ಶ್ರೀರಂಗಪಟ್ಟಣದ ಬೆಳಗೊಳದಲ್ಲಿ ಭಕ್ತರು 18 ಅಡಿ ಉದ್ದದ ಸರಳಿನಿಂದ ಬಾಯಿ ಬೀಗ ಹಾಕಿಸಿಕೊಂಡು ಬನ್ನಾರಮ್ಮ ದೇವಿಗೆ ಹರಕೆ ಸಲ್ಲಿಸಿದರು. ಇದರೊಂದಿಗೆ ಪಟ್ಟಣದಲ್ಲಿ ಶಂಕರಾಚಾರ್ಯರ ಜಯಂತಿ ಆಚರಣೆ ಮತ್ತು ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ನಡೆಯಲಿರುವ ಶ್ರೀರಂಗಮುಡಿ ಮಹೋತ್ಸವದ ಕುರಿತು ವರದಿ ಇಲ್ಲಿದೆ.

ಮಂಡ್ಯ : ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದ ಕೋಟೆ ಮಾಳ ಬೀದಿಯಲ್ಲಿನ ಬನ್ನಾರಮ್ಮ ದೇವಿಗೆ ಹರಿಕೆ ಹೊತ್ತ ಭಕ್ತರು 18 ಅಡಿ ಉದ್ದದ ಸರಳಿನಿಂದ ಬಾಯಿ ಬೀಗ ಹಾಕಿಸಿಕೊಂಡು ಹರಕೆ ತೀರಿಸಿದರು.

ಕಳೆದ 27 ವರ್ಷದಿಂದ ವಾಣಿಯಾರ್ ಶ್ರೀಬನ್ನಾರಿ ಮಾರಮ್ಮ ನವರ ಭಕ್ತ ಮಂಡಳಿಯಿಂದ ಶ್ರೀ ಬನ್ನಾರಿ ಮಾರಮ್ಮನ ಕರಗ ಮಹೋತ್ಸವ ನಡೆಸಲಾಗುತ್ತಿದೆ. ವಿವಿಧೆಡೆಯ ಭಕ್ತರು ದೇವಿಯಲ್ಲಿ ಹರಿಕೆ ಮಾಡಿಕೊಂಡು ಬೇವಿನ ಸೊಪ್ಪು ಹಿಡಿದು ಬಾಯಿ ಬೀಗ ಚುಚ್ಚಿಸಿ ಹರಿಕೆ ತೀರಿಸಲು ಬಣ್ಣಾರಿ ಮಾರಿಯಮ್ಮನ ಕರಗ ಮಹೋತ್ಸವದ ಅಂಗವಾಗಿ 18 ಅಡಿ ಉದ್ದದ ಸರಳಿನ ಬಾಯಿಬೀಗ ಹಾಕಿಸಿಕೊಂಡಿದ್ದರು.

ಸೋಮವಾರ ರಾತ್ರಿ ಬಲಮುರಿ ಕಾವೇರಿ ನದಿಯಲ್ಲಿ ದೇವರ ಮಡಿ ಮಾಡಿ ಕರಗ ಮಹೋತ್ಸವ ಮೆರವಣಿಗೆ ನಡೆಸಲಾಯಿತು. ಮಂಗಳವಾರ ಬೆಳಗ್ಗೆ ಗ್ರಾಮದ ಮುಂಭಾಗದ ಆಂಜನೇಯ ಹಾಗೂ ಮಾರಮ್ಮನ ದೇವಾಲಯದಲ್ಲಿ ವಿವಿಧ ಪೂಜೆ ಸಲ್ಲಿಸಿ, ಹರಿಕೆ ಹೊತ್ತ ಭಕ್ತರಿಗೆ ಬಾಯಿ ಬೀಗ ಹಾಕಿಸಿಕೊಂಡರು.

ರಣ ಬಿಸಿಲಿನ್ನು ಲೆಕ್ಕಿಸದ ಭಕ್ತರು 18 ಅಡಿ ಉದ್ದದ ದೊಡ್ಡ ಸರಳಿನ ಬಾಯಿ ಬೀಗ ಹಾಕಿಸಿಕೊಂಡು ಸರತಿ ಸಾಲಿನಲ್ಲಿ ದೇವಿ ಬಣ್ಣಾರಿ ಮಾರಿಯಮ್ಮನ ದೇಗುಲದ ವರೆಗೂ ಟಮಟೆ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಿದರು.

ಶ್ರೀಶಂಕರಾಚಾರ್ಯರ ಜಯಂತಿ ಆಚರಣೆ

ಶ್ರೀರಂಗಪಟ್ಟಣ ಪಟ್ಟಣದ ಮಿನಿ ವಿಧಾನ ಸೌಧದ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಶ್ರೀಶಂಕರಾಚಾರ್ಯರ ಜಯಂತಿಯನ್ನು ತಹಸೀಲ್ದಾರ್ ಚೇತನ ಯಾದವ್ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಿದರು.

ನಂತರ ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ ಅಧ್ಯಕ್ಷ ವೇದ ಬ್ರಹ್ಮ ಡಾ. ಭಾನುಪ್ರಕಾಶ್ ಶರ್ಮಾ ಮಾತನಾಡಿ, ಹಿಂದು ಧರ್ಮದ ಅದ್ವೈತ ಸಿದ್ಧಾಂತವನ್ನು ಪ್ರಪಂಚದಲ್ಲಿ ಶಂಕರಾಚಾರ್ಯರು ಪ್ರತಿಪಾದಿಸಿ ಅದರ ಮೌಲ್ಯಗಳನ್ನು ಜಗತ್ತಿಗೆ ಕಾಣುವಂತೆ ಎತ್ತಿ ಹಿಡಿದ ಮಹನೀಯರ ತತ್ವ ಆದರ್ಶಗಳನ್ನು ನಾವು ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದರು.

