ಬೆಂಗಳೂರಿನಲ್ಲಿ ಬಸ್ ಪಿಕ್‌ಅಪ್ ವಿಚಾರವಾಗಿ ನಡೆದ ಸಣ್ಣ ವಾಗ್ವಾದ, ಆಂಧ್ರಪ್ರದೇಶದಲ್ಲಿ ಹಲ್ಲೆಗೆ ಕಾರಣವಾಗಿದೆ. ತಡವಾಗಿ ಬಂದ ಮಹಿಳಾ ಪ್ರಯಾಣಿಕರೊಬ್ಬರು, ತಿರುಪತಿ ಬಳಿ ತನ್ನ ಸಂಬಂಧಿಕರು ಮತ್ತು ಸ್ಥಳೀಯರಿಂದ ಖಾಸಗಿ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿಸಿದ್ದಾರೆ.

ಬೆಂಗಳೂರು (ಫೆ.12): ಬೆಂಗಳೂರಿನಲ್ಲಿ ಬಸ್ ಪಿಕ್‌ಅಪ್‌ ವಿಚಾರವಾಗಿ ನಡೆದ ಸಣ್ಣ ವಾಗ್ವಾದವೊಂದು ಆಂಧ್ರಪ್ರದೇಶದಲ್ಲಿ ಹಲ್ಲೆಗೆ ಕಾರಣವಾಗಿದೆ. ಬೆಂಗಳೂರಿನಿಂದ ತಿರುಪತಿಗೆ ತೆರಳುತ್ತಿದ್ದ ಖಾಸಗಿ ಬಸ್ ಚಾಲಕನ ಮೇಲೆ ಮಹಿಳಾ ಪ್ರಯಾಣಿಕರೊಬ್ಬರು ಹತ್ತಿರದ ಸಂಬಂಧಿಕರು ಹಾಗೂ ಸ್ಥಳೀಯ ಸಂಘಟನೆಯ ಕಾರ್ಯಕರ್ತರನ್ನು ಕರೆಸಿ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆಯ ಭೀಕರ ದೃಶ್ಯಗಳು ಬಸ್‌ನಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಏನಿದು ಘಟನೆ?

ಕೆಲ ದಿನಗಳ ಹಿಂದೆ ಬೆಂಗಳೂರಿನಿಂದ ತಿರುಪತಿಗೆ ತೆರಳಲು ಖಾಸಗಿ ಬಸ್ ಬುಕ್ ಮಾಡಿದ್ದ ಆಂಧ್ರ ಮೂಲದ ಮಹಿಳೆಯೊಬ್ಬರು ಪಿಕ್‌ಅಪ್ ಪಾಯಿಂಟ್‌ಗೆ ತಡವಾಗಿ ಬಂದಿದ್ದರು. ಮಧ್ಯಾಹ್ನ 12 ಗಂಟೆಗೆ ಬಸ್ ಬರಬೇಕಿತ್ತು, ಆದರೆ ಮಹಿಳೆ ತಡವಾಗಿ ಬಂದು ತಮಗಾಗಿ ಕಾಯುವಂತೆ ಚಾಲಕನಿಗೆ ಫೋನ್‌ನಲ್ಲಿ ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಚಾಲಕ, 'ಟ್ರಾಫಿಕ್ ಜಾಮ್ ಆಗುತ್ತದೆ ಮತ್ತು ಪಿಕ್‌ಅಪ್ ಸಮಯ ಈಗಾಗಲೇ ಮುಗಿದಿದೆ. ಬಸ್ ಕಾಯಲು ಸಾಧ್ಯವಿಲ್ಲ, ನೀವು ಮುಂದಿನ ಸ್ಟಾಪ್ ಆದ ಮೆಜೆಸ್ಟಿಕ್‌ಗೆ ಬನ್ನಿ, ಅಲ್ಲಿ ಹತ್ತಿಸಿಕೊಳ್ಳುತ್ತೇನೆ' ಎಂದು ತಿಳಿಸಿದ್ದರು. ಈ ವಿಚಾರವಾಗಿ ಫೋನ್‌ನಲ್ಲಿಯೇ ಚಾಲಕ ಹಾಗೂ ಮಹಿಳೆ ನಡುವೆ ಜೋರು ವಾಗ್ವಾದ ನಡೆದಿತ್ತು.

