ಬೆಂಗಳೂರಿನಲ್ಲಿ 20 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ಟಿಡಿಆರ್ ಹಗರಣ ಬೆಳಕಿಗೆ ಬಂದಿದ್ದು, ಬಿಬಿಎಂಪಿ ಕಚೇರಿಯಿಂದ 2014-17ರ ಅವಧಿಯ ಮಹತ್ವದ ದಾಖಲೆಗಳು ನಾಪತ್ತೆಯಾಗಿವೆ. ಈ ಸಂಬಂಧ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಅವರು ಇ.ಡಿ ಮತ್ತು ಲೋಕಾಯುಕ್ತಕ್ಕೆ ದೂರು ನೀಡಿದ್ದು, ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ.
ಬೆಂಗಳೂರು: ಸುಮಾರು 20 ಸಾವಿರ ಕೋಟಿ ರು.ಗೂ ಅಧಿಕ ಮೊತ್ತದ ಟಿಡಿಆರ್ ಹಗರಣ ಸಂಬಂಧ ಮೂರು ವರ್ಷಗಳ ಅವಧಿಯ ಮಹತ್ವದ ದಾಖಲೆಗಳು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಭೂಸ್ವಾಧೀನ ಮತ್ತು ಟಿಡಿಆರ್ ವಿಭಾಗದ ಕಚೇರಿಯಿಂದ ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಈ ಮಹತ್ವದ ದಾಖಲೆಗಳ ನಾಪತ್ತೆ ಹಿಂದಿರುವ ಬಿಬಿಎಂಪಿ ಭ್ರಷ್ಟ ಅಧಿಕಾರಿಗಳು ಹಾಗೂ ಟಿಡಿಆರ್ ಮಾಫಿಯಾ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಜಾರಿ ನಿರ್ದೇಶನಾಲಯ(ಇ.ಡಿ) ಮತ್ತು ಲೋಕಾಯುಕ್ತಕ್ಕೆ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ದೂರು ನೀಡಿದ್ದಾರೆ.
ಟಿಡಿಆರ್ ಮಾಫಿಯಾ:
ಈ ಟಿಡಿಆರ್ ನಿಯಮಗಳಲ್ಲಿನ ಸಣ್ಣ ಲೋಪದೋಷಗಳನ್ನು ದುರ್ಬಳಕೆ ಮಾಡಿಕೊಳ್ಳುವ ಕರಾಳ ದಂಧೆ ಬೃಹತ್ ಪ್ರಮಾಣದಲ್ಲಿ ಬೆಳೆದು ನಿಂತಿದೆ. ಈ ಟಿಡಿಆರ್ ಮಾಫಿಯಾಗಳು ಜನ್ಮ ತಾಳಿ ಬಿಬಿಎಂಪಿ ಮತ್ತು ಬಿಡಿಎ ಭ್ರಷ್ಟ ಅಧಿಕಾರಿಗಳ ಕಾನೂನು ಬಾಹಿರ ಸಹಕಾರದಿಂದ ಬೆಂಗಳೂರು ಮಹಾನಗರವೊಂದರಲ್ಲಿಯೇ ಸುಮಾರು 50 ಸಾವಿರ ಕೋಟಿ ರು.ಗೂ ಹೆಚ್ಚು ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ್ದಾರೆ.
ಹಲವು ಪ್ರಕರಣ ತನಿಖಾ ಹಂತದಲ್ಲಿ:
2007-08 ರಿಂದ 2017ರ ಮಾರ್ಚ್ವರೆಗೆ ಬಿಬಿಎಂಪಿ ಅಧೀನದಲ್ಲಿದ್ದ ಟಿಡಿಆರ್ ವಿಭಾಗವು 2017ರ ಏ.1ರಿಂದ ಬಿಡಿಎಗೆ ಹಸ್ತಾಂತರ ಮಾಡಿ ರಾಜ್ಯ ಸರ್ಕಾರವು ಆದೇಶಿಸಿತ್ತು. ಭೂಮಿಯ ಬೆಲೆ ಹೆಚ್ಚಿರುವ ಹಿಂದಿನ ಮಹದೇವಪುರ ವಲಯ, ಯಲಹಂಕ ವಲಯ, ಬೊಮ್ಮನಹಳ್ಳಿ ವಲಯ ಮತ್ತು ಪೂರ್ವ ವಲಯಗಳ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಟಿಡಿಆರ್ ಅಕ್ರಮಗಳು ನಡೆದಿವೆ. ಈ ಸಂಬಂಧ ಜಾರಿ ನಿರ್ದೇಶನಾಲಯ ಮತ್ತು ಲೋಕಾಯುಕ್ತ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳಲ್ಲಿ ಮತ್ತು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಹಲವು ಪ್ರಕರಣಗಳು ತನಿಖಾ/ ವಿಚಾರಣಾ ಹಂತದಲ್ಲಿವೆ ಎಂದು ತಿಳಿಸಿದ್ದಾರೆ.
