ಬೆಂಗಳೂರಿನ ಸಿಲ್ಕ್ ಬೋರ್ಡ್ ಬಳಿ ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿ ನಿರ್ಮಿಸಲಾದ ಬಹುನಿರೀಕ್ಷಿತ ಡಬಲ್ ಡೆಕ್ಕರ್ ಫ್ಲೈಓವರ್ ಈಗ ಸಂಪೂರ್ಣ ಸಂಚಾರಕ್ಕೆ ಮುಕ್ತವಾಗಿದೆ. ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್‌ವರೆಗೆ ವ್ಯಾಪಿಸಿರುವ ಈ ಮೇಲ್ಸೇತುವೆಯು ವಾಹನ ಸಂಚಾರಕ್ಕೆ ಕೆಳಮಟ್ಟದ ಡೆಕ್ ಮತ್ತು ಮೆಟ್ರೋ ರೈಲಿಗೆ ಮೇಲ್ಮಟ್ಟದ ಡೆಕ್ ಹೊಂದಿದ್ದು, ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಗುರಿ ಹೊಂದಿದೆ.
ಬೆಂಗಳೂರು ನಗರದಲ್ಲಿ ವರ್ಷಗಳಿಂದ ವಾಹನ ಸವಾರರನ್ನು ಕಂಗೆಡಿಸುತ್ತಿದ್ದ ಟ್ರಾಫಿಕ್ ಸಮಸ್ಯೆಗೆ ಮಹತ್ವದ ಪರಿಹಾರವಾಗಿ ಬಹುನಿರೀಕ್ಷಿತ ಡಬಲ್ ಡೆಕ್ಕರ್ ಫ್ಲೈಓವರ್ ಈಗ ಸಂಪೂರ್ಣವಾಗಿ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದೆ. ಬೆಂಗಳೂರು ನಗರದ ಪ್ರಮುಖ ಸಂಚಾರ ಕೇಂದ್ರವಾದ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ಉಂಟಾಗುತ್ತಿದ್ದ ಭಾರೀ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ನಿರ್ಮಿಸಲಾದ ಈ ಫ್ಲೈಓವರ್ ಇದೀಗ ಪ್ರಯಾಣಿಕರಿಗೆ ಹೊಸ ಅನುಭವ ನೀಡುತ್ತಿದೆ.
ಈ ಡಬಲ್ ಡೆಕ್ಕರ್ ಫ್ಲೈಓವರ್ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್‌ವರೆಗೆ, ಹಾಗೆಯೇ ಸಿಲ್ಕ್ ಬೋರ್ಡ್‌ನಿಂದ ರಾಗಿಗುಡ್ಡದವರೆಗೆ ದ್ವಿಮುಖ ಸಂಚಾರಕ್ಕೆ ಅವಕಾಶ ಕಲ್ಪಿಸುತ್ತದೆ. ಎಚ್‌ಎಸ್‌ಆರ್ ಲೇಔಟ್ 5ನೇ ಮುಖ್ಯರಸ್ತೆ, ಸಿಲ್ಕ್ ಬೋರ್ಡ್ ಸಿಗ್ನಲ್ ಹಾಗೂ ಜಯನಗರದ ರಾಗಿಗುಡ್ಡ ಪ್ರದೇಶಗಳಲ್ಲಿ ಪ್ರತಿದಿನ ಕಂಡುಬರುವ ಟ್ರಾಫಿಕ್ ಜಾಮ್ ಸಮಸ್ಯೆಗೆ ಇದು ಮಹತ್ತರ ಪರಿಹಾರವೆಂದು ಪರಿಗಣಿಸಲಾಗಿದೆ.
449 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ
ಬೃಹತ್ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ವತಿಯಿಂದ ಸುಮಾರು 449 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಮೇಲ್ಸೇತುವೆಯ ಉದ್ದ ಸುಮಾರು 5.25 ಕಿಲೋಮೀಟರ್ ಆಗಿದೆ. ಯೋಜನೆಯ ಒಂದು ಭಾಗವನ್ನು 2024ರ ಜುಲೈನಲ್ಲಿ ಸಾರ್ವಜನಿಕ ಬಳಕೆಗೆ ತೆರೆಯಲಾಗಿದ್ದರೂ, ಉಳಿದ ಭಾಗದ ಕಾಮಗಾರಿ ಪೂರ್ಣಗೊಳ್ಳುವವರೆಗೆ ಸಂಪೂರ್ಣ ಸಂಚಾರಕ್ಕೆ ಅವಕಾಶ ನೀಡಲಾಗಿರಲಿಲ್ಲ. ಇದೀಗ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಏಪ್ರಿಲ್ 22ರಿಂದ ಸಂಪೂರ್ಣವಾಗಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಕಾಮಗಾರಿ ಪೂರ್ಣಗೊಂಡಿದ್ದರೂ ಉದ್ಘಾಟನೆಗೆ ವಿಳಂಬವಾಗಿರುವುದರ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಏಪ್ರಿಲ್ 2ರಂದು ಸಂಚಾರ ಪೊಲೀಸರು ಪರಿಶೀಲನೆ ನಡೆಸಿದ್ದರೂ ಮೇಲಾಧಿಕಾರಿಗಳ ಅನುಮತಿ ಎಂಬ ಕಾರಣ ನೀಡಿ ತೆರೆಯುವುದನ್ನು ಮುಂದೂಡಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಟೀಕೆಗಳು ಹೆಚ್ಚಾದ ಹಿನ್ನೆಲೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಫ್ಲೈಓವರ್ ಅನ್ನು ತೆರೆಯುವ ನಿರ್ಧಾರ ಕೈಗೊಂಡಿದ್ದಾರೆ.
