ಕಳೆದ ಎರಡು ವರ್ಷಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಮಾನ ಮತ್ತು ಹೆಲಿಕಾಪ್ಟರ್ ಪ್ರಯಾಣದ ವೆಚ್ಚ ₹47.38 ಕೋಟಿ ತಲುಪಿದೆ ಎಂದು ಬೆಳಗಾವಿ ಅಧಿವೇಶನದಲ್ಲಿ ಸರ್ಕಾರ ಮಾಹಿತಿ ನೀಡಿದೆ. ವೆಚ್ಚವನ್ನು ಕಡಿಮೆ ಮಾಡಲು ವಾರ್ಷಿಕ ಗುತ್ತಿಗೆ ಆಧಾರದ ಮೇಲೆ ಹೆಲಿಕಾಪ್ಟರ್‌ ಸೇವೆಗೆ ಸರ್ಕಾರ ಚಿಂತನೆ ನಡೆಸಿದೆ.

ಬೆಳಗಾವಿ (ಡಿ.11): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಮಾನ ಮತ್ತು ಹೆಲಿಕಾಪ್ಟರ್ ಪ್ರಯಾಣದ ವೆಚ್ಚವು ಕಳೆದ ಎರಡು ವರ್ಷಗಳಲ್ಲಿ (2023 ರಿಂದ 2025ರ ನವೆಂಬರ್ ವರೆಗೆ) ಬರೋಬ್ಬರಿ ₹47.38 ಕೋಟಿ ತಲುಪಿದೆ. ಇಂದು (ಡಿಸೆಂಬರ್ 11) ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಎಂಎಲ್‌ಸಿ ರವಿಕುಮಾರ್ ಅವರ ಪ್ರಶ್ನೆಗೆ ಸರ್ಕಾರ ನೀಡಿದ ಉತ್ತರದ ಮೂಲಕ ಈ ಮಾಹಿತಿ ಸದನದಲ್ಲಿ ಬಹಿರಂಗಗೊಂಡಿದೆ.

ಕಳೆದ ಎರಡು ವರ್ಷಗಳಲ್ಲಿ ಸಿದ್ದರಾಮಯ್ಯ ಅವರ ಹೆಲಿಕಾಪ್ಟರ್‌ ಹಾಗೂ ವಿಮಾನ ಪ್ರಯಾಣದ ಒಟ್ಟು ವೆಚ್ಚ ₹47,38,24,347 ಎಂದು ಸರ್ಕಾರ ತಿಳಿಸಿದೆ ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಮತ್ತು ದೆಹಲಿ, ಚೆನ್ನೈ, ಹೈದರಾಬಾದ್‌ನಂತಹ ಹೊರ ರಾಜ್ಯಗಳಿಗೆ ಅಧಿಕೃತ ಓಡಾಟ ಮಾಡಿದ್ದರಿಂದ ಈ ವೆಚ್ಚವಾಗಿದೆ ಎಂದು ಸರ್ಕಾರ ತಿಳಿಸಿದೆ. ಸಿದ್ದರಾಮಯ್ಯ ಅವರ ಹೆಲಿಕಾಪ್ಟರ್ ಪ್ರಯಾಣಕ್ಕೆ 2023-24ರಲ್ಲಿ 12.65 ಕೋಟಿ ರೂ. ಮತ್ತು 2024-25ರ ಜನವರಿ 15 ರವರೆಗೆ 19.35 ಕೋಟಿ ರೂ. ವೆಚ್ಚ ಮಾಡಲಾಗಿತ್ತು.

ಕೇವಲ ಒಂದೂವರೆ ಗಂಟೆ ಪ್ರಯಾಣದ ಮೈಸೂರಿನಂತಹ ಹತ್ತಿರದ ಸ್ಥಳಗಳಿಗೂ ಸಿಎಂ ಹೆಲಿಕಾಪ್ಟರ್ ಬಳಸಿದ್ದಾರೆ ಎಂದು ಮಾಹಿತಿ ನೀಡಲಾಗಿದೆ. ಈ ಹಿಂದೆ ಕಾವೇರಿ ನಿವಾಸದ ನವೀಕರಣಕ್ಕೆ ಕೋಟಿಗಟ್ಟಲೆ ಖರ್ಚು ಮಾಡಿರುವ ಸಿಎಂ, ಇದೀಗ ವಿಮಾನಯಾನ ವೆಚ್ಚದಿಂದಾಗಿ ಮತ್ತೆ ಸುದ್ದಿಯಲ್ಲಿದ್ದಾರೆ.

ಸಾಮಾನ್ಯವಾಗಿ ವಿಮಾನ ನಿಲ್ದಾಣಗಳಿರುವ ನಗರಗಳಾದ ಹುಬ್ಬಳ್ಳಿ, ಕಲಬುರಗಿ, ಮೈಸೂರು, ಬೆಳಗಾವಿಗೆ ಹೆಚ್ಚಾಗಿ ವಿಮಾನದಲ್ಲಿಯೇ ಹೋಗುತ್ತಾರೆ. ವಿಮಾನ ನಿಲ್ದಾಣಗಳಿಲ್ಲದ ಜಿಲ್ಲೆಗಳಿಗೆ ವಿಶೇಷ ಹೆಲಿಕಾಪ್ಟರ್‌ನಲ್ಲಿ ಪ್ರಯಾಣ ಮಾಡುತ್ತಾರೆ.

ವಾರ್ಷಿಕ ಗುತ್ತಿಗೆ ಆಧಾರದಲ್ಲಿ ಹೆಲಿಕಾಪ್ಟರ್‌ ಸೇವೆ

ದಿನದ ಬಾಡಿಗೆ ಲೆಕ್ಕದಲ್ಲಿ ವಿಮಾನ ಮತ್ತು ಹೆಲಿಕಾಪ್ಟರ್ ಸೇವೆಗಳು ದುಬಾರಿಯಾಗುತ್ತಿರುವುದರಿಂದ ಹಾಗೂ ತುರ್ತು ಸಂದರ್ಭದಲ್ಲಿ ಲಭ್ಯತೆಯ ಕೊರತೆಯ ಕಾರಣದಿಂದ, ಸಿಎಂ, ಡಿಸಿಎಂ, ಹಿರಿಯ ಸಚಿವರು ಮತ್ತು ಅಧಿಕಾರಿಗಳ ಬಳಕೆಗಾಗಿ ವಾರ್ಷಿಕ ಗುತ್ತಿಗೆ (Annual Contract) ಪಡೆಯಲು ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಟೆಂಡರ್ ಪ್ರಕ್ರಿಯೆ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಲಾಗಿದೆ.