ಬಸವಣ್ಣನವರು ಕಾಯಕವೇ ಕೈಲಾಸ ಎಂಬ ಸಂದೇಶದೊಂದಿಗೆ ದುಡಿಯಬೇಕು, ದುಡಿದು ಗಳಿಸಬೇಕು, ಗಳಿಸಿದ್ದನ್ನು ಉಳಿಸಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅಭಿಪ್ರಾಯ ವ್ಯಕ್ತಪಡಿಸಿದರು.

ಭಾಲ್ಕಿ (ಏ.22): ಬಸವಣ್ಣನವರು ಕಾಯಕವೇ ಕೈಲಾಸ ಎಂಬ ಸಂದೇಶದೊಂದಿಗೆ ದುಡಿಯಬೇಕು, ದುಡಿದು ಗಳಿಸಬೇಕು, ಗಳಿಸಿದ್ದನ್ನು ಉಳಿಸಬೇಕು, ಉಳಿಸಿದ್ದನ್ನು ದಾಸೋಹದ ಮೂಲಕ ಸಮಾಜಕ್ಕೆ ಮರಳಿ ನೀಡಬೇಕು ಎಂದು ಸಾರಿದಂತೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಗೆ ಈ ದಾಸೋಹ ತತ್ವವೇ ಪ್ರೇರಣೆಯಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಭಾಲ್ಕಿಯ ಹಿರೇಮಠ ಸಂಸ್ಥಾನದ ಆವರಣದಲ್ಲಿ ನಡೆಯುತ್ತಿರುವ ನಾಡೋಜ ಬಸವಲಿಂಗ ಪಟ್ಟದ್ದೇವರ ಅಮೃತಮಹೋತ್ಸವ ಹಾಗೂ ಲಿಂ. ಚನ್ನಬಸವ ಪಟ್ಟದ್ದೇವರ 27ನೇ ಸಂಸ್ಮರಣೋತ್ಸವದಲ್ಲಿ ಮಾತನಾಡಿ, ಇದಷ್ಟೇ ಅಲ್ಲ ಬಸವಾದಿ ಪ್ರಮಥರು ಅನುಭವಮಂಟಪದಲ್ಲಿ ಎಲ್ಲ, ಜಾತಿ ಜನಾಂಗದವರಿಗೂ ಸಮಾನ ಅವಕಾಶ ನೀಡಿದ್ದರು. ಇಲ್ಲಿ ಲಿಂಗತಾರತಮ್ಯವೂ ಇರಲಿಲ್ಲ, ಅಕ್ಕಮಹಾದೇವಿ, ಸತ್ಯಕ್ಕ, ಆಯ್ದಕ್ಕಿ ಲಕ್ಕಮ್ಮ, ನೀಲಾಂಬಿಕೆ, ಮುಕ್ತಾಯಕ್ಕ ಮೊದಲಾದವರು ತಮ್ಮ ವಿಚಾರಧಾರೆಗಳನ್ನು ಮುಂಡಿಸುತ್ತಿದ್ದರು. ಇದು ಮಹಿಳಾ ಸಬಲೀಕರಣದ ಸಂಕೇತವಾಗಿದ್ದು, ನಮ್ಮ ಸರ್ಕಾರ ಗೃಹಲಕ್ಷ್ಮೀ, ಶಕ್ತಿ ಯೋಜನೆಯ ಮೂಲಕ ಅದನ್ನೂ ಮುಂದುವರಿಸಿದೆ ಎಂದರು.

ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಶತಾಯುಷಿ ಶ್ರೀ ಚನ್ನಬಸವ ಪಟ್ಟದ್ದೇವರ 27ನೇ ಸಂಸ್ಮರಣೋತ್ಸವ ನಡೆಸುತ್ತಿದ್ದೇವೆ. ಅವರು, ಕ್ರಾಂತಿ ಪುರುಷರು. ಅಸ್ಪೃಶ್ಯತೆಯ ಆಚರಣೆ ತೊಡೆದು ಹಾಕಲು ನಮ್ಮ ತಂದೆ ಲಿಂ.ಲೋಕನಾಯಕ ಡಾ.ಭೀಮಣ್ಣ ಖಂಡ್ರೆ ಅವರಿಗೆ ಬೆಂಬಲವಾಗಿ ನಿಂತು ಭಾಲ್ಕೇಶ್ವರ ದೇವಾಲಯಕ್ಕೆ ಅಶೋಕನಗರ ನಿವಾಸಿಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದರು. ಇಂದು ನಾವು ಕಾಣುತ್ತಿರುವ ಶಿವಲಿಂಗದಾಕಾರದ ಅನುಭವ ಮಂಟಪದ ನಿರ್ಮಾಣದ ಶ್ರೇಯಸ್ಸು ಚನ್ನಬಸವಪಟ್ಟದ್ದೇವರಿಗೆ ಆಗಲೂ ತಲೆ ಮೇಲೆ ಇಟ್ಟಿಗೆ ಹೊತ್ತು ಕಟ್ಟಡ ನಿರ್ಮಿಸಿದ್ದು ಆದರ್ಶವಾಗಿದೆ ಎಂದರು.

