ಹರಿಹರದ ಪಂಚಮಸಾಲಿ ಪೀಠದ ವಿವಾದಕ್ಕೆ ಸಂಬಂಧಿಸಿ, ಶಾಂತಿಭಂಗ ತಡೆಯಲು ಪೊಲೀಸರು ಉಭಯ ಬಣಗಳ 20 ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಿಎನ್‌ಎಸ್‌ಎಸ್‌ ಕಲಂ 126ರ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ತಹಸೀಲ್ದಾರರು ಮುಂದಿನ ವಿಚಾರಣೆ ನಡೆಸಲಿದ್ದಾರೆ.

ಹರಿಹರ (ಏ.30): ಪಂಚಮಸಾಲಿ ಪೀಠದ ವಿವಾದಕ್ಕೆ ಸಂಬಂಧಪಟ್ಟಂತೆ ಏ.24ರಂದು ಮಠದ ಆವರಣದಲ್ಲಿ ಶಾಂತಿಭಂಗ ಉಂಟಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಗ್ರಾಮಾಂತರ ಠಾಣೆಯ ಪೊಲೀಸರು ಏ.22ರಂದು ಉಭಯ ಬಣಗಳ ಒಟ್ಟು 20 ಮುಖಂಡರ ವಿರುದ್ಧ ಬಿಎನ್‌ಎಸ್‌ಎಸ್‌ ಕಲಂ 126ರಡಿ ಪ್ರಕರಣ ದಾಖಲಿಸಿದ್ದಾರೆ. 

ಏ.24ರಂದು ಮಠದಲ್ಲಿ ಬಸವೋತ್ಸವ ಹಾಗೂ ರಾಜ್ಯ ಸಮಾವೇಶ ಆಯೋಜಿಸಲು ಮುಂದಾಗಿದ್ದ ಉಚ್ಚಾಟಿತ ವಚನಾನಂದ ಸ್ವಾಮೀಜಿ ಬಣದ 10 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅದೇ ರೀತಿ ಮಠವು ಟ್ರಸ್ಟ್‌ನ ಒಡೆತನದಲ್ಲಿದ್ದು, ಟ್ರಸ್ಟ್‌ನವರಿಂದ ಶಾಂತಿ ಕದಡುವ ವಾತಾವರಣ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಟ್ರಸ್ಟ್ ಪರವಾಗಿರುವ 10 ಜನರ ವಿರುದ್ಧವೂ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ಈ ಎರಡೂ ಗುಂಪುಗಳ ವಿರುದ್ಧ ಪೊಲೀಸರು ಕ್ರಮ ಕೈಗೊಂಡ ವರದಿಯನ್ನು ತಹಸೀಲ್ದಾರ್‌ಗೆ ಸಲ್ಲಿಸಿದ್ದಾರೆ.

ಇದರ ಮುಂದಿನ ಪ್ರಕ್ರಿಯೆಯಾಗಿ ತಹಸೀಲ್ದಾರರು, ಕೇಸ್‌ ದಾಖಲಾದ ವ್ಯಕ್ತಿಗಳಿಗೆ ‘ಕಾರಣ ಕೇಳುವ ನೋಟಿಸ್’ ನೀಡಲಿದ್ದಾರೆ. ನಂತರ ಸಾರ್ವಜನಿಕ ಶಾಂತಿ ಕದಡದಂತೆ ಏಕೆ ಮುಚ್ಚಳಿಕೆ ಪತ್ರ ಬರೆಯಿಸಬಾರದು ಎಂಬ ಬಗ್ಗೆ ವಿಚಾರಣೆ ನಡೆಸಲಿದ್ದಾರೆ. ಆಗ ಗರಿಷ್ಠ 1 ವರ್ಷದ ಅವಧಿಗೆ ಶಾಂತಿ ಪಾಲನೆಯ ಬಾಂಡ್ ಅನ್ನು ಶ್ಯೂರಿಟಿ ಸಮೇತ ಅಥವಾ ಇಲ್ಲದೆಯೇ ಬರೆಯಿಸಿಕೊಳ್ಳಲಾಗುತ್ತದೆ. ಒಂದುವೇಳೆ ಈ ಅವಧಿಯಲ್ಲಿ ಶಾಂತಿ ಪಾಲನೆಯಲ್ಲಿ ವೈಫಲ್ಯ ಉಂಟಾದಲ್ಲಿ, ಬರೆಯಿಸಿಕೊಂಡ ಬಾಂಡ್ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲು ಅಥವಾ ಕಾನೂನು ರೀತ್ಯಾ ಶಿಕ್ಷಿಸಲು ಅವಕಾಶವಿದೆ.