ರಾಯಚೂರಿನಲ್ಲಿ ರಾಷ್ಟ್ರ ಧ್ವಜ ಮತ್ತು ಭಗವದ್ಗೀತೆಗೆ ಚಪ್ಪಲಿಯಿಂದ ತುಳಿದು ವಾಟ್ಸಾಪ್ ಸ್ಟೇಟಸ್ ಹಾಕಿ ಅವಮಾನಿಸಿದ ಘಟನೆ ನಡೆದಿದೆ. ಈ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ನವಾಜ್ ಮತ್ತು ಸೋಹೆಲ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ರಾಯಚೂರು: ರಾಷ್ಟ್ರ ಧ್ವಜ ಹಾಗೂ ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆ ಗೆ ಚಪ್ಪಲಿ ಹಾಕಿ ಕಾಲಿಟ್ಟಿರುವ ಚಿತ್ರಗಳನ್ನು ವಾಟ್ಸಾಪ್ ಸ್ಟೇಟಸ್ನಲ್ಲಿ ಹಾಕಿ ಅವಮಾನ ಮಾಡಿದ ಪ್ರಕರಣವು ರಾಯಚೂರು ನಲ್ಲಿ ತೀವ್ರ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ವಾಟ್ಸಾಪ್ ಸ್ಟೇಟಸ್
ವಾಟ್ಸಾಪ್ ಸ್ಟೇಟಸ್‌ನಲ್ಲಿ ಈ ಅವಮಾನಕಾರಿ ಚಿತ್ರಗಳನ್ನು ಗಮನಿಸಿದ ವಿನಯ್ ಹಾಗೂ ಆಂಜನೇಯ ಅವರು ವಿಷಯವನ್ನು ಸ್ನೇಹಿತರೊಂದಿಗೆ ಚರ್ಚಿಸಿದ್ದು, ಬಳಿಕ ಕಾರ್ತಿಕ್ ರೆಡ್ಡಿ ಎಂಬವರು ಈ ಕುರಿತು ಪೊಲೀಸ್‌ರಿಗೆ ಅಧಿಕೃತ ದೂರು ನೀಡಿದ್ದಾರೆ. ರಾಷ್ಟ್ರದ ಗೌರವ ಬಾವುಟ ಹಾಗೂ ಪವಿತ್ರ ಧಾರ್ಮಿಕ ಗ್ರಂಥಕ್ಕೆ ಅಪಮಾನ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದ್ದು, ದೂರು ದಾಖಲಾಗುತ್ತಿದ್ದಂತೆಯೇ ಪೊಲೀಸರು ತಕ್ಷಣವೇ ಎಚ್ಚೆತ್ತುಕೊಂಡು ಕಾರ್ಯಾಚರಣೆ ನಡೆಸಿದ್ದಾರೆ. ವಾಟ್ಸಾಪ್ ಸ್ಟೇಟಸ್ ಹಾಕಿದ್ದ ಆರೋಪಿಗಳ ಪತ್ತೆಗೆ ಮುಂದಾದ ಪೊಲೀಸರು, ಕೆಲವೇ ಸಮಯದಲ್ಲಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ನವಾಜ್ ಮತ್ತು ಸೋಹೆಲ್ ಅರೆಸ್ಟ್
ಎಲ್.ಬಿ.ಎಸ್. ನಗರ ದ ನಿವಾಸಿಗಳಾದ ನವಾಜ್ ಮತ್ತು ಸೋಹೆಲ್ ಎಂಬವರು ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ.
ರಾಷ್ಟ್ರ ಧ್ವಜ ಮತ್ತು ಭಗವದ್ಗೀತೆಗೆ ಅವಮಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವ ದೃಷ್ಟಿಯಿಂದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


