ಬೆಂಗಳೂರಿನ ಬ್ಯಾಡರಹಳ್ಳಿ ವ್ಯಾಪ್ತಿಯಲ್ಲಿ, ಪೊಲೀಸ್ ಸಮವಸ್ತ್ರ ಧರಿಸಿ ಬಂದ ಇಬ್ಬರು ದುಷ್ಕರ್ಮಿಗಳು ಮನೆಯೊಂದಕ್ಕೆ ನುಗ್ಗಿದ್ದಾರೆ. ಚಾಕು ತೋರಿಸಿ ದಂಪತಿಯನ್ನು ಬೆದರಿಸಿ, 20 ಲಕ್ಷ ರು. ನಗದು ಹಾಗೂ 500 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಬೆಂಗಳೂರು: ಪೊಲೀಸರ ಸಮವಸ್ತ್ರದಲ್ಲಿಯೇ ಮನೆಯೊಂದಕ್ಕೆ ನುಗ್ಗಿರುವ ದುಷ್ಕರ್ಮಿಗಳು 20 ಲಕ್ಷ ರು. ನಗದು ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

ಬಿಇಎಲ್‌ ಲೇಔಟ್‌ ನಿವಾಸಿ ಹೊಂಬಾಳೇಗೌಡ ಅವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಮಧ್ಯಾಹ್ನ 3 ಗಂಟೆ ಸುಮಾರಿಗೆ ಪೊಲೀಸ್ ಸಮವಸ್ತ್ರಧಾರಿಯಾಗಿ ಬಂದ ಇಬ್ಬರು ಆರೋಪಿಗಳು ಬೆದರಿಸಿ 20 ಲಕ್ಷ ರು.ನಗದು, 500 ಗ್ರಾಂ ಚಿನ್ನಾಭರಣ ಸುಲಿಗೆ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಾಕು ತೋರಿಸಿ ಬೆದರಿಕೆ

ರಿಯಲ್‌ ಎಸ್ಟೇಟ್‌ ಏಜೆಂಟ್‌ ಜತೆಗೆ ಗುತ್ತಿಗೆದಾರರಾಗಿರುವ ಹೊಂಬಾಳೇಗೌಡ ಅವರು ಮಧ್ಯಾಹ್ನ 3 ಗಂಟೆ ಸುಮಾರಿಗೆ ಪತ್ನಿ ಮಂಗಳಮ್ಮ ಮತ್ತು ಮೊಮ್ಮಗಳ ಜತೆ ಮನೆಯಲ್ಲಿ ಇದ್ದರು. ಈ ವೇಳೆ ಪೊಲೀಸ್ ಸಮವಸ್ತ್ರದಲ್ಲಿ ಬಂದ ಇಬ್ಬರು ವ್ಯಕ್ತಿಗಳು, ಬಾಗಿಲು ತಟ್ಟಿದ್ದಾರೆ. ಹೊಂಬಾಳೇಗೌಡ ಬಾಗಿಲು ತೆರೆದಾಗ, ಇಬ್ಬರ ಪೈಕಿ ಒಬ್ಬ ತನ್ನನ್ನು ಯಲಹಂಕ ಠಾಣೆಯ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ ಎಂದು ಪರಿಚಯಿಸಿಕೊಂಡಿದ್ದಾನೆ. ನಂತರ ಏಕಾಏಕಿ ಕೈಯಲ್ಲಿ ಡೈರಿ ಹಿಡಿದುಕೊಂಡು ಮನೆಯೊಳಗೆ ಪ್ರವೇಶಿಸಿದ್ದು, ಹೊಂಬಳೇಗೌಡ ಪ್ರತಿಕ್ರಿಯಿಸುವ ಮೊದಲೇ ಖಾಕಿ ಸಮವಸ್ತ್ರದಲ್ಲಿದ್ದ ಮತ್ತೊಬ್ಬ ಕೂಡ ಒಳಗೆ ಪ್ರವೇಶಿಸಿದ್ದಾನೆ. ಇದ್ದಕ್ಕಿದ್ದಂತೆ ಅವರಿಬ್ಬರೂ ಚಾಕುಗಳನ್ನು ತೆಗೆದು ಹೊಂಬಾಳೇಗೌಡರಿಗೆ ಬೆದರಿಕೆ ಹಾಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟೇಪ್‌ ಬಾಯಿಗೆ ಅಂಟಿಸಿದರು! 

ಜೋರು ಶಬ್ದ ಕೇಳಿ ಮಂಗಳಮ್ಮ ಮನೆಯ ಹಾಲ್‌ಗೆ ಬಂದಿದ್ದಾರೆ. ಅವರಿಗೂ ಚಾಕು ತೋರಿಸಿದ ಆರೋಪಿಗಳು, ಇಬ್ಬರಿಗೂ ಟೇಪ್‌ನಿಂದ ಬಾಯಿಗೆ ಸುತ್ತಿ, ಕೈಗಳನ್ನು ಕಟ್ಟಿದ್ದಾರೆ. ಈ ವೇಳೆ ಮಂಗಳಮ್ಮ ಮಾಂಗಲ್ಯ ಸರ ಕೊಡುತ್ತೇನೆ. ನಮ್ಮನ್ನು ಬಿಟ್ಟು ಬಿಡಿ ಎಂದು ಗೋಳಾಡಿದ್ದಾರೆ. ಆದರೆ, ದುಷ್ಕರ್ಮಿಗಳು ಮಾಂಗಲ್ಯ ಸರ ಬೇಡ ಎಂದು ಹೇಳಿ ಮನೆಯ ಎಲ್ಲಾ ಕೋಣೆಗಳನ್ನು ಹುಡುಕಾಟ ನಡೆಸಿ, 20 ಲಕ್ಷ ರು. ನಗದು ಮತ್ತು 500 ಗ್ರಾಂ ಚಿನ್ನವನ್ನು ದೋಚಿದ್ದಾರೆ.

ಇದನ್ನೂ ಓದಿ: Bengaluru: ರಾಜಧಾನಿಗೆ ಬಂದ ಜಮ್ಕೋ: ಪರಿಣಿತ ಎಂಜಿನಿಯರಿಂಗ್‌ ಉದ್ಯೋಗಿಗಳಿಗೆ ಸುವರ್ಣವಕಾಶ

ಜತೆಗೆ ದಂಪತಿ ಮೊಬೈಲ್‌ಗಳು ಮತ್ತು ಸಿಸಿ ಕ್ಯಾಮೆರಾದ ಡಿವಿಆರ್ ಅನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಕೋಣೆಯಲ್ಲಿದ್ದ ಮಗುವಿಗೆ ಯಾವುದೇ ತೊಂದರೆ ಕೊಟ್ಟಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಶೀಘ್ರದಲ್ಲೇ ಜಯನಗರದ 42 ರಸ್ತೆಗಳಲ್ಲಿ ಪೇಯ್ಡ್ ಸ್ಮಾರ್ಟ್ ಪಾರ್ಕಿಂಗ್ ಜಾರಿ, ಎಲ್ಲೆಲ್ಲಿ? ಎಷ್ಟು ಟಿಕೆಟ್?