ಷೆಗೆ ಒಳಪಡಿಸುತ್ತದೆ’ ಎಂದು ಭರವಸೆ ನೀಡಿದರು.

ಗೆದ್ದ ಬಳಿಕ ನುಸುಳುಕೋರರು ಹೊರಕ್ಕೆ

ಮೊದಲ ಹಂತದ ಚುನಾವಣೆಯಲ್ಲಿ ಶೇ.93ಕ್ಕಿಂತ ಹೆಚ್ಚಿನ ದಾಖಲೆಯ ಮತದಾನವಾಗಿದ್ದನ್ನು ಉಲ್ಲೇಖಿಸಿದ ಪ್ರಧಾನಿ, ‘ಮೊದಲ ಸುತ್ತಿನಲ್ಲೇ ಟಿಎಂಸಿಯ ದುರಹಂಕಾರ ಛಿದ್ರವಾಯಿತು, 2ನೇ ಹಂತವು ರಾಜ್ಯದಲ್ಲಿ ಬಿಜೆಪಿಯ ಗೆಲುವನ್ನು ಭದ್ರಪಡಿಸುತ್ತದೆ’ ಎಂದರು. ‘ಕೊನೆಯ ಹಂತದ ಚುನಾವಣೆ ನಡೆಯುವ ಏ.29ರ ಮೊದಲು ಎಲ್ಲಾ ಒಳನುಸುಳುವವರು ದೇಶ ಬಿಟ್ಟು ಹೋಗಬೇಕು. ಇಲ್ಲದಿದ್ದರೆ ಫಲಿತಾಂಶ ಪ್ರಕಟವಾದ ನಂತರ ಅವರನ್ನು ಹೊರಗೆ ಎಸೆಯಲಾಗುವುದು’ ಎಂದು ಎಚ್ಚರಿಸಿದರು.

ಮತ ಕೊಡಿ, ಟಿಎಂಸಿಯಿಂದ ಮುಕ್ತಿ ಕೊಡುತ್ತೇನೆ

ನೇತಾಜಿ ಸುಭಾಷ್‌ಚಂದ್ರ ಬೋಸ್‌ರ ‘ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ತಂದುಕೊಡುತ್ತೇನೆ’ ಎಂಬ ಜನಪ್ರಿಯ ವಾಕ್ಯದ ರೀತಿಯಲ್ಲೇ, ‘ಬಿಜೆಪಿಗೆ ಮತ ನೀಡಿ. ನಾನು ಟಿಎಂಸಿಯ ಮಹಾ ಜಂಗಲ್‌ರಾಜ್‌ನಿಂದ ನಿಮಗೆ ಮುಕ್ತಿ ನೀಡುತ್ತೇನೆ’ ಎಂದು ಘೋಷಿಸಿದರು.

--

ಸಂದೇಶಖಾಲಿಯ ರೇಖಾ ಪಾತ್ರಾ, ಟಿಎಂಸಿ ನಾಯಕ ಶೇಖ್ ಶಹಜಹಾನ್ ನಡೆಸುತ್ತಿದ್ದ ಲೈಂ*ಗಿಕ ಕಿರುಕುಳ ಮತ್ತು ಭೂಕಬಳಿಕೆ ಆರೋಪದ ವಿರುದ್ಧ ಧ್ವನಿ ಎತ್ತಿದ ಮಹಿಳೆ. ರೇಖಾ ದೇಬ್‌ನಾಥ್‌, ಆರ್‌ಜಿ ಕರ್‌ ಕಾಲೇಜಿನಲ್ಲಿ ಆತ್ಯಾ*ಚಾರ ಮತ್ತು ಕೊಲೆಗೆ ಒಳಗಾದ ವೈದ್ಯೆಯ ತಾಯಿ. ಇವರನ್ನು ಹಿಂಗಲ್‌ಗಂಜ್‌ ಮತ್ತು ಪಾಣಿಹಾಟಿಯಿಂದ ಬಿಜೆಪಿ ಕಣಕ್ಕಿಳಿಸಿದೆ.