ಸೋಮವಾರಪೇಟೆ ತಾಲೂಕಿನ ಬಾಲಕ ಹನ್ವಿಕ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಪುತ್ರನ ಮೆದುಳು ನಿಷ್ಕ್ರಿಯಗೊಂಡ ದುಃಖದ ನಡುವೆಯೂ, ಆತನ ಪೋಷಕರು ಕಣ್ಣು ಮತ್ತು ಕಿಡ್ನಿಗಳನ್ನು ದಾನ ಮಾಡಿ ಇತರರ ಬಾಳಿಗೆ ಬೆಳಕಾಗಿದ್ದಾರೆ.
ಕೊಡಗು: ಸೋಮವಾರಪೇಟೆ ತಾಲೂಕಿನ ಚಿಕ್ಕಅಳುವಾರ ತಾಲೂಕಿನ ಬಾಲಕ ರಸ್ತೆ ದುರಂತದಲ್ಲಿ ತೀವ್ರ ಗಾಯಗೊಂಡು ಮೃತಪಟ್ಟಿದ್ದು, ಪುತ್ರನ ಅಗಲುವಿಕೆಯ ದುಃಖದಲ್ಲೂ ಹೆತ್ತವರು ಆತನ ಕಣ್ಣು ಹಾಗೂ ಕಿಡ್ನಿಗಳನ್ನು ದಾನ ಮಾಡಿ ಇನ್ನೆರಡು ಜೀವಗಳನ್ನು ರಕ್ಷಿಸಿದ ಸಾರ್ಥಕತೆ ಹೊಂದಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಚಿಕ್ಕಅಳುವಾರ ಗ್ರಾಮದ ಕೃಷಿಕ ರಜಿತ್ ಮತ್ತು ರಮ್ಯಾ ದಂಪತಿಯ ಏಕೈಕ ಪುತ್ರ ಹನ್ವಿಕ್ ಮೃತಪಟ್ಟಿ ಬಾಲಕ.
ಹನ್ವಿಕ್ಗೆ ಡಿಕ್ಕಿಯಾಗಿತ್ತು ಕಾರ್
ತಾಲೂಕಿನ ಯಡವನಾಡು ಜಂಕ್ಷನ್ನಲ್ಲಿ ರಸ್ತೆ ದಾಟುತ್ತಿದ್ದ ಬಾಲಕನಿಗೆ ಕಾರು ಡಿಕ್ಕಿಯಾಗಿ ತೀವ್ರ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಮಗನ ಮೆದುಳು ನಿಷ್ಕ್ರಿಯವಾದ ಹಿನ್ನೆಲೆ ಆಘಾತದ ನಡುವೆ ದಂಪತಿಗಳು ತಮ್ಮ ಮಗನ ಕಣ್ಣು ಮತ್ತು ಕಿಡ್ನಿಗಳನ್ನು ದಾನ ಮಾಡುವ ಮೂಲಕ ಇತರರ ಜೀವನಕ್ಕೆ ಬೆಳಕು ತಂದಿದ್ದಾರೆ. ಅಂಗಾಂಗ ದಾನ ಮಾಡುವ ಮೂಲಕ ಬಾಲಕ ತನ್ನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ.
ತಂದೆ, ತಾಯಿ ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿರುವುದರಿಂದ ಹನ್ವಿಕ್ ಸೋಮವಾರಪೇಟೆ ತಾಲೂಕಿನ ಯಡವನಾಡು ಗ್ರಾಮದಲ್ಲಿ ತನ್ನ ತಾತ ಹರಗ ತಿಮ್ಮಯ್ಯ ಹಾಗೂ ಅಜ್ಜಿಯೊಂದಿಗೆ ವಾಸವಾಗಿದ್ದ. ಹತ್ತು ದಿನಗಳ ರಜೆಯಲ್ಲಿ ಚಿಕ್ಕಅಳುವಾರ ಗ್ರಾಮದ ತಂದೆ ಮನೆಯಲ್ಲಿ ಉಳಿದುಕೊಂಡಿದ್ದ.
ಇದನ್ನೂ ಓದಿ: ಅಪಘಾತದಲ್ಲಿ ಮೆದುಳು ನಿಷ್ಕ್ರಿಯ: ಕಣ್ಣುದಾನ ಮಾಡಿ ಮಗನ ಸಾವಿನಲ್ಲೂ ಸಾರ್ಥಕತೆ ಮರೆದ ಪೋಷಕರು
ಕಳೆದ ಸೋಮವಾರ ಅಜ್ಜಿಯೊಂದಿಗೆ ಯಡವನಾಡು ಗ್ರಾಮಕ್ಕೆ ಬಸ್ಸಿಗೇರಿ ಯಡವನಾಡಿನ ಬಸ್ ತಂಗುದಾಣದಲ್ಲಿ ಇಳಿದ ನಂತರ ರಸ್ತೆ ದಾಟಲು ಯತ್ನಿಸಿದಾಗ, ಕುಶಾಲನಗರ ಕಡೆಯಿಂದ ವೇಗವಾಗಿ ಬಂದ ಕಾರೊಂದು ಬಾಲಕನಿಗೆ ಡಿಕ್ಕಿಯಾಗಿತ್ತು.
ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಹನ್ವಿಕ್ ಸಾವು
ಹನ್ವಿಕ್ ತಲೆಗೆ ಗಂಭೀರ ಗಾಯವಾಗಿ ತಕ್ಷಣವೇ ಆತನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿತ್ತು. ನಾಲ್ಕು ದಿನಗಳ ಕಾಲ ವೈದ್ಯರು ಶಕ್ತಿಮೀರಿದ ಪ್ರಯತ್ನ ಮಾಡಿದರೂ, ಮೆದುಳು ನಿಷ್ಕ್ರಿಯಗೊಂಡ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಹನ್ವಿಕ್ ಗುರುವಾರ ರಾತ್ರಿ ಇಹಲೋಕ ತ್ಯಜಿಸಿದ್ದಾನೆ. ಶುಕ್ರವಾರ ಬಾಲಕನ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ಇದನ್ನೂ ಓದಿ: ಕೇರಳದ ಅತ್ಯಂತ ಕಿರಿಯ ಅಂಗಾಂಗ ದಾನಿ 10 ತಿಂಗಳ ಮಗುವಿಗೆ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ


