ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ನಿಮಿತ್ತ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಬೆಂಗಳೂರು ನಗರ ದಕ್ಷಿಣ ವಲಯ ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಸುತ್ತಿದೆ.
ಬೆಂಗಳೂರು (ಡಿ.15): ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ನಿಮಿತ್ತ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಬೆಂಗಳೂರು ನಗರ ದಕ್ಷಿಣ ವಲಯ ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಸುತ್ತಿದೆ. ಡಿ.20ರಂದು ಜ್ಞಾನಭಾರತಿ ಸಮೀಪದ ನಾಗದೇವನಹಳ್ಳಿ ರಿಂಗ್ ರಸ್ತೆಯಲ್ಲಿರುವ ಸಾಂದೀಪಿನಿ ಹೈಟೆಕ್ ಶಾಲೆಯಲ್ಲಿ ಈ ಸ್ಪರ್ಧೆ ನಡೆಯಲಿದೆ.
ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಕುರಿತಾಗಿ ನಡೆಯುವ ಈ ಸ್ಪರ್ಧೆಗೆ ಕರ್ನಾಟಕ ಅರಣ್ಯ ಇಲಾಖೆ ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್ ಹಾಗೂ ಸಾಂದೀಪಿನಿ ಹೈಟೆಕ್ ಶಾಲೆಯ ಸಹಯೋಗವಿದೆ. ಡಿ.20ರ ಬೆಳಗ್ಗೆ 10.30ಕ್ಕೆ ಸಾಂದೀಪಿನಿ ಹೈಟೆಕ್ ಶಾಲೆ ಆವರಣದಲ್ಲಿ ಈ ಸ್ಪರ್ಧೆ ಆರಂಭವಾಗಲಿದೆ. ಅದೇ ದಿನ ಚಿತ್ರಕಲೆಯ ಮೌಲ್ಯಮಾಪನ ಮುಗಿಸಿ ಪ್ರಶಸ್ತಿ ಪ್ರದಾನವೂ ನಡೆಯಲಿದೆ. ವಲಯ ಮಟ್ಟದಲ್ಲಿ ಮೊದಲ ಮೂರು ಬಹುಮಾನ ಪಡೆಯುವವರು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆಯಲಿದ್ದಾರೆ.
ಚಿತ್ರಸ್ಪರ್ಧೆಯಲ್ಲಿ ಭಾಗವಹಿಸುವವರು ಡಿ.16ರ ಸಂಜೆ 4 ಗಂಟೆ ಒಳಗೆ ಈ ಸಂಖ್ಯೆಗೆ 9606447701 ಕರೆ ಮಾಡಿ ಅಥವಾ blrdrawing2025@gmail ಗೆ ಮೇಲ್ ಮಾಡಿ ನೋಂದಣಿ ಮಾಡಿಕೊಳ್ಳಬೇಕು. ಒಂದು ಶಾಲೆಯಿಂದ 8,9,10ನೇ ತರಗತಿಯ ವಿದ್ಯಾರ್ಥಿಗಳು ಪ್ರತಿ ತರಗತಿಗೆ ಇಬ್ಬರಂತೆ ಒಟ್ಟು 6 ಜನರು ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಸ್ಪರ್ಧೆಯ ನಿಯಮಗಳು ಹೀಗಿವೆ
-ಚಿತ್ರಕಲೆ ಬಿಡಿಸಲು ನೀಡಲಾಗುವ ಸಮಯ 1 ಗಂಟೆ 30 ನಿಮಿಷದ ಅವಧಿ ನೀಡಲಾಗುವುದು.
-ಚಿತ್ರ ಬಿಡಿಸಲು ಅಗತ್ಯ ಇರುವ ಡ್ರಾಯಿಂಗ್ ಶೀಟ್ ಅನ್ನು ನಾವೇ ಒದಗಿಸಲಿದ್ದೇವೆ.
-ಅಗತ್ಯ ಇರುವ ಪೆನ್ಸಿಲ್, ಬಣ್ಣ ಹಾಗೂ ಇನ್ನಿತರ ಪರಿಕರಗಳನ್ನು ವಿದ್ಯಾರ್ಥಿಗಳೇ ತರಬೇಕು.
-ವಿದ್ಯಾರ್ಥಿಗಳ ಇಚ್ಚೆ ಮತ್ತು ಶಕ್ತಿ ಅನುಸಾರ ಕ್ರೆಯಾನ್ಸ್, ಸ್ಕೆಚ್ಪೆನ್, ಅಕ್ರಿಲಿಕ್ ಅಥವಾ ವಾಟರ್ ಕಲರ್ಸ್ ಬಳಸಿ ಚಿತ್ರ ಬಿಡಿಸಬಹುದು.
- ಚಿತ್ರ ಬಿಡಿಸಿದ ದಿನವೇ ಅದರ ಮೌಲ್ಯಮಾಪನ ಆಗಿ ಪ್ರಶಸ್ತಿ ಪ್ರಕಟಣೆ ಮತ್ತು ವಿತರಣೆ ನಡೆಯಲಿದೆ.
- ಪ್ರವೇಶ ಸಂಪೂರ್ಣ ಉಚಿತವಾಗಿರುತ್ತದೆ. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು.
- ಪ್ರಥಮ, ದ್ವಿತೀಯ ಮತ್ತು ತೃತೀಯ ಎಂಬ ಮೂರು ಪ್ರಶಸ್ತಿಗಳಿರುತ್ತದೆ. ಇಬ್ಬರಿಗೆ ಸಮಾಧಾನಕರ ಬಹುಮಾನವು ಸಿಗಲಿದೆ.
- ವಲಯ ಮಟ್ಟದಲ್ಲಿ ಗೆಲುವು ಸಾಧಿಸುವ ಮೊದಲ ಮೂರು ವಿಜೇತರು ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
- ಸಾರ್ವಜನಿಕ ಶಿಕ್ಷಣ ಇಲಾಖೆಯ ದಕ್ಷಿಣ ವಲಯದ ಸರ್ಕಾರಿ ಮತ್ತು ಖಾಸಗಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು.
- ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳು, ಶಿಕ್ಷಕರು ಅಥವಾ ಪೋಷಕರಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಇರುತ್ತದೆ.


