ಭೂ ಸುರಕ್ಷಾ, ಪೌತಿ ಖಾತೆ, ಪೋಡಿ ದುರಸ್ತಿ, ಕಂದಾಯ ಗ್ರಾಮ ಅಭಿಯಾನ ಸೇರಿ ಮತ್ತಿತರ ಕಾರ್ಯಗಳಲ್ಲಿ ವಿಳಂಬ ಧೋರಣೆ ತೋರಿದ ತಹಸೀಲ್ದಾರ್ಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಕಂದಾಯ ಸಚಿವ ಕೃಷ್ಣ ಬೈರೇಗೌಡ.
ಬೆಂಗಳೂರು (ಏ.18): ಕಂದಾಯ ಇಲಾಖೆ ಅಡಿಯಲ್ಲಿನ ಭೂ ಸುರಕ್ಷಾ, ಪೌತಿ ಖಾತೆ, ಪೋಡಿ ದುರಸ್ತಿ, ಕಂದಾಯ ಗ್ರಾಮ ಅಭಿಯಾನ ಸೇರಿ ಮತ್ತಿತರ ಕಾರ್ಯಗಳಲ್ಲಿ ವಿಳಂಬ ಧೋರಣೆ ತೋರಿದ ತಹಸೀಲ್ದಾರ್ಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಜವಾಬ್ದಾರಿ ಸಮರ್ಪಕವಾಗಿ ನಿರ್ವಹಿಸದಿದ್ದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ವಿಕಾಸಸೌಧದಲ್ಲಿ ಕೃಷ್ಣ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ತಹಸೀಲ್ದಾರ್ಗಳೊಂದಿಗೆ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಇಲಾಖೆ ನಿಗದಿಪಡಿಸಿದ ಗುರಿ ತಲುಪುವಲ್ಲಿ ವಿಫಲರಾದ ತಹಸೀಲ್ದಾರ್ಗಳ ವಿರುದ್ಧ ಕಿಡಿ ಕಾರಿದ ಸಚಿವರು, ಉತ್ತಮ ಸಾಧನೆ ತೋರಿದ ತಹಶೀಲ್ದಾರ್ಗಳನ್ನು ಶ್ಲಾಘಿಸಿದರು.
8 ಸಾವಿರ ಪುಟಗಳಷ್ಟೇ ಸ್ಕ್ಯಾನ್
ಮೊದಲಿಗೆ ಭೂ ಸುರಕ್ಷಾ ಯೋಜನೆ ಕುರಿತು ಪರಿಶೀಲಿಸಿದ ಕೃಷ್ಣ ಬೈರೇಗೌಡ, ದಿನಕ್ಕೆ ಭೂ ದಾಖಲೆಗಳ 12 ಸಾವಿರ ಪುಟ ಸ್ಕ್ಯಾನ್ ಮಾಡಬೇಕೆಂಬ ಗುರಿಯಿದ್ದರೂ ಕೆಲ ತಾಲೂಕುಗಳಲ್ಲಿ ಸರಾಸರಿ 8 ಸಾವಿರ ದಾಖಲೆಗಳ ಪುಟಗಳನ್ನು ಮಾತ್ರ ಸ್ಕ್ಯಾನ್ ಮಾಡಲಾಗುತ್ತಿದೆ ಎಂಬುದನ್ನು ತಿಳಿದು ಅಸಮಾಧಾನ ವ್ಯಕ್ತಪಡಿಸಿದರು. ಸ್ಕ್ಯಾನ್ ಮಾಡಲು ಪ್ರತಿ ತಾಲೂಕಿಗೆ ತಲಾ 8 ಮಂದಿ ಡೇಟಾ ಆಪರೇಟರ್ಗಳನ್ನು ನೀಡಿದ್ದರೂ ಪ್ರಗತಿ ಕುಂಠಿತವಾಗಿದೆ. ಚಿಕ್ಕಮಗಳೂರು, ಕೊಡಗು, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಕೆಲಸ ಪೂರ್ಣವಾಗಿದೆ.
