೨೩ ವರ್ಷದ ಅನುರಾಧಾ ೭ ತಿಂಗಳಲ್ಲಿ ೨೫ ಪುರುಷರನ್ನು ವಂಚಿಸಿ ಮದುವೆಯಾಗಿದ್ದಾಳೆ. ಮದುವೆ ನಂತರ ಆಭರಣ, ಹಣ ಕದ್ದು ಪರಾರಿಯಾಗುತ್ತಿದ್ದಳು. ಮಧ್ಯವರ್ತಿಗಳ ಮೂಲಕ ವಂಚನೆ ಜಾಲ ನಡೆಸುತ್ತಿದ್ದಳು. ರಾಜಸ್ಥಾನ ಪೊಲೀಸರು ಭೋಪಾಲ್ನಲ್ಲಿ ಬಂಧಿಸಿದ್ದಾರೆ. ಪೊಲೀಸ್ ಕಾನ್ಸ್ಟೇಬಲ್ ಮದುವೆ ಬಲೆಯೊಡ್ಡಿ ಸೆರೆ ಹಿಡಿಯಲಾಯಿತು.
ಆಕೆಗೆ ಇನ್ನೂ ಕೇವಲ 23 ವರ್ಷ ವಯಸ್ಸು. ಆದರೆ, ತನ್ನ ಗಂಡನಿಂದ ದೂರವಾದ ಮಹಿಳೆ ವಂಚಕರ ಗ್ಯಾಂಗ್ ಸೇರಿಕೊಂಡು ಕೇವಲ 7 ತಿಂಗಳಲ್ಲಿ ಬರೋಬ್ಬರಿ 25 ಪುರುಷರನ್ನು ಮದುವೆ ಮಾಡಿಕೊಂಡಿದ್ದಾಳೆ. ಜೊತೆಗೆ, ಸೊಸೆಯಾದ ಹೋದ ಮನೆಯಲ್ಲಿರುವ ಎಲ್ಲ ಚಿನ್ನಾಭರಣ, ನಗದು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಕದ್ದು ಪರಾರಿ ಆಗಿದ್ದಾಳೆ. ಆಕೆಯ ಗ್ರಹಚಾರ ಕೆಟ್ಟಿತ್ತು ಅನಿಸುತ್ತದೆ. 25ನೇ ಮದುವೆಯ ವರ ಪೊಲೀಸ್ ಕಾನ್ಸ್ಟೇಬಲ್ ಆಗಿದ್ದನು. ಕಾನಸ್ಟೇಬಲ್ನನ್ನು ಮದುವೆ ಮಾಡಿಕೊಂಡು ವಂಚನೆ ಮಾಡಬೇಕು ಎನ್ನುವಷ್ಟರಲ್ಲಿ ಲೂಟಿ ಮಾಡಿದ್ದ ಹಣದ ಸಮೇತ ರಾಜಸ್ಥಾನ ಪೊಲೀಸರಿಗೆ ಲಾಕ್ ಆಗಿದ್ದಾಳೆ.
