ರಾಯಚೂರಿನಲ್ಲಿ ನಡೆಯುತ್ತಿದ್ದ ಮದುವೆಯನ್ನು ಯುವತಿ ನಿಲ್ಲಿಸಿ ‘ಇವನು ನನ್ನ ಗಂಡ’ ಎಂದಿದ್ದರು. ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ ಇದೀಗ ಮಧ್ಯಸ್ಥಿಕೆಯ ನಂತರ, ಮದುಮಗನೇ ತನ್ನ ಮೊದಲ ಪ್ರೇಯಸಿಯೊಂದಿಗೆ ಸಂಸಾರ ನಡೆಸಲು ಒಪ್ಪಿಕೊಂಡಿದ್ದಾನೆ.
ರಾಯಚೂರು (ಡಿ.12): ರಾಯಚೂರಿನಲ್ಲಿ ನಡೆಯುತ್ತಿದ್ದ ಅದ್ಧೂರಿ ಮದುವೆ ಮಂಟಪಕ್ಕೆ ಬಂದ ಯುವತಿಯೊಬ್ಬಳು ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಇವನು ನನ್ನ ಗಂಡ ಎಂದು ಮದುವೆಯನ್ನು ನಿಲ್ಲಿಸಿದ್ದಳು. ಇದಕ್ಕೆ ಸಾಕ್ಷಿ ಪುರಾವೆಗಳನ್ನು ಕೂಡ ತೋರಿಸಿದ್ದಳು. ಇದರ ಬೆನ್ನಲ್ಲಿಯೇ ಪೊಲೀಸ್ ಠಾಣೆಗೆ ಇಬ್ಬರೂ ಜೋಡಿಗಳನ್ನು ಹಾಗೂ ಕೆಲವು ಸಂಬಂಧಿಕರನ್ನು ಕರೆದೊಯದು ವಿಚಾರಣೆ ನಡೆಸಲಾಗಿದೆ. ಆಗ ಲವ್ ಮಾಡಿ, ದೇವಸ್ಥಾನದಲ್ಲಿ ತಾಳಿ ಕಟ್ಟಿ ಕೈ-ಕೊಟ್ಟಿದ್ದ ಪ್ರಿಯಕರನೇ ತನ್ನ ಪ್ರೇಯಸಿಯೊಂದಿಗೆ ಸಂಸಾರ ಮಾಡುವುದಾಗಿ ಒಪ್ಪಿಕೊಂಡಿದ್ದಾನೆ. ಈ ಮೂಲಕ ಮೋಸ ಹೋಗುತ್ತಿದ್ದ ಯುವತಿಯ ಪ್ರಕರಣ ಸುಖಾಂತ್ಯಗೊಂಡಿದೆ.
ರಾಯಚೂರು ಹುಡುಗ, ಕೊಪ್ಪಳದ ಹುಡುಗಿ ಇಬ್ಬರೂ ಬಳ್ಳಾರಿಯಲ್ಲಿ ಪದವಿ ಅಭ್ಯಾಸ ಮಾಡುವಾಗ ಇಬ್ಬರ ನಡುವೆ ಲವ್, ಸೆಕ್ಸ್ ಹಾಗೂ ಮ್ಯಾರೇಜ್ ನಡೆದಿದೆ. ನಂತರ ಹುಡುಗಿಗೆ ದೋಖಾ ಮಾಡಿ ತಮ್ಮ ಸ್ವಂತ ಊರು ರಾಯಚೂರಿಗೆ ಹೋಗಿ ಸೆಟಲ್ ಆಗಿದ್ದ ಹುಡುಗ ತಂದೆ-ತಾಯಿ ತೋರಿಸಿದ ಬೇರೊಬ್ಬ ಹುಡುಗಿಯೊಂದಿಗೆ ಮದುವೆಗೆ ಮುಂದಾಗಿದ್ದನು. ಇಂದು ತಾಳಿ ಕಟ್ಟುವ ವೇಳೆಗೆ ಎಂಟ್ರಿ ಕೊಟ್ಟ ಮಾಜಿ ಪ್ರೇಯಸಿ ಇದೀಗ ಇಬ್ಬರ ಮದುವೆಯನ್ನು ನಿಲ್ಲಿದ್ದಳು. ನಂತರ, ರಾಯಚೂರು ಮಹಿಳಾ ಪೊಲೀಸ್ ಠಾಣೆಯ ತನಿಖಾಧಿಕಾರಿಗಳ ಸಮ್ಮುಖದಲ್ಲಿ ಮಾತುಕತೆ ನಡೆಸಿದ ಪ್ರಿಯಕರ ರಿಷಬ್, ತಾನು ಈ ಹಿಂದೆ ದೇವಸ್ಥಾನದಲ್ಲಿ ಮದುವೆಯಾಗಿದ್ದ ಸಂತ್ರಸ್ತ ಯುವತಿ ವಿದ್ಯಾ ಜೊತೆ ಜೀವನ ನಡೆಸುವುದಾಗಿ ಒಪ್ಪಿಕೊಂಡಿದ್ದಾನೆ.
ವಿದ್ಯಾಳಿಗೆ ಮದುವೆ ತಡೆಯಲು ಸಾಧ್ಯವಾಗಿದ್ದಾದರೂ ಹೇಗೆ?