ಬೆಂಗಳೂರು ನಗರ, ಶ್ರೀರಂಗಪಟ್ಟಣ, ಮದ್ದೂರು, ಪಾಂಡವಪುರ, ಮೈಸೂರಿನ ತಾಲೂಕುಗಳಲ್ಲಿ ಇನ್ನೂ ನಿಗದಿತ ಗುರಿ ತಲುಪಿಲ್ಲ. ಇದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು. ಹಾಗೆಯೇ, ಬೆಳ್ತಂಗಡಿ, ಮೂಡಬಿದರೆ, ಪುತ್ತೂರು ಸೇರಿ 60 ತಾಲೂಕುಗಳಲ್ಲಿ ದಿನಕ್ಕೆ 20 ಸಾವಿರ ಪುಟ ಸ್ಕ್ಯಾನ್ ಮಾಡುತ್ತಿರುವುದು ಶ್ಲಾಘನೀಯ. ಅಲ್ಲದೆ ಹೊನ್ನಾವರದಲ್ಲಿ ದಿನಕ್ಕೆ 40 ಸಾವಿರ ಪುಟ ಸ್ಕ್ಯಾನ್ ಮಾಡಲಾಗುತ್ತಿದೆ. ಇದು ಉತ್ತಮ ಕಾರ್ಯ ಎಂದರು.
ತಹಸೀಲ್ದಾರ್ ನ್ಯಾಯಾಲಯಗಳಲ್ಲಿನ ಪ್ರಕರಣ ವಿಳೇವಾರಿ ಉತ್ತಮವಾಗಿದೆ. ಹಳೇ ಪ್ರಕರಣಗಳ ಬಹುತೇಕ ವಿಲೇವಾರಿಯಾಗಿದೆ. ಕೆಲ ತಾಲೂಕುಗಳಲ್ಲಷ್ಟೇ 90 ದಿನಕ್ಕೆ ಮೀರಿದ ಪ್ರಕರಣಗಳು ಬಾಕಿಯಿದ್ದು, ಅದನ್ನು ಶೀಘ್ರ ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೌತಿ ಖಾತೆ ಆಂದೋಲನ ಮುಕ್ತಾಯವಾಗಿದೆ. ಉಳ್ಳಾಲದಲ್ಲಿ 18 ಮತ್ತು ಮಂಗಳೂರಿನಲ್ಲಿ 357 ಆಸ್ತಿಗಳ ಪೌತಿಯಷ್ಟೇ ಬಾಕಿಯಿದೆ. ಉಳಿದಂತೆ ಜಿಲ್ಲೆಯು ಪೌತಿ ಮುಕ್ತವಾದಂತಾಗಿದೆ. ಅದಕ್ಕಾಗಿ ಜಿಲ್ಲೆಯ ಎಲ್ಲ ಅಧಿಕಾರಿಗಳಿಗೂ ಅಭಿನಂದನೆಗಳು ಎಂದು ಹೇಳಿದರು.
ಪೋಡಿ ದುರಸ್ತಿಯಲ್ಲಿ ಹಿಂದೆ ಬಿದ್ದವರನ್ನೂ ಕೃಷ್ಣ ಬೈರೇಗೌಡ ತರಾಟೆಗೆ ತೆಗೆದುಕೊಂಡರು. 1 ರಿಂದ 10 ಮಂಜೂರಿದಾರರಷ್ಟೇ ಇರುವ ಎಲ್ಲ ಸರ್ವೆ ನಂಬರ್ಗಳ 1ರಿಂದ 5 ಕೆಲಸವನ್ನು ಮುಂದಿನ ಒಂದು ವಾರದಲ್ಲಿ ಪೂರ್ಣಗೊಳಿಸಬೇಕು. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಇಂಡೀಕರಣ ಶೂನ್ಯವಾಗಿದ್ದು, ಪ್ರಗತಿಯೇ ಇಲ್ಲ. ಡಿಡಿಎಲ್ಆರ್ ಹಾಗೂ ಎಡಿಎಲ್ಆರ್ಗಳು ಎಚ್ಚೆತ್ತುಕೊಂಡು ಕೆಲಸ ಮಾಡಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