ಮದುವೆ ಮಾಡಿಕೊಂಡು ವಂಚನೆ ಮಾಡುತ್ತಿದ್ದ ಮಹಿಳೆಯನ್ನು ಅನುರಾಧ ಪಾಸ್ವಾನ್ ಎಂದು ಗುರುತಿಸಲಾಗಿದೆ. ನಿನ್ನೆ ಸೋಮವಾರ ಸವಾಯಿ ಮಾಧೋಪುರ ಪೊಲೀಸರು ಭೋಪಾಲ್ನಲ್ಲಿ ಅನುರಾಧಾಳನ್ನು ಬಂಧಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಅನುರಾಧ ದೊಡ್ಡ ಗ್ಯಾಂಗ್ನ ಸದಸ್ಯೆಯಾಗಿದ್ದು, ಅವಿವಾಹಿತ ಪುರುಷರನ್ನು ನಕಲಿ ಮದುವೆಗೆ ಮರುಳು ಮಾಡುತ್ತಿದ್ದಳು. ಅವರನ್ನು ಮದುವೆಯಾಗಿ, ಅವರ ಹಣ, ಚಿನ್ನ ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ತೆಗೆದುಕೊಂಡು ಕೆಲವೇ ದಿನಗಳಲ್ಲಿ ಓಡಿಹೋಗುತ್ತಿದ್ದಳು. ಇದಕ್ಕಾಗಿ ಅನುರಾಧ ಇದನ್ನು ಮಾಡಲು ಚಾಲಾಕಿ ಮಾರ್ಗವನ್ನು ಹೊಂದಿದ್ದಳು. ತನ್ನ ನಿಜವಾದ ದಾಖಲೆಗಳನ್ನು ತೋರಿಸಿ, ಕಾನೂನುಬದ್ಧವಾಗಿ ಮದುವೆಯಾಗಿ, ಪುರುಷನ ಮನೆಯಲ್ಲಿ ಸ್ವಲ್ಪ ಸಮಯ ಇದ್ದು, ರಾತ್ರಿಯಲ್ಲಿ ಪರಾರಿಯಾಗುತ್ತಿದ್ದಳು.
ಸವಾಯಿ ಮಾಧೋಪುರದ ವಿಷ್ಣು ಶರ್ಮ ಎಂಬ ವ್ಯಕ್ತಿ ಮೇ 3 ರಂದು ಪೊಲೀಸರಿಗೆ ದೂರು ನೀಡಿದ ನಂತರ ಈ ವಂಚನೆ ಬೆಳಕಿಗೆ ಬಂದಿದೆ. ತನಗೆ ಒಳ್ಳೆಯ ವಧುವನ್ನು ಹುಡುಕುವುದಾಗಿ ಭರವಸೆ ನೀಡಿದ್ದ ಸುನೀತಾ ಮತ್ತು ಪಪ್ಪು ಮೀನಾ ಎಂಬ ಇಬ್ಬರು ಏಜೆಂಟ್ಗಳಿಗೆ ತಾನು 2 ಲಕ್ಷ ರೂ. ನೀಡಿದ್ದೆ. ಆದರೆ, ಅವರು ಅನುರಾಧಾಳನ್ನು ತೋರಿಸಿ ಮದುವೆ ಮಾಡಿಸುವುದಾಗಿ ಹೇಳಿದ್ದರು. ಯಾವುದೇ ಆಡಂಬರ ಇಲ್ಲದೇ ಸರಳವಾಗಿ ಮದುವೆ ಮಾಡಿಕೊಳ್ಳುವುದಾಗಿ ಹುಡುಗಿ ಹೇಳಿದ್ದಾಳೆಂದು ತಿಳಿಸಿ ರಿಜಿಸ್ಟರ್ ಕಚೇರಿಯಲ್ಲಿ ಅನುರಾಧಾಳನ್ನು ಏ.20ರಂದು ಮದುವೆ ಮಾಡಿಕೊಂಡಿದ್ದೇನೆ. ಆದರೆ, ನಮ್ಮ ಮನೆಯಲ್ಲಿ 12 ದಿನ ಇದ್ದು, ಎಲ್ಲರ ನಂಬಿಕೆ ಗಳಿಸಿದಂತೆ ಮಾಡಿ ಮೇ 2ರಂದು ರಾತ್ರಿ ವೇಳೆ ಮನೆಯಲ್ಲಿದ್ದ ಎಲ್ಲ ನಗ-ನಾಣ್ಯ, ಚಿನ್ನಾಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿ ಆಗಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾನೆ.
