ಶಿವಮೊಗ್ಗದ ಸವಳಂಗ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾದ, ಗುರುತುಗಳಿಲ್ಲದ ರಸ್ತೆ ಉಬ್ಬಿನಲ್ಲಿ ಬೈಕ್ ಹಾರಿಬಿದ್ದ ಪರಿಣಾಮ 28 ವರ್ಷದ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದನು. ಮೂರು ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಡಿ, ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ.
ಶಿವಮೊಗ್ಗ (ಫೆ.16): ನಗರದ ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ರಸ್ತೆ ಉಬ್ಬುಗಳು (Speed Breakers) ಈಗ ಅಮಾಯಕರ ಪ್ರಾಣಪಕ್ಷಿಯನ್ನು ಹಾರಿಸುತ್ತಿವೆ. ಶಿವಮೊಗ್ಗದ ಸವಳಂಗ ರಸ್ತೆಯಲ್ಲಿ ನಡೆದ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಸಾರ್ವಜನಿಕ ವಲಯದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಘಟನೆಯ ವಿವರ:
ಶಿವಮೊಗ್ಗ ನಗರದ ವಾದಿ ಎ ಹುದಾ ಬಡಾವಣೆಯ ನಿವಾಸಿ ಸೈಯದ್ ಸುಹೇಲ್ (28) ಮೃತ ದುರ್ದೈವಿ. ಇವರು ನಗರದ ಪ್ರಸಿದ್ಧ ಮೊಬೈಲ್ ಶೋರೂಮ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಫೆಬ್ರವರಿ 12 ರಂದು ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಸವಳಂಗ ರಸ್ತೆಯಲ್ಲಿ ಈ ಘೋರ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಸುಹೇಲ್ ಅವರಿಗೆ ಯಾವುದೇ ಸೂಚನೆ ಅಥವಾ ಬಿಳಿ ಪಟ್ಟಿ (Markings) ಇಲ್ಲದ ರಸ್ತೆ ಉಬ್ಬು ದಿಡೀರ್ ಎದುರಾಗಿದೆ. ವೇಗವಾಗಿ ಹೋಗುತ್ತಿದ್ದ ಬೈಕ್, ಈ ಅವೈಜ್ಞಾನಿಕ ಹಂಪ್ ಮೇಲೆ ಹಾರಿದ ಪರಿಣಾಮ ಸುಹೇಲ್ ಆಯತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಅವರು ಬೈಕ್ ಸಹಿತ ರಸ್ತೆಯಲ್ಲಿ ಸುಮಾರು ದೂರದವರೆಗೆ ಉಜ್ಜಿಕೊಂಡು ಹೋಗಿದ್ದಾರೆ. ಇದರಿಂದ ಅವರ ತಲೆ ಮತ್ತು ದೇಹದ ಇತರೆ ಭಾಗಗಳಿಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದಿತ್ತು.
ಮೂರು ದಿನಗಳ ಕಾಲ ಸಾವು-ಬದುಕಿನ ಹೋರಾಟ:
ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಸುಹೇಲ್ ಅವರನ್ನು ರಕ್ಷಿಸಿ ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ತಲೆಗೆ ಬಲವಾದ ಏಟು ಬಿದ್ದಿದ್ದರಿಂದ ಸುಹೇಲ್ ಸ್ಥಿತಿ ಚಿಂತಾಜನಕವಾಗಿತ್ತು. ವೈದ್ಯರ ಸತತ ಪ್ರಯತ್ನದ ನಡುವೆಯೂ ಫೆಬ್ರವರಿ 15 ರಂದು ಸುಹೇಲ್ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ನಗರದ ಸವಳಂಗ ರಸ್ತೆಯು ಅತ್ಯಂತ ಜನನಿಬಿಡ ರಸ್ತೆಯಾಗಿದ್ದು, ಇಲ್ಲಿ ಅಳವಡಿಸಲಾಗಿರುವ ರಸ್ತೆ ಉಬ್ಬುಗಳಿಗೆ ಸರಿಯಾದ ಬಣ್ಣ ಹಚ್ಚಿಲ್ಲ ಹಾಗೂ ವಾಹನ ಸವಾರರಿಗೆ ಎಚ್ಚರಿಕೆ ನೀಡುವ ಫಲಕಗಳನ್ನೂ ಹಾಕಿಲ್ಲ. 'ರಾತ್ರಿ ವೇಳೆ ಈ ಉಬ್ಬುಗಳು ಕಣ್ಣಿಗೆ ಕಾಣಿಸದೆ ಇರುವುದೇ ಅಪಘಾತಕ್ಕೆ ಮುಖ್ಯ ಕಾರಣ. ಪಾಲಿಕೆ ಮತ್ತು ಲೋಕೋಪಯೋಗಿ ಇಲಾಖೆಯ ಈ ಬೇಜವಾಬ್ದಾರಿತನಕ್ಕೆ ಇಂದು ಒಬ್ಬ ದುಡಿಯುವ ಯುವಕ ಬಲಿಯಾಗಿದ್ದಾನೆ' ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.
ಈ ಸಂಬಂಧ ಶಿವಮೊಗ್ಗದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸುಹೇಲ್ ನಿಧನದಿಂದ ಅವರ ಕುಟುಂಬ ಆಧಾರ ಸ್ತಂಭವನ್ನೇ ಕಳೆದುಕೊಂಡಂತಾಗಿದ್ದು, ವಾದಿ ಎ ಹುದಾ ಬಡಾವಣೆಯಲ್ಲಿ ಶೋಕ ಮಡುಗಟ್ಟಿದೆ.


