ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಪೂರ್ಣ ಒಳಚರಂಡಿ ಜಾಲಕ್ಕಾಗಿ 1200 ಕೋಟಿ ರೂಪಾಯಿಗಳ ಬೃಹತ್ ಯೋಜನೆ ಸಿದ್ಧವಾಗುತ್ತಿದೆ. ಇದರೊಂದಿಗೆ, ಬೀದಿ ನಾಯಿಗಳ ಪುನರ್ವಸತಿ ಮತ್ತು ನಗರಕ್ಕೆ 100 ಹೊಸ ಎಲೆಕ್ಟ್ರಿಕ್ ಬಸ್ಸುಗಳನ್ನು ತರುವ ಯೋಜನೆಯನ್ನು ಜಿಲ್ಲಾಧಿಕಾರಿ ದರ್ಶನ್ ಬಹಿರಂಗಪಡಿಸಿದ್ದಾರೆ.
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಒಳಚರಂಡಿ ಜಾಲವನ್ನು ಸಂಪೂರ್ಣಗೊಳಿಸಲು ಒಟ್ಟು 1200 ಕೋಟಿ ರು.ಗಳ ಪ್ಲ್ಯಾನ್ ಸಿದ್ಧಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ. ಪಾಲಿಕೆಯ ಆಡಳಿತಾಧಿಕಾರಿಯಾಗಿ ಗುರುವಾರ ಸಾರ್ವಜನಿಕರ ಕುಂದು ಕೊರತೆ ಆಲಿಸುವ ಫೋನ್- ಇನ್ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನಗರದ ಸಮಗ್ರ ಒಳಚರಂಡಿ ವ್ಯವಸ್ಥೆ ಸರಿಪಡಿಸಲು ಮುಂದಿನ 6 ವರ್ಷಗಳ ಜನಸಂಖ್ಯೆಯನ್ನು ಆಧರಿಸಿ ಯೋಜನೆ ಸಿದ್ಧವಾಗಲಿದೆ. ಈ ಬಗ್ಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸಿದ್ದಾರೆ. ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಜತೆಗೂ ಮಾತುಕತೆ ನಡೆದಿದ್ದು, ಮುಂದಿನ ಬಜೆಟ್ನಲ್ಲಿ ಈ ಯೋಜನೆಯನ್ನು ಮಂಡಿಸಲು ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ನಾಯಿಗಳ ಪುನರ್ವಸತಿಗೆ 10 ಎಕರೆ:
ಸುಪ್ರೀಂ ಕೋರ್ಟ್ ನಿರ್ದೇಶನ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ನಾಯಿಗಳ ಗಣತಿ ಆಧಾರದಲ್ಲಿ ಅವುಗಳಿಗೆ ಸ್ಥಳೀಯವಾಗಿ ಪುನರ್ವಸತಿ ಕಲ್ಪಿಸುವ ಕಾರ್ಯಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ನೀರುಮಾರ್ಗ ಹಾಗೂ ಬೊಂಡಂತಿಲ ಬಳಿ ಜಾಗ ಪರಿಶೀಲಿಸಲಾಗಿದೆ. ಪುನರ್ವಸತಿ ಕಲ್ಪಿಸಲು ಕನಿಷ್ಠ 10 ಎಕರೆ ಜಾಗದ ಅಗತ್ಯವಿದೆ ಎಂದರು.
ಮೊದಲ ಹಂತದಲ್ಲಿ ಮಂಗಳೂರು, ಮೂಲ್ಕಿ, ಉಳ್ಳಾಲ ವ್ಯಾಪ್ತಿಯಲ್ಲಿ ಜಾಗ ಗುರುತಿಸಲಾಗುತ್ತಿದೆ. ಬಳಿಕ ಅಗತ್ಯ ಅನುದಾನಕ್ಕೆ ಸರ್ಕಾರವನ್ನು ಕೋರಲಾಗುವುದು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಹೇಳಿದರು.
ಕಸ, ರಸ್ತೆ ಗುಂಡಿ, ಒಳಚರಂಡಿದ್ದೇ ಪ್ರಮುಖ ಸಮಸ್ಯೆಗಳು!
ಫೋನ್- ಇನ್ ಕಾರ್ಯಕ್ರಮದಲ್ಲಿ ಒಟ್ಟು 30 ಕರೆಗಳನ್ನು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸ್ವೀಕರಿಸಿದ್ದು, ಮುಖ್ಯವಾಗಿ ರಸ್ತೆ ಗುಂಡಿ, ಕಸ ವಿಲೇವಾರಿಯಾಗದೆ ಸಮಸ್ಯೆ, ಒಳಚರಂಡಿಯ ಸಮಸ್ಯೆಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದವು. ಪ್ರತಿಯೊಬ್ಬರ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮ ವಹಿಸುವಂತೆ ಸ್ಥಳದಲ್ಲೇ ಸೂಚಿಸಿದರು.
ಬಜಾಲ್ ರೂಟ್ನಲ್ಲಿ ಸಂಚರಿಸುವ ಖಾಸಗಿ ಬಸ್ಸುಗಳು ಬೆಳಗ್ಗೆ ಮತ್ತು ರಾತ್ರಿ ಹೊತ್ತು ಟ್ರಿಪ್ ಕಟ್ ಮಾಡುತ್ತಿವೆ. ಹಿಂದೆ ಇಲ್ಲಿ ಸಂಚರಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ಸು ಸೇವೆಯೂ ಸ್ಥಗಿತಗೊಂಡಿದೆ ಎಂದು ಸ್ಥಳೀಯರೊಬ್ಬರು ಸಮಸ್ಯೆ ಹೇಳಿಕೊಂಡರು.
ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಮಂಗಳೂರು ನಗರಕ್ಕೆ ಸರ್ಕಾರದಿಂದ 100 ಎಲೆಕ್ಟ್ರಿಕ್ ಸರ್ಕಾರಿ ಬಸ್ಸುಗಳು ಮಂಜೂರಾಗಿವೆ. ಮುಂದಿನ ಮೇ ತಿಂಗಳೊಳಗೆ ಶೇ.50ರಷ್ಟು ಬಸ್ಸುಗಳು ಬರಲಿದ್ದು, ಬಳಿಕದ 3 ತಿಂಗಳಲ್ಲಿ ಉಳಿದ ಬಸ್ಸುಗಳು ಬರಲಿವೆ. ಬಸ್ಸು ಚಾಲಕರ ನೇಮಕಾತಿಯೂ ನಡೆದಿದ್ದು, ತರಬೇತಿ ನಡೆಯುತ್ತಿದೆ ಎಂದು ತಿಳಿಸಿದರು. ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಇತರ ಅಧಿಕಾರಿಗಳು ಇದ್ದರು.


