ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಅಲಖನೋರ ಗ್ರಾಮದ ಬಳಿ ಲಾರಿ ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ ಜಯಸಿಂಗಪುರ ನಿವಾಸಿಗಳಾದ ದಂಪತಿ ಮತ್ತು ಅವರ ಮಗಳು ಜಮಖಂಡಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಚಿಕ್ಕೋಡಿ: ವ್ಯಾಪ್ತಿಯಲ್ಲಿ ಮನಕಲಕುವ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಲಾರಿ ಹಾಗೂ ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಗಂಡ, ಹೆಂಡತಿ ಮತ್ತು ಮಗಳು ಸೇರಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ದುರ್ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕು ವ್ಯಾಪ್ತಿಯ ಅಲಖನೋರ ಗ್ರಾಮದ ಹೊರವಲಯದಲ್ಲಿ, ಜಮಖಂಡಿ–ಮೀರಜ ರಾಜ್ಯ ಹೆದ್ದಾರಿ ಮೇಲೆ ನಡೆದಿದೆ. ಅಪಘಾತದ ತೀವ್ರತೆ ಎಷ್ಟರ ಮಟ್ಟಿಗೆ ಇತ್ತು ಎಂಬುದಕ್ಕೆ ಸಾಕ್ಷಿಯಾಗಿ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.

ಜಮಖಂಡಿಗೆ ತೆರಳುತ್ತಿದ್ದ ವೇಳೆ ದುರಂತ

ಮೃತರನ್ನು ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜಯಸಿಂಗಪುರ ನಿವಾಸಿಗಳಾದ ಗಿರೇಪ್ಪಾ ಕುಂದರಾಳಿ (38), ಅವರ ಪತ್ನಿ ಮಂಜುಳಾ ಕುಂದರಾಳಿ (28) ಹಾಗೂ ಅವರ ಏಳು ವರ್ಷದ ಪುತ್ರಿ ಆರಾಧ್ಯಾ ಎಂದು ಗುರುತಿಸಲಾಗಿದೆ. ಗಿರೇಪ್ಪಾ ಅವರು ಜಯಸಿಂಗಪುರದಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು. ಕುಟುಂಬ ಸಮೇತ ತಮ್ಮ ಸ್ವಗ್ರಾಮವಾದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಲಾರಿ–ಬೈಕ್ ನಡುವೆ ಭೀಕರ ಡಿಕ್ಕಿ

ಪ್ರತ್ಯಕ್ಷದರ್ಶಿಗಳ ಪ್ರಕಾರ, ವೇಗವಾಗಿ ಬರುತ್ತಿದ್ದ ಲಾರಿ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಡಿಕ್ಕಿಯ ತೀವ್ರತೆಗೆ ಬೈಕ್ ಸವಾರರು ರಸ್ತೆಗೆ ಎಸೆಯಲ್ಪಟ್ಟರು. ಗಂಭೀರ ಗಾಯಗಳಿಂದ ಗಿರೇಪ್ಪಾ, ಮಂಜುಳಾ ಮತ್ತು ಚಿಕ್ಕ ಮಗಳು ಆರಾಧ್ಯಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಸುದ್ದಿ ತಿಳಿದ ತಕ್ಷಣ ಸ್ಥಳೀಯರು ಧಾವಿಸಿ ರಕ್ಷಣೆಗೆ ಮುಂದಾದರೂ, ಅದಾಗಲೇ ಅವರ ಪ್ರಾಣಪಕ್ಷ ಹಾರಿಹೋಗಿತ್ತು.

ಸ್ಥಳಕ್ಕೆ ಪೊಲೀಸರು ಭೇಟಿ, ಲಾರಿ ಚಾಲಕ ವಶಕ್ಕೆ

ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಸ್ಥಳಕ್ಕೆ ಹಾರುಗೇರಿ ಪೊಲೀಸರು ಬೇಟೆ ನೀಡಿ ಪರಿಶೀಲನೆ ನಡೆಸಿದರು. ಅಪಘಾತಕ್ಕೆ ಕಾರಣವಾದ ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ಮುಂದುವರಿದಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಈ ಸಂಬಂಧ ಹಾರುಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಪಘಾತಕ್ಕೆ ನಿಖರ ಕಾರಣ ಏನು ಎಂಬುದರ ಬಗ್ಗೆ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ಕೈಗೊಂಡಿದ್ದಾರೆ.