ಧಾರವಾಡದ ಐಐಟಿಯಲ್ಲಿ ಎನ್‌ಸಿಸಿ ಆಯ್ಕೆ ರನ್ನಿಂಗ್‌ರೇಸ್ ವೇಳೆ ವಿದ್ಯಾರ್ಥಿಯೊಬ್ಬ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಬಿಹಾರ ಮೂಲದ ಅಸ್ತಿತ್ವ ಗುಪ್ತಾ (20) ಎಂಬ ಎಂ.ಟೆಕ್ ವಿದ್ಯಾರ್ಥಿ ಓಡುತ್ತಿದ್ದಾಗ ಹೃದಯಾಘಾತದಿಂದ ಕುಸಿದು ಬಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಧಾರವಾಡ (ಆ.25): ಶಿಕ್ಷಣ ಕಾಶಿ ಧಾರವಾದ ನಗರದ ಪ್ರತಿಷ್ಠಿತ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯಲ್ಲಿ ದುಃಖಕರ ಘಟನೆಯೊಂದು ನಡೆದಿದೆ. ಎನ್‌ಸಿಸಿ (National Cadet Corps-NCC) ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಯೊಬ್ಬ, ರನ್ನಿಂಗ್‌ರೇಸ್ ವೇಳೆ ಕುಸಿದುಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ ದಾರುಣ ಘಟನೆ ನಡದಿದೆ.
ಬಿಹಾರ ಮೂಲದ ಅಸ್ತಿತ್ವ ಗುಪ್ತಾ (20) ಎಂಬ ಎಂ.ಟೆಕ್ ವಿದ್ಯಾರ್ಥಿಯೇ ಈ ದುರಂತಕ್ಕೆ ಬಲಿಯಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಐಐಟಿ ಕ್ಯಾಂಪಸ್‌ನಲ್ಲಿ ಎನ್‌ಸಿಸಿ ಆಯ್ಕೆಗಾಗಿ ವಿದ್ಯಾರ್ಥಿಗಳಿಗೆ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಸ್ತಿತ್ವ ಗುಪ್ತಾ ಓಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದುಬಿದ್ದರು. ತಕ್ಷಣವೇ ಕ್ಯಾಂಪಸ್‌ನ ವೈದ್ಯಕೀಯ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.
ಚಿಕಿತ್ಸೆಯ ವೇಳೆ ದುರಂತ ಅಂತ್ಯ:
ಆಸ್ಪತ್ರೆಯಲ್ಲಿ ದಾಖಲಾದ ನಂತರ ಅಸ್ತಿತ್ವ ಅವರ ಆರೋಗ್ಯ ಸ್ಥಿತಿ ಸುಧಾರಿಸಿತ್ತು. ಸಂಜೆವರೆಗೂ ಅವರು ಆರೋಗ್ಯವಾಗಿಯೇ ಇದ್ದರು. ಆದರೆ, ರಾತ್ರಿ ವೇಳೆಗೆ ಮತ್ತೆ ಹೃದಯಾಘಾತ ಸಂಭವಿಸಿತು. ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡುತ್ತಿದ್ದರೂ, ಚಿಕಿತ್ಸೆಗೆ ಸ್ಪಂದಿಸದೆ ಅಸ್ತಿತ್ವ ಕೊನೆಯುಸಿರೆಳೆದರು. ವಿದ್ಯಾರ್ಥಿಯ ಸಾವಿನ ಸುದ್ದಿ ಕೇಳಿದ ಅವರ ಪೋಷಕರು ತೀವ್ರ ಆಘಾತಕ್ಕೊಳಗಾಗಿದ್ದಾರೆ.
ಐಐಟಿ ಆಡಳಿತ ಮಂಡಳಿಯು ಅಸ್ತಿತ್ವ ಗುಪ್ತಾ ಅವರ ಮೃತದೇಹವನ್ನು ಅವರ ತಂದೆ-ತಾಯಿಗೆ ಹಸ್ತಾಂತರಿಸಿದೆ. ಪೋಷಕರು ಬೆಂಗಳೂರಿನ ವಿಮಾನ ನಿಲ್ದಾಣದ ಮೂಲಕ ತಮ್ಮ ಮಗನ ಪಾರ್ಥಿವ ಶರೀರವನ್ನು ಅವರ ಸ್ವಂತ ಊರು ವಾರಣಾಸಿಗೆ ತೆಗೆದುಕೊಂಡು ಹೋಗಿದ್ದಾರೆ. ಈ ಅನಿರೀಕ್ಷಿತ ಘಟನೆಯು ಐಐಟಿ ವಿದ್ಯಾರ್ಥಿ ಸಮುದಾಯದಲ್ಲಿ ಮತ್ತು ಆಡಳಿತ ಮಂಡಳಿಯಲ್ಲಿ ಆಘಾತವನ್ನುಂಟು ಮಾಡಿದೆ. ಘಟನೆಯ ಬಗ್ಗೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ದುರಂತವು ವಿದ್ಯಾರ್ಥಿಗಳ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಮತ್ತೊಮ್ಮೆ ಗಂಭೀರ ಚಿಂತನೆಗೆ ಹಚ್ಚಿದೆ.