ಉಪ ರಾಷ್ಟ್ರಪತಿಗಳು ಆಗಮಿಸಿರುವುದು ಯೋಗಾಯೋಗ

ನಿಜಾಮರ ಆಳ್ವಿಕೆಯ ಕಾಲದಲ್ಲಿ ಕನ್ನಡ ಕಲಿಸಲು ಅವಕಾಶ ಇರಲಿಲ್ಲ. ಆಗ ಹೊರಗೆ ಉರ್ದು ಫಲಕ ಹಾಕಿ ಒಳಗೆ ಕನ್ನಡ ಕಲಿಸಲು ಶ್ರಮಿಸಿದ ಪಟ್ಟದ್ದೇವರು, ಮಕ್ಕಳಿಗೆ ವಚನ ಸಾರ ತಿಳಿಯುವಂತೆ ಮಾಡಿದ್ದರು. ತಮ್ಮ ದೀಕ್ಷಾ ಗುರು ಚನ್ನಬಸವ ಪಟ್ಟದ್ದೇವರ ಶತಮಾನೋತ್ಸವವನ್ನು ಭೀಮಣ್ಣ ಖಂಡ್ರೆ ಅವರು ಅದ್ಧೂರಿಯಾಗಿ ನಡೆಸಿದ್ದರು, ಆಗ ಅಂದಿನ ರಾಷ್ಟ್ರಪತಿ ಡಾ.ಶಂಕರದಯಾಳ್ ಶರ್ಮಾ ಆಗಮಿಸಿದ್ದರು. ಇಂದಿನ ಪೀಠಾಧಿಪತಿಗಳ ಅಮೃತ ಮಹೋತ್ಸವಕ್ಕೆ ಉಪ ರಾಷ್ಟ್ರಪತಿಗಳು ಆಗಮಿಸಿರುವುದು ಯೋಗಾಯೋಗ ಎಂದು ಈಶ್ವರ ಖಂಡ್ರೆ ಹೇಳಿದರು.

ನಾಡೋಜ ಬಸವಲಿಂಗ ಪಟ್ಟದ್ದೇವರು, ಮಾಸಿಕ ಶರಣ ಸಂಗಮ, ಶಿವಾನುಭವ ಪ್ರವಚನ, ವಚನ ಗಾಯನದಂತಹ ಕಾರ್ಯಕ್ರಮಗಳ ಮೂಲಕ ಶರಣರ ವಚನಗಳ ಪ್ರಚಾರ ಪ್ರಸಾರ ಮಾಡುತ್ತಿದ್ದಾರೆ, ಸರಳ ಸಾಮೂಹಿಕ ವಿವಾಹಗಳನ್ನು ಆಯೋಜಿಸುವ ಮೂಲಕ ಬಡವರು ಸಾಲದ ಸುಳಿಗೆ ಸಿಲುಕದಂತೆ ರಕ್ಷಿಸಿ ದ್ದಾರೆ. ಇವರ ಸಾಧನೆಗಳನ್ನು ಗುರುತಿಸಿ ಹಂಪಿ ವಿಶ್ವವಿದ್ಯಾಲಯ ಅವರಿಗೆ ನಾಡೋಜ ಗೌರವ ನೀಡಿದೆ. ಅವರು ನೂರ್ಕಾಲ ಬಾಳಲಿ ನಮಗೆ ಮಾರ್ಗದರ್ಶನ ನೀಡಲಿ ಎಂದರು.

ಭಾಲ್ಕಿಯ ಮಣ್ಣಿನ ಮಗನಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಯತ್ನದ ಫಲವಾಗಿ ಕಲ್ಯಾಣ ಕರ್ನಾಟಕಕ್ಕೆ 371 ಜೆ ಸಾಂವಿಧಾನಿಕ ತಿದ್ದುಪಡಿ ಯೊಂದಿಗೆ ವಿಶೇಷ ಸ್ಥಾನಮಾನ ದೊರಕಿದೆ. ಇಂದು ಅದು ಕಾಯ್ದೆಯಾಗಿದ್ದು ನಮ್ಮ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು. ಬುದ್ಧ, ಬಸವ, ಅಂಬೇಡ್ಕರ್ ಅವರ ಅನುಯಾಯಿಯಾದ ಮಲ್ಲಿಕಾರ್ಜುನ ಖರ್ಗೆ ಅವರು, ತಮ್ಮ ಜೀವನದ ಉದ್ದಕ್ಕೂ ವಂಚಿತರಿಗೆ, ನೊಂದವರಿಗೆ ನ್ಯಾಯ ದೊರಕಿಸಲು ಹಾಗೂ ಸರ್ವರ ಸಮಾನತೆಗಾಗಿ ಶ್ರಮಿಸುತ್ತಿದ್ದಾರೆ, ಅವರು ಒಬ್ಬ ಮುತ್ಸದ್ದಿ ರಾಜಕಾರಣಿ ಎಂದು ಬಣ್ಣಿಸಿದರು.