ಬನ್ನೇರುಘಟ್ಟದಲ್ಲಿ ಗಾಂಜಾ ಸೇವಿಸಿದ ಯುವಕರ ಗುಂಪೊಂದು ಮಹಿಳೆಯ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ನಡೆದಿದೆ. ಸಹಾಯಕ್ಕೆ ಬಂದ ಸ್ನೇಹಿತನನ್ನೇ ಪೊಲೀಸರು ಬಂಧಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಬೆಂಗಳೂರು ನಗರ ಹೊರವಲಯದ ಬನ್ನೇರುಘಟ್ಟ ಬಳಿ ರೇಣುಕಾ ಯಲ್ಲಮ್ಮ ಲೇಔಟ್‌ನಲ್ಲಿ ಗಾಂಜಾ ಸೇವನೆ ಮಾಡಿದ ಯುವಕರ ಗುಂಪಿನಿಂದ ಮಹಿಳೆಯೊಬ್ಬರ ಮೇಲೆ ದೌರ್ಜನ್ಯ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ಘಟನೆಯ ಸಂಪೂರ್ಣ ದೃಶ್ಯಗಳು ಹತ್ತಿರದ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಶ್ಚರ್ಯಕರ ಸಂಗತಿಯೆಂದರೆ, ಮಹಿಳೆಗೆ ಸಹಾಯ ಮಾಡಲು ಬಂದ ಆಕೆಯ ಸ್ನೇಹಿತನನ್ನೇ ಪೊಲೀಸರು ಬಂಧಿಸಿದ್ದಾರೆ. ಎರಡೂ ಕಡೆಯಿಂದ ದೂರು, ಪ್ರತಿದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಮಾನು ತರಲು ಹೋದ ಮಹಿಳೆಗೆ, ದಾರಿಯಲ್ಲಿ ತಡೆದು ದೌರ್ಜನ್ಯ

ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮಹಿಳೆ ತನ್ನ ಮನೆಯಿಂದ ಅಂಗಡಿಗೆ ಸಾಮಗ್ರಿಗಳನ್ನು ತರಲು ಹೊರಟಿದ್ದಾಗ, ಕೆಲವು ಮದ್ಯ ಮತ್ತು ಗಾಂಜಾದ ನಶೆಯಲ್ಲಿದ್ದ ಯುವಕರು ಆಕೆಯನ್ನು ದಾರಿಯಲ್ಲಿ ಅಡ್ಡಹಾಕಿ ತಡೆದಿದ್ದಾರೆ. ಸಿಸಿಟಿವಿಯಲ್ಲಿ ಒಬ್ಬ ಯುವಕ ಆಕೆಯನ್ನು ಹಿಡಿದು ಅಸಭ್ಯವಾಗಿ ವರ್ತಿಸಲು ಯತ್ನಿಸುತ್ತಿರುವುದು ಹಾಗೂ ಅವರಿಂದ ಮಹಿಳೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಮಹಿಳೆ ಪ್ರತಿಭಟಿಸಿದಾಗ ಒಬ್ಬ ಯುವಕ ಆಕೆಯ ಮುಖಕ್ಕೆ ಹೊಡೆದಿದ್ದು, ನಂತರ ಗುಂಪು ಸೇರಿ ಹಲ್ಲೆ ನಡೆಸಿರುವುದು ಕೂಡ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸಹಾಯಕ್ಕೆ ಬಂದವರ ಮೇಲೂ ಹಲ್ಲೆ, ಆರೋಪಿಗಳು ಪರಾರಿ

ಇನ್ನು ಅಲ್ಲಿದ್ದ ಸ್ಥಳೀಯರು ಮತ್ತು ಮಹಿಳೆಯ ಸ್ನೇಹಿತ ಬಂದು ಆಕೆಯನ್ನು ರಕ್ಷಿಸಿದರು. ಆದರೆ ನಂತರ ಆರೋಪಿಗಳು ಮಹಿಳೆಯ ಮನೆಯಿರುವ ಪ್ರದೇಶಕ್ಕೆ ನುಗ್ಗಿ ಹಲ್ಲೆ ನಡೆಸಿದರು. ಮತ್ತೊಂದು ವಿಡಿಯೋದಲ್ಲಿ ಆರೋಪಿಗಳು ವಸತಿ ಸಮುಚ್ಚಯದ ಗೇಟ್‌ವರೆಗೂ ಬಂದು ಗಲಾಟೆ ಮಾಡಿರುವುದು ಕಂಡುಬಂದಿದೆ. ಈ ಘಟನೆ ಇಡೀ ಬೆಂಗಳೂರು ನಗರವನ್ನೇ ಬೆಚ್ಚಿ ಬೀಳಿಸಿದೆ. ಹಾಡ ಹಗಲೇ ನಶೆಯಲ್ಲಿ ಒಬ್ಬ ಮಹಿಳೆಯೊಂದಿಗೆ ಅಸಭ್ಯವಾಗಿ ನಡೆದುಕೊಂಡು, ಆಕೆಯ ಖಾಸಗಿ ಭಾಗಗಳನ್ನು ಮುಟ್ಟಲು ಮುಂದಾಗಿದ್ದಾರೆ. ಈ ಲೈಂಗಿಕ ದೌರ್ಜನ್ಯ ವಿರೋಧಿಸಿದ್ದಕ್ಕೆ ಹಲ್ಲೆ ಮಾಡಿರುವುದು ಸ್ಥಳೀಯರಲ್ಲಿ ಮಹಿಳಾ ರಕ್ಷಣೆಯ ಕುರಿತು ಭಾರೀ ಅಸಮಾಧಾನ ವ್ಯಕ್ತವಾಗಿದೆ.

ಘಟನೆಯ ಕುರಿತು ಸೋಮವಾರ ಮಧ್ಯಮಗಳೊಂದಿಗೆ ಮಾತನಾಡಿದ ಮಹಿಳೆ, 'ನಾನು ಅಂಗಡಿಗೆ ಹೋಗುತ್ತಿದ್ದಾಗ ಕೆಲವರು ರಸ್ತೆಯ ಮಧ್ಯದಲ್ಲಿ ಜಗಳವಾಡುತ್ತಿರುವುದನ್ನು ನೋಡಿದೆ. ಅವರು ನನ್ನನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ದೌರ್ಜನ್ಯ ಎಸಗಿದರು. ಅವರು ಪೇಂಟ್ ತಿನ್ನರ್ ಮತ್ತು ಗಾಂಜಾ ಸೇವಿಸಿದ್ದರು' ಎಂದು ತಿಳಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 74 ರ ಅಡಿಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ. ಆದರೆ, ಇಲ್ಲಿ ಪೊಲೀಸರು ಮಹಿಳೆಯನ್ನು ರಕ್ಷಣೆ ಮಾಡಲು ಸಹಾಯ ಮಾಡಿದ ಸ್ನೇಹಿತನನ್ನೂ ಬಂಧನ ಮಾಡಿದ್ದಾರೆ. ಇನ್ನು ಮಹಿಳೆಯು ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 74 (ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ) ಮತ್ತು ಇತರ ಕಲಂಗಳ ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.