ಕೊಪ್ಪಳ ಮೂಲದ ವಿದ್ಯಾ ಮತ್ತು ರಾಯಚೂರು ಮೂಲದ ರಿಷಬ್ ಡಿಗ್ರಿ ಓದುವಾಗ ಪರಿಚಿತರಾಗಿ, ಪ್ರೀತಿಸಿದ್ದರು. ಪ್ರೀತಿ ಮತ್ತು ಮದುವೆಯ ನಾಟಕವಾಡಿ ರಿಷಬ್, ವಿದ್ಯಾ ಜೊತೆ ದೈಹಿಕ ಸಂಪರ್ಕ ಬೆಳೆಸಿ, ಗರ್ಭಪಾತ ಕೂಡ ಮಾಡಿಸಿದ್ದ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಬಳಿಕ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದರೂ, ವಿದ್ಯಾಳನ್ನು ಕಡೆಗಣಿಸಿ ರಿಷಬ್ ಇಂದು ಮತ್ತೊಂದು ಯುವತಿ ಜೊತೆ ಮದುವೆಯಾಗಲು ಸಿದ್ಧತೆ ನಡೆಸಿದ್ದನು. ಈ ವಿಚಾರ ಇನ್‌ಸ್ಟಾಗ್ರಾಂ ಮೂಲಕ ತಿಳಿದ ವಿದ್ಯಾ, ನೇರವಾಗಿ ಮದುವೆ ಮಂಟಪಕ್ಕೆ ತೆರಳಿ ಘಟನೆಯನ್ನು ಬಯಲಿಗೆಳೆದಿದ್ದಳು. ಇದರಿಂದ ರಿಷಬ್‌ನ ಎರಡನೇ ಮದುವೆ ರದ್ದಾಗಿತ್ತು ಮತ್ತು ಆತನ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಪರಸ್ಪರ ಒಪ್ಪಂದದ ಮೂಲಕ ಪ್ರಕರಣ ಸುಖಾಂತ್ಯ:
ದೂರು ದಾಖಲಾದ ಬಳಿಕ ಪೊಲೀಸರು ರಿಷಬ್ ಮತ್ತು ಸಂತ್ರಸ್ತ ಯುವತಿ ವಿದ್ಯಾ ಇಬ್ಬರನ್ನೂ ಠಾಣೆಗೆ ಕರೆಸಿ ಮಾತುಕತೆ ನಡೆಸಿದರು. ದೀರ್ಘ ಮಾತುಕತೆ ಮತ್ತು ತನಿಖಾಧಿಕಾರಿಗಳ ಸಮ್ಮುಖದಲ್ಲಿ ರಿಷಬ್, ಯಾರದೇ ಒತ್ತಾಯವಿಲ್ಲದೇ ಸ್ವಯಂಪ್ರೇರಿತವಾಗಿ ವಿದ್ಯಾ ಜೊತೆ ಸಂಸಾರ ನಡೆಸಲು ಒಪ್ಪಿಕೊಂಡಿದ್ದಾನೆ. ಪ್ರಕರಣ ಸುಖಾಂತ್ಯಗೊಂಡ ನಂತರ ಸಂತಸ ವ್ಯಕ್ತಪಡಿಸಿದ ಸಂತ್ರಸ್ತ ಯುವತಿ ವಿದ್ಯಾ, 'ಬೆಳಿಗ್ಗೆ ದೂರು ದಾಖಲಿಸಿದ್ದೆ. ಈಗ ಪೊಲೀಸರು ಇಬ್ಬರನ್ನು ಕೂರಿಸಿ ಹೇಳಿಕೆ ಪಡೆದರು. ಇಬ್ಬರೂ ಪರಸ್ಪರ ಒಪ್ಪಿ ಒಂದಾಗಿದ್ದೇವೆ. ನನಗೆ ನ್ಯಾಯ ಸಿಕ್ಕಿದೆ, ಸಂತೋಷದಿಂದ ಹೋಗುತ್ತಿದ್ದೇವೆ. ನಾವು ಕಾನೂನಿನಡಿಯಲ್ಲೇ ಒಂದಾಗಿದ್ದೇವೆ' ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಘಟನೆಯು ರಾಯಚೂರಿನಲ್ಲಿ ಕೆಲವು ಗಂಟೆಗಳ ಕಾಲ ತೀವ್ರ ಸಂಚಲನ ಮೂಡಿಸಿತ್ತು. ಆದರೆ, ಪೊಲೀಸರ ಸಮನ್ವಯ ಮತ್ತು ಕಾನೂನಿನ ಮಧ್ಯಸ್ಥಿಕೆಯಿಂದಾಗಿ ಸಂತ್ರಸ್ತ ಯುವತಿಗೆ ನ್ಯಾಯ ಸಿಕ್ಕಿ, ಪ್ರಕರಣ ಸುಖಾಂತ್ಯ ಕಂಡಿದೆ. ಇನ್ನು ಮದುವೆಗೆ ಮನೆಗೆ ಬಂದಿದ್ದ ಎಲ್ಲ ಸಂಬಂಧಿಕರು ಮದುವೆ ನಿಂತಿದ್ದಕ್ಕೆ ತುಂಬಾ ಬೇಸರಗೊಂಡಿದ್ದರು. ಆದರೆ, ಮಕ್ಕಳು ಹದಿಹರೆಯದ ವಯಸ್ಸಿನಲ್ಲಿ ಮಾಡಿದ ತಪ್ಪನ್ನು ಕ್ಷಮಿಸಿ ಮಕ್ಕಳ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.


