ಮಂಗಳವಾರ ರಾತ್ರಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಫ್ಲೈ-91 ವಿಮಾನವು ಹವಾಮಾನ ವೈಪರೀತ್ಯದ ಕಾರಣ ನೀಡಿ ಒಂದು ಗಂಟೆಗೂ ಹೆಚ್ಚು ಕಾಲ ಆಗಸದಲ್ಲೇ ಸುತ್ತಾಡಿದೆ. ಐದು ದಿನಗಳಲ್ಲಿ ಇದು ಎರಡನೇ ಬಾರಿಯಾಗಿದ್ದು, ಇದೇ ಸಮಯದಲ್ಲಿ ಇಂಡಿಗೋ ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
ಹುಬ್ಬಳ್ಳಿ: ಕಳೆದ ಎರಡು ದಿನದ ಹಿಂದೆಯಷ್ಟೇ ಬರೋಬ್ಬರಿ 3 ಗಂಟೆ ಕಾಲ ಆಗಸದಲ್ಲೇ ಸುತ್ತಾಡಿ ಆತಂಕ ಸೃಷ್ಟಿಸಿದ್ದ ಫ್ಲೈ- 91 ವಿಮಾನ ಮಂಗಳವಾರ ರಾತ್ರಿ ಮತ್ತೆ ಒಂದು ಗಂಟೆಗೂ ಅಧಿಕ ಕಾಲ ಆಗಸದಲ್ಲೇ ಸುತ್ತಾಡಿದೆ.
ಈಗಲೂ ಹವಾಮಾನ ವೈಪರೀತ್ಯವೇ ಕಾರಣ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಆದರೆ, ಉಳಿದ ವಿಮಾನಗಳಿಗೆ ಆಗದ ಹವಾಮಾನ ಸಮಸ್ಯೆ ಈ ಸಂಸ್ಥೆಯ ವಿಮಾನಕ್ಕಷ್ಟೇ ಏಕೆ ಆಗುತ್ತಿದೆ ಎಂಬ ಪ್ರಶ್ನೆ ಸಾರ್ವಜನಿಕರದ್ದು. ಕಾರ್ಯಾರಂಭ ಮಾಡಿದ 5 ದಿನದಲ್ಲಿ ಎರಡನೇ ಬಾರಿ ಆತಂಕ ಸೃಷ್ಟಿಸಿದೆ.
ಆಗಿದ್ದೇನು?
ಮಂಗಳವಾರ ಸಂಜೆ ಫ್ಲೈ- 91 ವಿಮಾನ ಬೆಂಗಳೂರಿನಿಂದ ಹೊರಟು 8.20ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಆ ಸಮಯದಲ್ಲಿ ಮಳೆ ಇದ್ದ ಪರಿಣಾಮ ಲ್ಯಾಂಡ್ ಆಗಲು ಸಾಧ್ಯವಾಗದೇ, ಆಗಸದಲ್ಲೇ ಒಂದು ಗಂಟೆಗೂ ಅಧಿಕ ಕಾಲ ಸುತ್ತಿದೆ. ಬಳಿಕ 9.30ಕ್ಕೆ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಈ ನಡುವೆ ಇದೇ ವೇಳೆ 6.50ಕ್ಕೆ ಬೆಂಗಳೂರು ಬಿಟ್ಟಿದ್ದ ಇಂಡಿಗೋ ವಿಮಾನ ಹುಬ್ಬಳ್ಳಿಯಲ್ಲಿ 8.10ಕ್ಕೆ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಜತೆಗೆ 8.50ಕ್ಕೆ ಇಲ್ಲಿಂದ ಸುರಕ್ಷಿತವಾಗಿ ಟೇಕಾಫ್ ಕೂಡ ಆಗಿದೆ. ಅದಕ್ಕೆ ಆಗದ ಹವಾಮಾನ ವೈಪರೀತ್ಯ ಫ್ಲೈ- 91ಕ್ಕಷ್ಟೇ ಏಕೆ ಎಂಬ ಪ್ರಶ್ನೆ ಸಾರ್ವಜನಿಕರದ್ದು.


