Sirsi Haveri Hubli Road: ಶಿರಸಿಯಲ್ಲಿರುವ ರಸ್ತೆಗಳೆಲ್ಲವೂ ಹೊಂಡಮಯವಾಗಿದೆ. ಈ ರಸ್ತೆಗಳಲ್ಲಿ ಗಾಡಿ ಓಡಿಸಿ ಈಗ ಓರ್ವ ಶಿಕ್ಷಕಿ ಮೂಳೆ ಮುರಿದುಕೊಂಡಿದ್ದಾರೆ. ಹೀಗಾಗಿ ಧರಣಿ ಕೂರಲು ಕರೆ ನೀಡಲಾಗಿದೆ. 

ಶಿರಸಿ: ಶಿರಸಿಯಲ್ಲಿ ಈಗ ರಸ್ತೆಗಳನ್ನು ಹುಡುಕುವುದು ಕಷ್ಟ ಆಗಿದೆ. ಮಳೆಗಾಲದಲ್ಲಿ ಹೊಂಡಗಳ ಮಧ್ಯೆ ರಸ್ತೆ ಎಲ್ಲಿದೆ ಎಂದು ಹುಡುಕಬೇಕಿದೆ. ಶಿರಸಿಯಿಂದ ಹಾವೇರಿಗೆ ಹೋಗುವ ರೋಡ್‌ನ್ನು ಕಳೆದ ಮೇ ತಿಂಗಳಿನಲ್ಲಿ ಡಾಂಬರೀಕರಣ ಮಾಡಲಾಗಿತ್ತು. ಈಗ ಆ ರೋಡ್‌ ಮತ್ತೆ ಹೊಂಡಗಳಿಂದ ತುಂಬಿದೆ. ಇಂದು ( ಆಗಸ್ಟ್‌ 6 ) ಶಿಕ್ಷಕಿಯೋರ್ವರು ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಇದೀಗ ಹುಬ್ಬಳ್ಳಿ ರಸ್ತೆಯಲ್ಲಿರುವ ಮಿರ್ಜಾನಕರ್ ಪೆಟ್ರೋಲ್ ಪಂಪ ಹತ್ತಿರ ನಡೆದಿದೆ. ಇದಕ್ಕೆ ಪರಿಹಾರ ಇಲ್ಲವೇ? 

ಬೆನ್ನುಮೂಳೆ ಮುರಿದಿದೆ!

ಶಿರಸಿ ತಾಲೂಕಿನ ಹೆಗಡೆಕಟ್ಟಾ ಸ.ಹಿ.ಪ್ರಾ.ಶಾಲೆಯ ಶಿಕ್ಷಕಿ ಮೈದ್ದಿನ ಕೆ ಗಾಯಗೊಂಡ ಮಹಿಳೆಯಾಗಿದ್ದು ಶಿರಸಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳಿಗ್ಗೆ ಶಾಲೆಗೆ ಸ್ಕೂಟಿ ಮೇಲೆ ಹೋಗುವಾಗ ಹೊಂಡ ತಪ್ಪಿಸಲು ಹೋಗಿ ಬಿದ್ದಿದ್ದಾರೆ. ಶಿಕ್ಷಕಿಯು ಬಿದ್ದ ಹೊಡೆತಕ್ಕೆ ಬೆನ್ನು ಮೂಳೆಯೇ ಮುರಿದು ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಹಿಡಿಶಾಪ ಹಾಕುತ್ತಿರುವ ಜನರು!

ಶಿರಸಿ ನಗರದ ರಸ್ತೆಗಳೆಲ್ಲ ಯಮ ರೂಪ ತಾಳಿದ್ದು, ಈ ರಸ್ತೆಯಿಂದ ಜೀವ ಹೋಗುವ ಸಾದ್ಯತೆಯಿದೆ. ಈಗಾಗಲೇ ಈ ರಸ್ತೆಯಿಂದ ಸಾಕಷ್ಟು ಜನರಿಗೆ ಸಮಸ್ಯೆ ಆಗಿದೆ. ದಯವಿಟ್ಟು ರಸ್ತೆ ದುರಸ್ಥಿ ಪಡಿಸಿ ಎಂದು ಸಾರ್ವಜನಿಕರು ಶಾಪ ಹಾಕುತ್ತಿದ್ದಾರೆ. ಇನ್ನು ಶಿರಸಿ ನಗರದಲ್ಲಿ ಹಾಗೂ ಸುತ್ತಮುತ್ತಲಿನ ಭಾಗದ ಹಳ್ಳಿಗಳ ರೋಡ್‌ಗಳಿಗೆ ಹಿಡಿ ಶಾಪ ಹಾಕುವಂತೆ ಆಗಿದೆ. ಕೆಲವೇ ದಿನಗಳ ಹಿಂದೆ ಶಿರಸಿ, ಎಕ್ಕಂಬಿ, ನೀಲೆಕಣಿ ರೋಡ್‌ಗೆ ತಾತ್ಕಾಲಿಕ ಗುಂಡಿ ಮುಚ್ಚುವ ಕೆಲಸ ಆಗಿದೆಯಂತೆ.

ಕ್ಷೇತ್ರದ ಶಾಸಕರು, ಸಂಸದರು ಎಲ್ಲಿದ್ದಾರೆ?