ಇನ್ನು ವಂಚಕಿ ಅನುರಾಧ ಉತ್ತರ ಪ್ರದೇಶದ ಮಹಾರಾಜಗಂಜ್ನಲ್ಲಿರುವ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಆಕೆ ತನ್ನ ಪತಿಯೊಂದಿಗೆ ಜಗಳವಾಡಿದ ನಂತರ, ಅವಳು ಭೋಪಾಲ್ಗೆ ತೆರಳಿದಳು. ಅಲ್ಲಿ, ವಧುವಿನ ಫೋಟೋಗಳನ್ನು ತೋರಿಸಲು ವಾಟ್ಸಾಪ್ ಬಳಸಿಕೊಂಡು ಈ ನಕಲಿ ಮದುವೆ ಹಗರಣವನ್ನು ನಡೆಸುತ್ತಿದ್ದ ಗ್ಯಾಂಗ್ಗೆ ಸೇರಿದಳು. ಅವರು ವರರಿಂದ 2ರಿಂದ 5 ಲಕ್ಷ ರೂ. ವಸೂಲಿ ಮಾಡುತ್ತಿದ್ದರು. ಇತ್ತೀಚೆಗೆ ವಿಷ್ಣು ಶರ್ಮನನ್ನು ಮದುವೆ ಮಾಡಿಕೊಂಡ ಅನುರಾಧ ಭೋಪಾಲ್ನಲ್ಲಿ ಗಬ್ಬರ್ ಎಂಬ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗಿ ಅವನಿಂದಲೂ 2 ಲಕ್ಷ ರೂ. ಪಡೆದುಕೊಂಡು ಪರಾರಿ ಆಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಅವಿವಾಹಿತ ಪುರುಷರಿಗೆ ಮದುವೆ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಗ್ಯಾಂಗ್ನಲ್ಲಿರುವ ಇತರರನ್ನು ಪೊಲೀಸರು ಗುರುತಿಸಿದ್ದಾರೆ. ರೋಶ್ನಿ, ರಘುಬೀರ್, ಗೋಲು, ಮಜ್ಬೂತ್ ಸಿಂಗ್ ಯಾದವ್ ಮತ್ತು ಅರ್ಜುನ್ ಎಂಬ ಆರೋಪಿಗಳು ಎಲ್ಲರೂ ಭೋಪಾಲ್ನವರು. ವಂಚಕರ ಗ್ಯಾಂಗ್ ಅನ್ನು ಬಂಧಿಸುವ ನಿಟ್ಟಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಒಬ್ಬನನ್ನು ಮದುವೆ ಮಾಡಿಕೊಳ್ಳುವುದಕ್ಕೆ ವರನ ವೇಷದಲ್ಲಿ ಕಳಿಸಿದ್ದಾರೆ. ಆಗ ಈತ ಪೊಲೀಸನೆಂದು ಗೊತ್ತಿಲ್ಲದೆ ಇದೇ ಅನುರಾಧಾ ಜೊತೆಗೆ ಮದುವೆ ಮಾಡಿಸುವುದಾಗಿ ಮದುವೆ ಏಜೆಂಟರಂತೆ ಕಾರ್ಯ ನಿರ್ವಹಿಸುತ್ತಿದ್ದವರು ಕಮೀಷನ್ ಹಣ ಪಡೆದಿದ್ದಾರೆ. ಹಣ ಪಡೆದು ವರನಿಗೆ ಅನುರಾಧಾಳ ಫೋಟೋ ತೋರಿಸಿದ್ದಾರೆ. ಆಗ ಇವರೇ ವಂಚನೆ ಗ್ಯಾಂಗ್ ಎಂಬುದು ಗೊತ್ತಾಗುತ್ತಿದ್ದಂತೆ ಅವರನ್ನು ಬಂಧಿಸಿ, ಅನುರಾಧಾಳನ್ನು ಸೆರೆ ಹಿಡಿದಿದ್ದಾರೆ. ಇದೀಗ ಪೊಲೀಸರು ತನಿಖೆ ಕೈಗೊಂಡಿದ್ದು, ಮತ್ತಷ್ಟು ಮದುವೆ ವಂಚನೆ ಮಾಡಿರುವ ಪ್ರಕರಣಗಳನ್ನು ಬಾಯಿ ಬಿಡಿಸುತ್ತಿದ್ದಾರೆ.