ಮೂರು ವರ್ಷಗಳ ದಾಖಲೆ ನಾಪತ್ತೆ!:
2026ರ ಮಾ.6ರಂದು ಆರ್ಟಿಐ ಅರ್ಜಿ ಸಲ್ಲಿಸಿ 2010 ಏ.1ರಿಂದ 2017 ಮಾ.31ರ ವರೆಗಿನ ಅವಧಿಯಲ್ಲಿ ಬಿಬಿಎಂಪಿಯಿಂದ ನೀಡಲಾಗಿರುವ ಟಿಡಿಆರ್/ಡಿಆರ್ಸಿಗಳ ಪ್ರತಿ/ಮಾಹಿತಿ ಒದಗಿಸುವಂತೆ ಭೂಸ್ವಾಧೀನ ಮತ್ತು ಟಿಡಿಆರ್ ವಿಭಾಗದ ಉಪ ಆಯುಕ್ತರಿಗೆ ಮನವಿ ಮಾಡಿದ್ದೆ. ಇದಕ್ಕೆ 2014ರ ಮಾ.31ರ ವರೆಗೆ ಮಾತ್ರ ಮಾಹಿತಿ ನೀಡಿದ್ದು, 2014 ಏ.1ರಿಂದ 2017 ಮಾ.31ರ ವರೆಗಿನ ಮೂರು ವರ್ಷಗಳ ಟಿಡಿಆರ್/ಡಿಆರ್ಸಿ ದಾಖಲೆಗಳು ಲಭ್ಯವಿಲ್ಲ ಎಂದು ಲಿಖಿತ ಮಾಹಿತಿ ನೀಡಿದ್ದಾರೆ. ಈ ಮೂರು ವರ್ಷ ಅವಧಿಯಲ್ಲೇ ಭಾರೀ ಪ್ರಮಾಣದ ಟಿಡಿಆರ್/ಡಿಆರ್ಸಿ ಅಕ್ರಮಗಳು ನಡೆದಿದ್ದು, ಅದೇ ಅವಧಿಯ ದಾಖಲೆಗಳೇ ಮಾಯವಾಗಿರುವುದು ಅನುಮಾನಗಳಿಗೆ ಎಡೆ ಮಾಡಿದೆ.
ಈ ಟಿಡಿಆರ್ ಹಗರಣದ ತನಿಖೆ/ವಿಚಾರಣೆ ಅಂತಿಮ ಹಂತ ತಲುಪಿರುವ ಈ ಸಂದರ್ಭದಲ್ಲಿ ಮೂರು ವರ್ಷಗಳ ದಾಖಲೆಗಳು ಕಾಣೆಯಾಗಿವೆ. ಇದರ ಹಿಂದಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ರಮೇಶ್ ಆಗ್ರಹಿಸಿದ್ದಾರೆ.
ನ್ಯಾಯಾಂಗ ಅಥವಾ ಸಿಐಡಿ ತನಿಖೆಗೆ ಆಗ್ರಹ: ಈ ಟಿಡಿಆರ್ ಹಗರಣ ಸಂಬಂಧ ಮೂರು ವರ್ಷಗಳ ದಾಖಲೆಗಳ ನಾಪತ್ತೆ ಸಂಬಂಧ ಉನ್ನತಮಟ್ಟದ ನ್ಯಾಯಾಂಗ ತನಿಖೆ ಅಥವಾ ಸಿಐಡಿ ತನಿಖೆಗೆ ವಹಿಸುವಂತೆ ರಮೇಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ದಾಖಲೆಗಳ ಸಹಿತ ಪತ್ರ ಬರೆದು ಒತ್ತಾಯಿಸಿದ್ದಾರೆ.