ಶಿರಸಿ-ಹುಬ್ಬಳ್ಳಿ-ಹಾವೇರಿ ರಸ್ತೆಗಳಲ್ಲಿ ನಿತ್ಯವೂ ಸಾವಿರಾರು ವಾಹನಗಳು ಓಡಾಡುತ್ತವೆ. ಎಕ್ಕಂಬಿ, ಇಸಳೂರು, ಗೌಡಳ್ಳಿ ಸಮೀಪ ಸಿಕ್ಕಾಪಟ್ಟೆ ರಸ್ತೆ ಹಾಳಾಗಿದ್ದು, ಹೊಂಡಗಳು ತುಂಬಿ ಹೋಗಿವೆ. ಕಳೆದ ಮೇ ತಿಂಗಳಿನಲ್ಲಿ ಈ ರಸ್ತೆಗೆ ಡಾಂಬರು ಹಾಕಲಾಗಿತ್ತು. ಈಗ ಒಂದೆಡರು ಮಳೆ ಬರುತ್ತಿದ್ದಂತೆ ಮತ್ತೆ ಅದೇ ಹಾಡು. ನಗರಸಭೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿಗಳಿಗೆ ಈ ಅವಘಡಗಳು ಕಾಣಿಸುತ್ತಿಲ್ಲವೇ? ಅಥವಾ ಕಣ್ಣು, ಕಿಬಿ ಮುಚ್ಚಿಕೊಂಡು ಕೂತಿದ್ದಾರಾ? ಇನ್ನು ಶಾಸಕ ಭೀಮಣ್ಣ ನಾಯ್ಕ್‌, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಅನಂತ್‌ಕುಮಾರ್‌ ಹೆಗಡೆ ಅವರು ಯಾಕೆ ರಸ್ತೆಯ ಬಗ್ಗೆ ಮಾತನಾಡುತ್ತಿಲ್ಲ? ಯಾಕೆ ದನಿ ಎತ್ತುತ್ತಿಲ್ಲ ಎಂಬುದಕ್ಕೆ ಅವರೇ ಉತ್ತರ ಕೊಡಬೇಕಿದೆ.

ಹೋರಾಟಕ್ಕೆ ಕರೆ ನೀಡಿದ ಅನಂತಮೂರ್ತಿ ಹೆಗಡೆ!

“ಮೊನ್ನೆ ಓರ್ವ ಮಹಿಳೆ ಸಾವಾಗಿದೆ, ಇಂದು ಶಿಕ್ಷಕಿಯ ಬೆನ್ನು ಮೂಳೆ ಮುರಿದಿದೆ. ಮನೆಯಲ್ಲೇ ಕುಳಿತು ಈ ಹೊಂಡ ಅಷ್ಟು ದೊಡ್ಡದಾಗಿದೆ, ಹಾಗಿದೆ, ಹೀಗಿದೆ, ಅಲ್ಲಿ ಬಸ್ಸು ಸರಿಯಿಲ್ಲ ,ಕೆಟ್ಟುಹೋಗಿದೆ ಎಂದು ಮನೆಯಲ್ಲೇ ಕುಳಿತು ಎಷ್ಟು ದಿನ ಹೇಳುತ್ತಾ ಇರುತ್ತೀರಿ, ನಾವು ಮನೆಯಲ್ಲೇ ಕುಳಿತು ಮಾತನಾಡಿದರೆ ಏನೂ ಆಗುವುದಿಲ್ಲ, ನಾವು ಬೀದಿಗೆ ಇಳಿಲೇ ಬೇಕು,ಆಗ್ರಹ ಮಾಡಲೇ ಬೇಕು. ಇಲ್ಲಿರುವ ಯಾವುದೇ ರಸ್ತೆಯಲ್ಲಿ ಓಡಾಡೋಕೆ ಬರುತ್ತಿಲ್ಲ. ತಕ್ಷಣ ಎಲ್ಲ ರಸ್ತೆಯ ಗುಂಡಿ ಮುಚ್ಚಲು ಆಗ್ರಹ ಮಾಡೋಣ. ಹಾಗೆಯೆ ಶಿರಸಿ ಘಟಕ ದಲ್ಲಿ ಇರುವ ಒಟ್ಟು 145 ಬಸ್ಸಿನಲ್ಲಿ 79 ಬಸ್ಸು ಹತ್ತು ಲಕ್ಷಕ್ಕೂ ಹೆಚ್ಚು ಕಿಲೋಮೀಟರ್ ಓಡಿರುವ ಬಸ್ಸುಗಳು ಇವೆ ,ಗುಜರಿ ಹಾಕಲು ಯೋಗ್ಯ ವಾದ ಬಸ್ಸು ಗಳನ್ನು ತಂದು ಓಡಿಸುತ್ತಿದ್ದಾರೆ . ಅದೇ ಬಸ್ಸಿನಲ್ಲಿ ನಮ್ಮಮಕ್ಕಳು ಓಡಾಡಿ ಏನಾದರೂ ಜೇವಕ್ಕೆ ಅಪಾಯ ವಾದರೆ ಯಾರು ಹೊಣೆ ,ನಾವು ಮನೆಯಲ್ಲಿ ಕುಳಿತು ಮಾತನಾಡಿದರೆ ಏನು ಆಗುವುದಿಲ್ಲ. ಬೀದಿಗೆ ಇಳಿದು ಹೋರಾಟ ಮಾಡೋಣ ಇದು ಕೇವಲ ನನ್ನೊಬ್ಬನ ಹೋರಾಟವಲ್ಲ ನಾವೆಲ್ಲರೂ ಸೇರಿ ಹೋರಾಟ ಮಾಡೋಣ” ಎಂದು ರಾಜಕಾರಣಿ, ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಅವರು ಕರೆ ನೀಡಿದ್ದಾರೆ.

ಅಂದಹಾಗೆ ಆಗಸ್ಟ್ 7ರಂದು ಶಿರಸಿಯಲ್ಲಿ ಹೋರಾಟ ಮಾಡಲಾಗುವುದಂತೆ.