ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದಿಂದಾಗಿ ಬೆಳಗಾವಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಮಕ್ಕಳ ಸುರಕ್ಷತೆಗಾಗಿ ಆಗಸ್ಟ್ 20 ರಂದು ಎರಡೂ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕರಾವಳಿ, ಮಲೆನಾಡು ಮತ್ತು ಉತ್ತರ ಒಳನಾಡಿನಲ್ಲಿ ಮುಂದಿನ 7 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಬೆಳಗಾವಿ/ಹಾವೇರಿ/ಬೆಂಗಳೂರು (ಆ.19): ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ಗಾಳಿ ಸಮೇತವಾಗಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಬಿಟ್ಟೂ ಬಿಡದೇ ಮಳೆ ಸುರಿಯುತ್ತಿದೆ. ಹೀಗಾಗಿ, ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಇಂದು ಆ.19ರಮದು ರಜೆ ಘೋಷಣೆ ಮಾಡಲಾಗಿತ್ತು.ಆದರೆ, ನಾಳೆಯೂ ಭಾರೀ ಮಳೆ ಮುನ್ಸೂಚನೆ ನಿಡಿದ್ದರಿಂದ, ನಾಳೆ (ಆ.20ರ ಬುಧವಾರ) ಕೂಡ ಬೆಳಗಾವಿ ಜಿಲ್ಲೆಯ ಅಂಗನವಾಡಿ, ಶಾಲಾ ಹಾಗೂ ಪಿಯು ಕಾಲೇಜಿಗೆ ರಜೆ ನೀಡಲಾಗುತ್ತಿದೆ. ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಮತ್ತೊಂದೆಡೆ ಕರಾವಳಿ ಜಿಲ್ಲೆಗಳು ಹಾಗೂ ಪಶ್ಚಿಮ ಘಟ್ಟದ ಮಲೆನಾಡು ಪ್ರದೇಶವನ್ನು ದಾಟಿ ಬಂದಿರುವ ವಾಯುಭಾರ ಕುಸಿದ ಮಳೆಗಾಳಿಯು ನಾಳೆ ಹಾವೇರಿ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇಂದಿನಿಂದಲೇ ಹಾವೇರಿ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ನಿರಂತರ ಮಳೆಯ ಹಿನ್ನೆಲೆಯುಲ್ಲಿ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ನಾಳೆ (ಆ.20ರ ಬುಧವಾರ) ಹಾವೇರಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಹಾವೇರಿ ಜಿಲ್ಲೆಯಲ್ಲಿ ನಿರಂತರ ಮಳೆ, ಹಾಗೂ ಶೀತ ಗಾಳಿ ಬೀಸುತ್ತಿರುವ ಹಿನ್ನಲೆಯಲ್ಲಿ ಮಕ್ಕಳು, ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ರಜೆ ಘೋಷಣೆ ಮಾಡಲಾಗಿದೆ ಎಂದು ಹಾವೇರಿ ಜಿಲ್ಲೆಯ ಜಿಲ್ಲಾಧಿಕಾರಿ ವಿಜಯ್ ಮಹಾಂತೇಶ್ ಅವರು ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಮಕ್ಕಳು ಹಾಗೂ ಜನ ಸಾಮಾನ್ಯರು ಮಳೆಯ ವೇಳೆ ಯಾವುದೇ ನದಿ ಪಾತ್ರಗಳು, ಹಳ್ಳ-ಕೊಳ್ಳಗಳ ಬಳಿ ಅಥವಾ ನಡುಗಡ್ಡೆಗಳಿಗೆ ಹೋಗದಂತೆ ಮುನ್ನೆಚ್ಚರಿಕೆಯನ್ನು ವಹಿಸಲು ಸೂಚಿಸಿದ್ದಾರೆ. ಜೊತೆಗೆ, ನೀರು ತುಂಬಿ ಹರಿಯುವ ಜಾಗಗಳಿಗೆ ಹೋಗದಂತೆ ಮುನ್ನೆಚ್ಚರಿಕೆ ಕಾಯ್ದುಕೊಳ್ಳಲು ತಿಳಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ಮಾಹಿತಿ ಆಧರಿಸಿ ಮುಂದಿನ 7 ದಿನಗಳ ಮಳೆ ಮುನ್ಸೂಚನೆ ಮತ್ತು ಎಚ್ಚರಿಕೆಗಳು. ರಾಜ್ಯದಾದ್ಯಂತ ಜೋರಾದ ಗಾಳಿಯೊಂದಿಗೆ ಇಂದು ಮತ್ತು ನಾಳೆ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಚದುರದಿಂದ ವ್ಯಾಪಕವಾಗಿ ಸಾಧಾರಣದಿಂದ ಭಾರಿ ಮಳೆ, ಹಾಗೂ ಅಲ್ಲಲ್ಲಿ ಅತಿ ಭಾರಿ ಮಳೆ, ಇಂದು ಅಲ್ಲಲ್ಲಿ ಅತ್ಯಅಧಿಕ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.


