Leopard enters house in Mysuru ಮೈಸೂರಿನ ಸಿದ್ದಾರ್ಥನಗರದ ಮನೆಯೊಂದಕ್ಕೆ ನುಗ್ಗಿದ ಚಿರತೆಯು, ವೃದ್ಧೆಯೊಬ್ಬರು ಮಲಗಿದ್ದ ಮಂಚದ ಕೆಳಗೆ ಎರಡು ಗಂಟೆಗಳ ಕಾಲ ಅವಿತುಕೊಂಡಿತ್ತು. ಯಾರಿಗೂ ಯಾವುದೇ ಹಾನಿ ಮಾಡದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಅರವಳಿಕೆ ಚುಚ್ಚುಮದ್ದು ನೀಡಿ ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ.
- 2 ಗಂಟೆ ಮನೆಯೊಳಗೇ ಇದ್ದರೂ ಮಂಚದ ಮೇಲೆ ಮಲಗಿದ್ದ ವೃದ್ಧೆಗೆ ಏನೂ ಮಾಡದ ಚಿರತೆ
ಮೈಸೂರು (ಏ.18): ಯಾವುದೇ ಸದ್ದು ಗದ್ದಲ ಇಲ್ಲದೇ ಮನೆಗೆ ನುಗ್ಗಿ, ಮಂಚದ ಕೆಳಗೆ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಮಲಗಿದ್ದ 4 ವರ್ಷದ ಗಂಡು ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ವಿಶೇಷವೆಂದರೆ, ಅನಾರೋಗ್ಯದಿಂದ ಬಳಲುತ್ತಿದ್ದ ಅಜ್ಜಿಯೊಬ್ಬರು ಮಲಗಿದ್ದ ಮಂಚದ ಕೆಳಗೆ ಚಿರತೆ ಸುಮಾರು 2 ಗಂಟೆಗೂ ಹೆಚ್ಚು ಕಾಲ ಸುಮ್ಮನೆ ಮಲಗಿತ್ತು. ಅಜ್ಜಿಯ ಆರೈಕೆಗಾಗಿ ಮತ್ತಿಬ್ಬರು ಕೋಣೆಗೆ ಬಂದು ಹೋದರೂ, ಯಾರಿಗೂ ಏನೂ ಮಾಡಿಲ್ಲ.
ಮೈಸೂರಿನ ಸಿದ್ದಾರ್ಥನಗರದ ವಿನಯಮಾರ್ಗದಲ್ಲಿರುವ ನಗರಪಾಲಿಕೆ ನಿವೃತ್ತ ಎಂಜಿನಿಯರ್ ಸುರೇಶ್ ಎಂಬುವರ ಮನೆಗೆ ಚಿರತೆ ನುಗ್ಗಿತ್ತು. ಬೆಳಗ್ಗೆ 9.30ರ ವೇಳೆಗೆ ಸದ್ದಿಲ್ಲದೆ ಮನೆ ಪ್ರವೇಶಿಸಿದ ಚಿರತೆ, ಗಾಬರಿಯಿಂದ ಮಂಚದ ಕೆಳಗೆ ಅವಿತುಕೊಂಡಿದೆ.
11.30ರ ಸುಮಾರಿಗೆ ಮನೆ ಕೆಲಸದಾಕೆ ಕಸ ಗುಡಿಸಲು ರೂಮಿಗೆ ಬಂದಿದ್ದು, ಕಸ ಗುಡಿಸುತ್ತಿದ್ದಾಗ ಚಿರತೆ ಇರುವುದು ಗೊತ್ತಾಗಿ ಹೌಹಾರಿದ್ದಾರೆ. ಆಗ ತಕ್ಷಣ ಮಂಚದ ಮೇಲೆ ಮಲಗಿದ್ದ ಶೈಲಜಾರನ್ನು ತಬ್ಬಿ ಎತ್ತಿಕೊಂಡು ಹೊರಗೆ ಕರೆ ತರಲಾಗಿದೆ. ಬಳಿಕ ರೂಂನ ಬಾಗಿಲು ಹಾಕಿ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಸಿಬ್ಬಂದಿ, ಅರವಳಿಕೆ ಚುಚ್ಚುಮದ್ದು ನೀಡಿ, ಚಿರತೆಯನ್ನು ಸೆರೆ ಹಿಡಿದು ಕೂರ್ಗಳ್ಳಿಯಲ್ಲಿರುವ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿದರು.
ಸುರೇಶ್ ಅವರ ತಾಯಿ ಶೈಲಜಾ, ವಯೋಸಹಜ ಸಮಸ್ಯೆಯಿಂದಾಗಿ ಹಾಸಿಗೆ ಹಿಡಿದಿದ್ದು, ಎಂದಿನಂತೆ ಬೆಳಗ್ಗೆ ಉಪಾಹಾರ ಸೇವಿಸಿ ರೂಮಿನಲ್ಲಿ ಮಂಚದ ಮೇಲೆ ಮಲಗಿದ್ದರು. ಚಿರತೆ ರೂಮಿನಲ್ಲಿರುವಾಗಲೇ ಸುರೇಶ್ ಅವರ ಪತ್ನಿ ಸುಜಾತ ಅವರು ರೂಮಿಗೆ ಬಂದು ಅತ್ತೆಯನ್ನು 2- 3 ಬಾರಿ ಮಾತಾಡಿಸಿ ಹೋಗಿದ್ದಾರೆ. ಆದರೂ ಚಿರತೆಯ ಇರುವಿಕೆ ಗೊತ್ತಾಗಿಲ್ಲ.


