ಬೆಂಗಳೂರಿನ ಹೆಬ್ಬಾಳದಲ್ಲಿ ರಾಂಗ್ ರೂಟ್‌ನಲ್ಲಿ ಬಂದ ಅಯ್ಯಪ್ಪ ಮಾಲಾಧಾರಿ ಆಟೋ ಚಾಲಕನ ಮೇಲೆ ಸಂಚಾರ ಪೊಲೀಸ್ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಚಾಲಕನ ಕಿವಿಯಿಂದ ರಕ್ತಸ್ರಾವವಾಗಿದ್ದು, ಈ ಘಟನೆಯ ವಿಡಿಯೋ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರು: ಇದು ರಾಜ್ಯ ಸಂಚಾರ ಪೊಲೀಸ್‌ ಅಧಿಕಾರಿಗಳು ನೋಡಲೇಬೇಕಾದ ಸುದ್ದಿ. ಅಮಾಯಕರ ಮೇಲೆ ಪೊಲೀಸರು ನಡೆಸುತ್ತಿರುವ ದೌರ್ಜನ್ಯದ ಸುದ್ದಿ. ನಗರದ ಹೆಬ್ಬಾಳ ಸಂಚಾರ ವ್ಯಾಪ್ತಿಯಲ್ಲಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯೊಬ್ಬ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ನಗರದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ರಾಂಗ್ ರೂಟ್‌ನಲ್ಲಿ ಬಂದಿದ್ದ ಆಟೋ ಚಾಲಕನಿಗೆ ದಂಡ ವಿಧಿಸುವ ಬದಲು ಟ್ರಾಫಿಕ್ ಪೊಲೀಸರು ಹಲ್ಲೆ ನಡೆಸಿದ್ದಾರೆ, ಚಾಲಕನ ಕಿವಿಯಿಂದ ರಕ್ತಸ್ರಾವವಾಗುವಷ್ಟರ ಮಟ್ಟಿಗೆ ಗಂಭೀರವಾಗಿ ಹಲ್ಲೆ ಮಾಡಲಾಗಿದೆ ಎಂಬ ಆರೋಪವಿದೆ. ಇದು ಪೊಲೀಸ್‌ ಸಿಬ್ಬಂದಿಯ ದರ್ಪವನ್ನು ಎತ್ತಿ ತೋರಿಸಿದೆ. ಮಾತ್ರವಲ್ಲ ಚಾಲಕ ಓರ್ವ ಅಯ್ಯಪ್ಪ ಮಾಲಾಧಾರಿಯಾಗಿದ್ದ, ಆತ ತಪ್ಪು ಮಾಡಿರಬಹುದು. ಅದಕ್ಕೆ ದಂಡ ವಿಧಿಸಬೇಕು ಬದಲಾಗಿ ಕಿವಿಯಲ್ಲಿ ರಕ್ತ ಸೋರುವಷ್ಟರ ಮಟ್ಟಿಗೆ ಹಲ್ಲೆ ನಡೆಸುವುದು ಪೊಲೀಸರ ಕೆಟ್ಟ ನಡೆಯನ್ನು ತೋರಿಸುತ್ತದೆ.

