ಉತ್ತರ ಕನ್ನಡದ ಮುಂಡಗೋಡ ಪಟ್ಟಣದಲ್ಲಿ, ಪೈನಾನ್ಸ್ ವ್ಯವಹಾರಸ್ಥ ಜಮೀರ್ ಅಹ್ಮದ್ ದರ್ಗಾವಾಲೆಯನ್ನು ಹೋಟೆಲ್‌ನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಏಪ್ರಿಲ್ 24ರ ರಾತ್ರಿ ನಡೆದ ಈ ಘಟನೆಯಲ್ಲಿ, ದುಷ್ಕರ್ಮಿಗಳು ಖಾರದ ಪುಡಿ ಎರಚಿ, ಮಚ್ಚಿನಿಂದ ಇರಿದು ಕೊಲೆಗೈದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದಲ್ಲಿ ನಡೆದ ಭೀಕರ ಹತ್ಯೆ ಪ್ರಕರಣವು ಭಯ ಹುಟ್ಟಿಸುವಂತಿದೆ. ಪಟ್ಟಣದ ಬಸ್ ನಿಲ್ದಾಣದ ಎದುರಿನ ಅಂಬಿಕಾ ಹೋಟೆಲ್‌ನಲ್ಲಿ ಪೈನಾನ್ಸ್ ವ್ಯವಹಾರ ಮಾಡುತ್ತಿದ್ದ ಜಮೀರ್ ಅಹ್ಮದ್ ದರ್ಗಾವಾಲೆಯನ್ನು ದುಷ್ಕರ್ಮಿಗಳು ಅಮಾನುಷವಾಗಿ ಕೊಲೆಗೈದಿದ್ದಾರೆ.

ಸ್ನೇಹಿತನೊಂದಿಗೆ ಊಟಕ್ಕೆ ಬಂದಾಗ ಟಾರ್ಗೆಟ್

ಏಪ್ರಿಲ್ 24ರ ರಾತ್ರಿ ಸುಮಾರು 11 ಗಂಟೆಯ ವೇಳೆಗೆ, ಜಮೀರ್ ಅಹ್ಮದ್ ತಮ್ಮ ಸ್ನೇಹಿತನೊಂದಿಗೆ ಊಟಕ್ಕೆ ಹೋಟೆಲ್‌ಗೆ ಬಂದಿದ್ದರು. ಈ ವೇಳೆ ಸ್ನೇಹಿತನನ್ನು ಸಿಗರೇಟ್ ತರಲು ಹೊರಗೆ ಕಳುಹಿಸಿದ್ದಾಗ, ನಾಲ್ಕೈದು ಮಂದಿ ದುಷ್ಕರ್ಮಿಗಳು ಏಕಾಏಕಿ ಹೋಟೆಲ್‌ಗೆ ನುಗ್ಗಿದ್ದಾರೆ. ಮೊದಲು ಜಮೀರ್ ಅವರ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ನಂತರ ಪ್ರಾಣಾಪಾಯದಿಂದ ತಪ್ಪಿಸಿಕೊಳ್ಳಲು ಜಮೀರ್ ಹೋಟೆಲ್‌ನ ಅಡುಗೆಮನೆಯ ಕಡೆಗೆ ಓಡಲು ಯತ್ನಿಸಿದರೂ, ದುಷ್ಕರ್ಮಿಗಳು ಅವರನ್ನು ಹಿಂಬಾಲಿಸಿ ಹಿಡಿದುಕೊಂಡು, ಹರಿತವಾದ ಮಚ್ಚಿನಿಂದ ಕುತ್ತಿಗೆಗೆ ಗಂಭೀರವಾಗಿ ಇರಿದು ಕೊಲೆಗೈದಿದ್ದಾರೆ. ಇದಲ್ಲದೆ, ಗುಂಡು ಹಾರಿಸಿದ ಶಂಕೆಯೂ ವ್ಯಕ್ತವಾಗಿದೆ. ಘಟನೆ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಈ ಭೀಕರ ದಾಳಿಯಿಂದ ಬೆಚ್ಚಿಬಿದ್ದ ಹೋಟೆಲ್ ಮಾಲೀಕರು ತಕ್ಷಣ ಸ್ಥಳದಿಂದ ಓಡಿ ಹೋಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಮುಂಡಗೋಡ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಮೃತದೇಹವನ್ನು ತಾಲೂಕು ಆಸ್ಪತ್ರೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಹಿಂದೆ ಹಣಕ್ಕಾಘಿ ಕಿಡ್ನಾಪ್

ಪ್ರಾಥಮಿಕ ಮಾಹಿತಿಯ ಪ್ರಕಾರ, ಜಮೀರ್ ಅಹ್ಮದ್ ಪೈನಾನ್ಸ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು. ಸುಮಾರು ಒಂದೂವರೆ ವರ್ಷಗಳ ಹಿಂದೆ ಅವರನ್ನು ಹಣಕ್ಕಾಗಿ ಅಪಹರಣ ಮಾಡಲಾಗಿತ್ತು. ಆಗ ಸುಮಾರು 30 ಲಕ್ಷ ರೂ. ಹಣಕ್ಕಾಗಿ ಅಪಹರಣಕಾರರು ಬೇಡಿಕೆ ಇಟ್ಟಿದ್ದರು. ಆದರೆ, ಮುಂಡಗೋಡ ಪೊಲೀಸರು ಚಾಕಚಕ್ಯತೆಯಿಂದ ಕಾರ್ಯಾಚರಣೆ ನಡೆಸಿ ಅಪಹರಣಕಾರರನ್ನು ಬಂಧಿಸಿ ಜಮೀರ್ ಅವರನ್ನು ರಕ್ಷಿಸಿದ್ದರು.

ಈ ಹಿಂದಿನ ಘಟನೆ ಮತ್ತು ಪ್ರಸ್ತುತ ಹತ್ಯೆ ನಡುವೆ ಯಾವುದೇ ಸಂಪರ್ಕವಿದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಹಂತಕರ ಪತ್ತೆಗೆ ಈಗಾಗಲೇ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಒಟ್ಟಿನಲ್ಲಿ, ಸಾರ್ವಜನಿಕ ಸ್ಥಳದಲ್ಲೇ ನಡೆದ ಈ ಕ್ರೂರ ಹತ್ಯೆ ಪ್ರಕರಣವು ಮುಂಡಗೋಡ ಪಟ್ಟಣದಲ್ಲಿ ಭೀತಿಯ ವಾತಾವರಣ ನಿರ್ಮಾಣ ಮಾಡಿದ್ದು, ಜನರಲ್ಲಿ ಭದ್ರತೆ ಕುರಿತು ಆತಂಕ ಹೆಚ್ಚಿಸಿದೆ. ಪೊಲೀಸರು ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.