ಬಸ್ ಹತ್ತಿದ ಮೇಲೆ ಮೌನ, ಆಂಧ್ರ ತಲುಪಿದ ಮೇಲೆ ಅಟ್ಟಹಾಸ:

ಬಳಿಕ ಆ ಮಹಿಳೆ ಮೆಜೆಸ್ಟಿಕ್ ಸ್ಟಾಪ್‌ಗೆ ಬಂದು ಬಸ್ ಹತ್ತಿದ್ದರು. ಪ್ರಯಾಣದುದ್ದಕ್ಕೂ ಆಕೆ ಚಾಲಕನೊಂದಿಗೆ ಯಾವುದೇ ಮಾತನಾಡದೆ ಮೌನವಾಗಿದ್ದರು. ಆದರೆ, ಬಸ್ ಆಂಧ್ರಪ್ರದೇಶದ ಚಿತ್ತಾಪುರ ತಲುಪುತ್ತಿದ್ದಂತೆ ಆಕೆ ತನ್ನ ಬಣ್ಣ ಬದಲಿಸಿದ್ದಾರೆ. ತಡರಾತ್ರಿ ಬಸ್ ಚಿತ್ತಾಪುರ ತಲುಪಿದಾಗ, ಆಕೆ ಮೊದಲೇ ಸಂಚು ರೂಪಿಸಿ ಫೋನ್ ಮಾಡಿ 8 ಮಂದಿ ಪುಂಡರನ್ನು ಅಲ್ಲಿಗೆ ಕರೆಸಿಕೊಂಡಿದ್ದರು. ಬಸ್ ನಿಲ್ಲುತ್ತಿದ್ದಂತೆ ಮಹಿಳೆ ಸೂಚಿಸಿದ ಎಂಟು ಮಂದಿ ಗೂಂಡಾಗಳು ಬಸ್ ಒಳಗೆ ನುಗ್ಗಿ, ಸ್ಟೀರಿಂಗ್ ಸೀಟಿನಲ್ಲಿದ್ದ ಚಾಲಕನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಆಂಧ್ರದ ಯಾವುದೋ ಸಂಘಟನೆಗೆ ಸೇರಿದವರು ಎನ್ನಲಾದ ಈ ಯುವಕರು ಚಾಲಕನನ್ನು ಮನಬಂದಂತೆ ಥಳಿಸಿದ್ದಾರೆ. ಬಸ್‌ನಲ್ಲಿದ್ದ ಇತರ ಪ್ರಯಾಣಿಕರು ಇದನ್ನು ಕಂಡು ಆತಂಕಕ್ಕೊಳಗಾಗಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾಯ್ತು ಪುಂಡಾಟ:

ಚಾಲಕನ ಮೇಲೆ ನಡೆದ ಹಲ್ಲೆಯ ಸಂಪೂರ್ಣ ದೃಶ್ಯಗಳು ಬಸ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಮಹಿಳೆ ಹೇಗೆ ಗೂಂಡಾಗಳನ್ನು ಕರೆಸಿದರು ಮತ್ತು ಅವರು ಹೇಗೆ ದಾಳಿ ಮಾಡಿದರು ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರು ಪೊಲೀಸರ ಮೊರೆ ಹೋದ ಚಾಲಕ:

ಘಟನೆ ನಡೆದ ಕೂಡಲೇ ಚಾಲಕ ಸ್ಥಳೀಯ ಆಂಧ್ರಪ್ರದೇಶದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿದ್ದಾರೆ. ಆದರೆ, ಅಲ್ಲಿನ ಪೊಲೀಸರು ಸ್ಥಳೀಯರ ಪ್ರಭಾವಕ್ಕೆ ಮಣಿದು ಸರಿಯಾಗಿ ಸ್ಪಂದಿಸಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆಂಧ್ರದಲ್ಲಿ ನ್ಯಾಯ ಸಿಗುವುದಿಲ್ಲ ಎಂದು ಅರಿತ ಚಾಲಕ, ಈಗ ಬೆಂಗಳೂರಿಗೆ ಮರಳಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ. ಕರ್ತವ್ಯನಿರತ ಚಾಲಕನ ಮೇಲೆ ಹಲ್ಲೆ ಮಾಡಿದ ಮಹಿಳೆ ಮತ್ತು ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಚಾಲಕರ ಸಂಘಟನೆಗಳು ಒತ್ತಾಯಿಸಿವೆ.