ಧಾರವಾಡದ ಹೊರವಲಯದಲ್ಲಿ ಮುಂಡಗೋಡ ಮೂಲದ ಟಿಬೆಟಿಯನ್ ವ್ಯಕ್ತಿ ತಾಶಿ ಧೋಂಡು ಅವರ ಶವ ಪತ್ತೆಯಾಗಿದೆ. ಆರಂಭದಲ್ಲಿ ರಸ್ತೆ ಅಪಘಾತವೆಂದು ಭಾವಿಸಲಾಗಿದ್ದರೂ, ವೈದ್ಯಕೀಯ ತಪಾಸಣೆ ಬಳಿಕ ಇದು ಕೊಲೆ ಎಂದು ದೃಢಪಟ್ಟಿದೆ. ಧಾರವಾಡ ಗ್ರಾಮೀಣ ಪೊಲೀಸರು ಹತ್ಯೆಯ ಹಿಂದಿನ ಕಾರಣ ಮತ್ತು ಆರೋಪಿಗಳಿಗಾಗಿ ತನಿಖೆ ನಡೆಸುತ್ತಿದ್ದಾರೆ.
ಧಾರವಾಡ ಹೊರವಲಯದಲ್ಲಿ ಟಿಬೆಟಿಯನ್ ಮೂಲದ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಧಾರವಾಡದ ಹಳಿಯಾಳ ರಸ್ತೆಯ ಹೊರವಲಯದಲ್ಲಿ ಏಪ್ರಿಲ್ 29ರ ಮಧ್ಯಾಹ್ನ ರಸ್ತೆ ಪಕ್ಕದಲ್ಲಿ ಶವ ಪತ್ತೆಯಾಗಿದ್ದು, ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತ ವ್ಯಕ್ತಿಯನ್ನು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಮೂಲದ ತಾಶಿ ಧೋಂಡು (39) ಎಂದು ಗುರುತಿಸಲಾಗಿದೆ.
ಕೊಲೆ ಬಳಿಕ ಬೇರೆಡೆ ತಂದು ಎಸೆದು ಹೋದ ಪಾತಕಿಗಳು!
ಪ್ರಾಥಮಿಕ ಮಾಹಿತಿ ಪ್ರಕಾರ, ತಾಶಿ ಧೋಂಡು ಅವರನ್ನು ಕಳೆದ ರಾತ್ರಿ ಬೇರೆಡೆ ಕೊಲೆ ಮಾಡಿ, ಬಳಿಕ ಶವವನ್ನು ಧಾರವಾಡದ ಹಳಿಯಾಳ ರಸ್ತೆಗೆ ತಂದು ಎಸೆದು ಹೋಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಶವದ ಸ್ಥಿತಿ ಹಾಗೂ ಸುತ್ತಮುತ್ತಲಿನ ಪರಿಸ್ಥಿತಿಗಳನ್ನು ಅವಲೋಕಿಸಿದ ಬಳಿಕ ಈ ಅನುಮಾನಗಳು ಬಲವಾಗಿವೆ.
ರಸ್ತೆ ಅಪಘಾತ ಎಂದು ಅನುಮಾನ ಆದರೆ ಕೊಲೆ ಎಂಬುದು ದೃಢ!
ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರಂಭದಲ್ಲಿ ಇದು ರಸ್ತೆ ಅಪಘಾತದಿಂದ ಸಂಭವಿಸಿದ ಸಾವು ಎಂದು ಪೊಲೀಸರು ಭಾವಿಸಿದ್ದರು. ಆದರೆ ಶವವನ್ನು ಆಸ್ಪತ್ರೆಗೆ ರವಾನಿಸಿ ತಪಾಸಣೆ ಹಾಗೂ ವೈದ್ಯಕೀಯ ಪರಿಶೀಲನೆಯ ನಂತರ ಇದು ಹತ್ಯೆ ಪ್ರಕರಣ ಎಂಬುದು ದೃಢಪಟ್ಟಿದೆ.
ಈ ಪ್ರಕರಣ ಸಂಬಂಧ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಹತ್ಯೆಗೆ ಕಾರಣವೇನು, ಇದರಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎಂಬುದರ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಸ್ಥಳೀಯರ ಮಾಹಿತಿಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಅಪರಾಧಿಗಳನ್ನು ಶೀಘ್ರ ಬಂಧಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.