ರಸ್ತೆಯಿಂದ ಸುಮಾರು 8 ಮೀಟರ್ ಎತ್ತರ
ಈ ಫ್ಲೈಓವರ್ ವಿಶೇಷ ವಿನ್ಯಾಸವು ನಗರಾಭಿವೃದ್ಧಿಯಲ್ಲೊಂದು ಮಹತ್ವದ ಮೈಲುಗಲ್ಲಾಗಿದೆ. ಇದರ ಕೆಳಮಟ್ಟದ ಡೆಕ್ (ರಸ್ತೆಯಿಂದ ಸುಮಾರು 8 ಮೀಟರ್ ಎತ್ತರ) ವಾಹನ ಸಂಚಾರಕ್ಕೆ ಮೀಸಲಾಗಿದ್ದು, ಮೇಲ್ಮಟ್ಟದ ಡೆಕ್ (ಸುಮಾರು 16 ಮೀಟರ್ ಎತ್ತರ) ನಮ್ಮ ಮೆಟ್ರೋ ರೈಲುಗಳ ಸಂಚಾರಕ್ಕೆ ವಿನ್ಯಾಸಗೊಳಿಸಲಾಗಿದೆ. ಇದೇ ಮಾದರಿಯ ಡಬಲ್ ಡೆಕ್ಕರ್ ವ್ಯವಸ್ಥೆಯನ್ನು ಮುಂಚೆಯೇ ಜೈಪುರ, ನಾಗ್ಪುರ ಹಾಗೂ ಮುಂಬೈ ನಗರಗಳಲ್ಲಿ ಅಳವಡಿಸಲಾಗಿದ್ದು, ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಜಾರಿಗೆ ಬಂದಿದೆ.
ಈ ಮೇಲ್ಸೇತುವೆಯ ಮೂಲಕ ಎಚ್‌ಎಸ್‌ಆರ್ ಲೇಔಟ್ ಮತ್ತು ಹೊಸೂರು ರಸ್ತೆಯ ನಡುವೆ ಸಿಗ್ನಲ್ ರಹಿತ ಪ್ರಯಾಣ ಸಾಧ್ಯವಾಗಿದ್ದು, ವಿಶೇಷವಾಗಿ ಪೀಕ್ ಅವರ್‌ಗಳಲ್ಲಿ ಪ್ರಯಾಣದ ಸಮಯದಲ್ಲಿ ಶೇಕಡಾ 30ರಷ್ಟು ಉಳಿತಾಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಲ್ಕ್ ಬೋರ್ಡ್ ಪ್ರದೇಶದಲ್ಲಿ ವರ್ಷಗಳಿಂದಲೂ ಮುಂದುವರಿದ ಟ್ರಾಫಿಕ್ ಸಮಸ್ಯೆಗೆ ಇದು ದೀರ್ಘಕಾಲೀನ ಪರಿಹಾರ ನೀಡುವ ನಿರೀಕ್ಷೆ ಮೂಡಿಸಿದೆ.
ಒಟ್ಟಿನಲ್ಲಿ, ಈ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಾಣವು ಬೆಂಗಳೂರಿನ ಸಾರಿಗೆ ವ್ಯವಸ್ಥೆಗೆ ಹೊಸ ರೂಪ ನೀಡುವುದರೊಂದಿಗೆ, ನಗರದಲ್ಲಿ ಸುಗಮ ಸಂಚಾರಕ್ಕೆ ದಾರಿ ಮಾಡಿಕೊಡುವ ಮಹತ್ವದ ಹೆಜ್ಜೆಯಾಗಿ ಪರಿಣಮಿಸಿದೆ. ಮುಂದಿನ ದಿನಗಳಲ್ಲಿ ಮೆಟ್ರೋ ಮಾರ್ಗ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದ ನಂತರ ಈ ಪ್ರದೇಶದ ಟ್ರಾಫಿಕ್ ಒತ್ತಡ ಇನ್ನಷ್ಟು ಕಡಿಮೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತವಾಗುತ್ತಿದೆ.


