ಚಿನ್ನಸ್ವಾಮಿ ಕಾಲ್ತುಳಿತ ಚರ್ಚೆ ವೇಳೆ ಸಿಎಂ ಸಿದ್ದರಾಮಯ್ಯ ಮತ್ತು ವಿಪಕ್ಷ ನಾಯಕ ಆರ್. ಅಶೋಕ್ ಅವರ ನಡುವೆ ನಡೆದ ಸ್ನೇಹಪೂರ್ಣ ವಾಗ್ವಾದ. ಸದನದ ಒಳಗೆ ಮತ್ತು ಹೊರಗೆ ಅವರ ವರ್ತನೆಯ ಬಗ್ಗೆ ತಮಾಷೆಯಾಗಿ ಚರ್ಚಿಸಿದರು.

ಬೆಂಗಳೂರು (ಆ.22): ಆರ್‌ಸಿಬಿ ಐಪಿಎಲ್‌ ಕಪ್‌ ಗೆದ್ದ ಬಳಿಕ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಎದುರು ಸಂಭವಿಸಿದ ಭೀಕರ ಕಾಲ್ತುಳಿತದ ಬಗ್ಗೆ ವಿಧಾನಸಭೆಯಲ್ಲಿ ಸಿಎಂ ಸಿದ್ಧರಾಮಯ್ಯ ಶುಕ್ರವಾರ ಮಾತನಾಡಿದರು. ವಿಪಕ್ಷ ನಾಯಕ ಆರ್‌.ಅಶೋಕ್‌ ವಿವರವಾಗಿ ಮಾತನಾಡಿದ ಬಳಿಕ ಉತ್ತರ ನೀಡಲು ಆರಂಭಿಸಿದ ಸಿದ್ದರಾಮಯ್ಯ ಆ ದಿನ ಆದ ಘಟನೆಗಳನ್ನು ವಿವರಿಸಿದರು. ಅದರೊಂದಿಗೆ ಬೇರೆ ಬೇರೆ ರಾಜ್ಯಗಳಲ್ಲಿ ಹಾಗೂ ದೇಶಗಳಲ್ಲಿ ಆಗಿರುವ ಕಾಲ್ತುಳಿತ ಹಾಗೂ ಅದರಲ್ಲಿ ಸತ್ತ ಜನಗಳ ಸಂಖ್ಯೆಯ ಮಾಹಿತಿ ನೀಡುತ್ತಿದ್ದರು. 'ಇಂಡೋನೇಷ್ಯಾದ ಫುಟ್‌ಬಾಲ್‌ ಸ್ಟೇಡಿಯಂನಲ್ಲಿ ಆದ ಕಾಲ್ತುಳಿತದಲ್ಲಿ 174 ಮಂದಿ ಮರಣ ಹೊಂದುತ್ತಾರೆ..' ಎಂದು ಸಿಎಂ ಹೇಳಿದರು.

ಈ ವೇಳೆ ಪಕ್ಕದಲ್ಲಿಯೇ ಕುಳಿತಿದ್ದ ಡಿಕೆ ಶಿವಕುಮಾರ್‌, 'ಅಶೋಕ್‌ ನಂಬರ್‌ ಬರ್ಕೊಳ್ಳಿ. 170. ಇಂಡೋನೇಷ್ಯಾ' ಎಂದು ಹೇಳಿದರು. ಇದಕ್ಕೆ ಅಶೋಕ್‌, 'ಅವರು ಮಾತಾಡ್ಬೇಡ ಅಂತಾ ಹೇಳಿದ್ದಾರೆ..' ಎಂದರು. ಇದಕ್ಕೆ ಉತ್ತರಿಸಿದ ಸಿಎಂ, 'ನಿಮ್ಮಿಬ್ಬರ ಸ್ನೇಹ ಇದ್ಯಲ್ಲ. ಆ ಸ್ನೇಹದ ಮೇಲೆ ಮಾತನಾಡಿದ್ದಾರೆ' ಎಂದು ಕಿಚಾಯಿಸಿದರು.

ಇದಕ್ಕೆ ಅಶೋಕ್‌, ಅವರಿಗಿಂತ ಜಾಸ್ತಿ ನೀವು ಸ್ನೇಹಿತರು ಎಂದು ಹೇಳಿದಾಗ ಸಿದ್ದರಾಮಯ್ಯ ಎರಡು ಮೂರು ಸಾರಿ ತಲೆ ಅಲ್ಲಾಡಿಸಿ 'ಅದು ಸರಿ' ಎಂದರು. 'ನನಗೆ ಒಳ್ಳೆ ಸ್ನೇಹಿತ ನೀನು. ಅದರ ಬಗ್ಗೆ ಎರಡನೇ ಮಾತೇ ಇಲ್ಲ.ಆದ್ರೆ ಈ ಅಸೆಂಬ್ಲಿ ಅಲ್ಲಿ ಇರೋವಾಗ ಒಂದು ಥರ ಇರ್ತಿಯಾ, ಹೊರಗಡೆ ಇನ್ನೊಂದು ಥರ ಇರ್ತೀಯ. ಅದೇ ಬಂದಿರೋದು ನಮಗೆ ತಾಪತ್ರಯ' ಎಂದು ತಮಾಷೆ ಮಾಡಿದರು.

ಅದಕ್ಕೆ ಅಶೋಕ್‌ ನೀವೂ ಹಂಗೆ ಇದ್ದೀರಿ ಸರ್‌. ಚೇರ್‌ ಮೇಲೆ ಇದ್ದಾಗ ಒಂಥರಾ ಇರ್ತಿರಿ. ಆಚೆ ಬಂದಾಗ ಬೇರೆ ಥರ. ಇಲ್ಲಿ ಕೂತಾಗ ನಾವು ಹಾಗೆ. ಅಲ್ಲಿ ಕೂತಾಗ ನೀವೂ ಹಾಗೆ. ಮಹಿಮೆ' ಎಂದು ಹೇಳಿದರು. ಇದಕ್ಕೆ ಸುನೀಲ್‌ ಕುಮಾರ್‌, 'ಒಳಗೊಂದು, ಹೊರಗೊಂದು..' ಎಂದು ಹೇಳಿದಾಗ ಸದನ ನಗೆಗಡಲಲ್ಲಿ ತೇಲಿತು. ಮಾತನ್ನು ತಿದ್ದಿದ ಸಿಎಂ, ಅದು ಮಹಿಮೆ ಅನ್ನೋದಕ್ಕಿಂತ ಜವಾಬ್ದಾರಿ ಎಂದಾಗ, ಅಶೋಕ್‌ ಕೂಡ ಕರೆಕ್ಟ್‌ ಎಂದು ಒಪ್ಪಿಕೊಂಡರು.

ಒಳಗೊಂದು-ಹೊರಗೊಂದು ಸ್ನೇಹ ಇದ್ಯಲ್ಲ ಸ್ವಲ್ಪ ಅದರ ವಿವರಣೆ ಕೊಡಿ ಎಂದು ಸುನೀಲ್‌ ಕುಮಾರ್‌ ಕೇಳಿದಾಗ, ಒಬ್ನೆ ಸಿಗು ನಿನಗೆ ಹೇಳ್ತೇನೆ ಎಂದು ಸಿಎಂ ತಿಳಿಸಿದಾಗ ಸದನ ಮತ್ತೊಮ್ಮೆ ನಗೆಗಡಲಲ್ಲಿ ತೇಲಿತು.