ಅಯ್ಯಪ್ಪ ಮಾಲಾಧಾರಿಯ ಮೇಲೆ ಪೊಲೀಸ್ ದರ್ಪ

ಹಲ್ಲೆಗೊಳಗಾದ ಆಟೋ ಚಾಲಕನನ್ನು ಬಾಲಕೃಷ್ಣ ಎಂದು ಗುರುತಿಸಲಾಗಿದ್ದು, ಬಾಲಕೃಷ್ಣ ಅವರು ಜಾಲಹಳ್ಳಿಯಿಂದ ಕಾವಲ್ ಭೈರಸಂದ್ರ ಕಡೆ ದೇವಸ್ಥಾನಕ್ಕೆ ತೆರಳುವ ಉದ್ದೇಶದಿಂದ ಆಟೋದಲ್ಲಿ ತೆಂಗಿನಕಾಯಿಗಳನ್ನು ತುಂಬಿಕೊಂಡು ತೆರಳುತ್ತಿದ್ದರು. ಈ ವೇಳೆ ಅವರು ರಾಂಗ್ ರೂಟ್‌ನಲ್ಲಿ ಸಂಚರಿಸಿದ್ದನ್ನು ಗಮನಿಸಿದ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಆಟೋವನ್ನು ತಡೆದಿದ್ದಾರೆ. ಆದರೆ, ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ದಂಡ ವಿಧಿಸುವ ಪ್ರಕ್ರಿಯೆ ಅನುಸರಿಸುವ ಬದಲು, ಟ್ರಾಫಿಕ್ ಪೊಲೀಸ್ ಸಿಬ್ಬಂದಿಯೇ ಚಾಲಕನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಹಲ್ಲೆಯ ಪರಿಣಾಮವಾಗಿ ಬಾಲಕೃಷ್ಣ ಅವರ ಕಿವಿಯಿಂದ ರಕ್ತ ಹರಿದಿದ್ದು, ಘಟನೆ ಸ್ಥಳದಲ್ಲೇ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

ಈ ಘಟನೆ ಹೆಬ್ಬಾಳದ ಭದ್ರಪ್ಪ ಲೇಔಟ್‌ನ ರೈಲ್ವೆ ಗೇಟ್ ಬಳಿ ನಡೆದಿದೆ. ಹಲ್ಲೆಗೊಳಗಾದ ಆಟೋ ಚಾಲಕ ಮತ್ತು ಟ್ರಾಫಿಕ್ ಪೊಲೀಸ್ ಸಿಬ್ಬಂದಿ ನಡುವೆ ನಡೆದ ಮಾತಿನ ಚಕಮಕಿ ಹಾಗೂ ಹಲ್ಲೆಯ ದೃಶ್ಯಗಳನ್ನು ಸ್ಥಳದಲ್ಲಿದ್ದವರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಆ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

ಪೊಲೀಸರೇ ಕಾನೂನು ಪಾಲನೆ ಮಾಡಿ, ಸಾರ್ವಜನಿಕರಿಗೆ ತೊಂದರೆ ಮಾಡಬೇಡಿ

ವಿಡಿಯೋ ವೈರಲ್ ಆದ ಬಳಿಕ ಟ್ರಾಫಿಕ್ ಪೊಲೀಸ್ ಇಲಾಖೆಯ ವರ್ತನೆ ಕುರಿತು ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಕಾನೂನು ಪಾಲನೆ ಮಾಡುವ ಹೆಸರಿನಲ್ಲಿ ಸಾರ್ವಜನಿಕರ ಮೇಲೆ ಹಲ್ಲೆ ನಡೆಸುವುದು ಸರಿಯಲ್ಲ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ತಪ್ಪಿದ್ದರೆ ದಂಡ ವಿಧಿಸುವುದು ಅಥವಾ ಕಾನೂನು ಕ್ರಮ ಕೈಗೊಳ್ಳಬೇಕಿತ್ತು; ಆದರೆ ಪೊಲೀಸ್ ಸಿಬ್ಬಂದಿಯಿಂದ ಹಲ್ಲೆ ನಡೆಯುವುದು ಅಸಹ್ಯಕರ ಎಂಬ ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವ್ಯಕ್ತವಾಗಿವೆ. ಘಟನೆಯ ಸಂಬಂಧ ಟ್ರಾಫಿಕ್ ಪೊಲೀಸ್ ಇಲಾಖೆ ಅಧಿಕಾರಿಗಳು ವಿಡಿಯೋವನ್ನು ಪರಿಶೀಲಿಸಿ, ಘಟನೆಯ ಸತ್ಯಾಸತ್ಯತೆ ಕುರಿತು ತನಿಖೆ ನಡೆಸಬೇಕು. ತಪ್ಪಿತಸ್ಥ ಪೊಲೀಸ್ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.