ಈ ವೇಳೆ ಶ್ರೀರಂಗಪಟ್ಟಣ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸಿ.ಎಚ್ ಕೃಷ್ಣ, ನಿರ್ದೇಶಕರಾದ ನರಸಿಂಹ ಮೂರ್ತಿ, ಗಂಗಾಧರ್ ಶರ್ಮ, ರಮೇಶ್ ಶರ್ಮ ಸೇರಿದಂತೆ ತಾಲೂಕು ಕಚೇರಿಯ ಹಿರಿಯ ಹಾಗೂ ಕಿರಿಯ ಅಧಿಕಾರಿಗಳು ಕನ್ನಡ ಪರ ಸಂಘಟನೆಗಳ ಮುಖಂಡರು ಹಾಜರಿದ್ದರು.

ನಾಳೆ ಶ್ರೀರಂಗಮುಡಿ ಮಹೋತ್ಸವ

ಐತಿಹಾಸಿಕ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಏ.23ರಂದು ಶ್ರೀರಂಗಮುಡಿ ಮಹೋತ್ಸವ ಸಡಗರ ಸಂಭ್ರಮದಿಂದ ನಡೆಯಲಿದೆ ಎಂದು ದೇವಾಲಯದ ಶ್ರೀ ರಂಗಮುಡಿ ಕೈಂಕರ್ಯ ಸಭಾ ಮುಖ್ಯಸ್ಥ ಅರ್ಚಕ ವಿಜಯಸಾರತಿ ತಿಳಿಸಿದರು.

ಇದನ್ನೂ ಓದಿ: Dharwad: 16 ವರ್ಷಗಳ ಬಳಿಕ ದೇವಸ್ಥಾನದ ಬಾಗಿಲು ಓಪನ್; ಗುಂಪುಗಳ ಭಿನ್ನಾಭಿಪ್ರಾಯ ಇತ್ಯರ್ಥ

ಶ್ರೀರಂಗನಾಥನ ಜಯಂತಿ ಪ್ರಯುಕ್ತ ಪಟ್ಟಣದ ಶ್ರೀರಂಗನಾಥ ದೇವಾಲಯದಲ್ಲಿ ಶ್ರೀ ರಂಗ ಮುಡಿ ಉತ್ಸವವನ್ನು ದೇವಾಲಯದ ಆಡಳಿತ ಮಂಡಳಿ ಯೊಂದಿಗೆ ಶ್ರೀರಂಗನ ಉತ್ಸವಮೂರ್ತಿಗೆ ವಜ್ರಖಚಿತ ಕಿರುಮುಡಿಯ ಧಾರಣೆ ಮಾಡಿ ನಂತರ ಉತ್ಸವ ಮೂರ್ತಿಯನ್ನು ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಲಾಗುವುದು.

ಶ್ರೀರಂಗಮುಡಿ ಉತ್ಸವ ಮೂರ್ತಿ ಮೆರವಣಿಗೆಗೆ ಜಿಲ್ಲಾಧಿಕಾರಿ ಡಾ.ಕುಮಾರ ಅವರ ಜೊತೆ ಶಾಸಕರು, ದೇಗುಲದ ಇಒ, ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರು ಸದಸ್ಯರು ಒಟ್ಟುಗೂಡಿ ಚಾಲನೆ ನೀಡುವರು.

ಶ್ರೀರಂಗನಾಥಸ್ವಾಮಿ ಹಾಗೂ ರಂಗನಾಯಕಿ ಅಮ್ಮನವರ ವಿಗ್ರಹಕ್ಕೆ ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಹಾಗೂ ದೇವರಿಗೆ ಮಹಾಭಿಷೇಕವನ್ನು ಅರ್ಚಕರ ನೆರವೇಸುವರು. ಮಧ್ಯಾಹ್ನ ದೇವಾಲಯಕ್ಕೆ ಬಂದ ಭಕ್ತಾದಿಗಳಿಗೆ ಪ್ರಸಾದ ನಿಯೋಗ, ನಂತರ ಸಂಜೆ ಪಟ್ಟಣದ ಉಪ ಖಜಾನೆಯಿಂದ ವಿತರಿಸಲಾದ ವಜ್ರ ಖಚಿತ ಚಿನ್ನದ ಕಿರೀಟವನ್ನು ರಂಗನಾಥಸ್ವಾಮಿಗೆ ಕಿರೀಟ ಧಾರಣೆ ಮಾಡಿ ಪಲ್ಲಕಿ ಮೇಲಿರಿಸಿ ಪಟ್ಟಣದ ರಾಜಬೀದಿ, ಪೂರ್ಣಯ್ಯ ಬೀದಿ ಮತ್ತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಉತ್ಸವಮೂರ್ತಿಯ ಮೆರವಣಿಗೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: ದೂದಿಹಳ್ಳಿ ಗ್ರಾಮದ ಕೆರೆಯ ಹೂಳು ತೆಗೆಯುವಾಗ ಸಿಕ್ತು 3 ಅಡಿ ಎತ್ತರದ ನಂದಿ ಮೂರ್ತಿ