ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಯುವತಿಯೊಬ್ಬಳು ತನ್ನ ಹಳೆ ಮತ್ತು ಹೊಸ ಗೆಳೆಯರ ನಡುವೆ ಸಿಲುಕಿಕೊಂಡ ಘಟನೆ ನಡೆದಿದೆ. ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ಯುವಕರ ನಡುವೆ ವಾಗ್ವಾದ ನಡೆದು, ಸ್ಥಳೀಯರು ಇದನ್ನು ಚಿತ್ರೀಕರಿಸಿದ್ದಾರೆ. ಸ್ನೇಹಿತರು ಮಧ್ಯಪ್ರವೇಶಿಸಿ ಯುವತಿಯನ್ನು ಕರೆದೊಯ್ದಿದ್ದರಿಂದ ಪರಿಸ್ಥಿತಿ ತಿಳಿಯಾಯಿತು.

ಬೆಂಗಳೂರು ನಗರದ ಹೆಚ್‌ಎಸ್‌ಆರ್ ಲೇಔಟ್ ಪ್ರದೇಶದಲ್ಲಿ ಯುವತಿ ಹಾಗೂ ಇಬ್ಬರು ಯುವಕರ ನಡುವೆ ನಡೆದ ಘಟನೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಹೊಸ ಗೆಳೆಯ ಮತ್ತು ಹಳೆ ಗೆಳೆಯರ ನಡುವೆ ಸಿಲುಕಿದ ಯುವತಿ, ಕೆಲಕಾಲ ಅಸಮಾಧಾನಕರ ಪರಿಸ್ಥಿತಿಯನ್ನು ಎದುರಿಸಬೇಕಾದ ಘಟನೆ ಎರಡು ದಿನದ ಹಿಂದೆ ನಡೆದಿದೆ.

ಮಾಹಿತಿಯ ಪ್ರಕಾರ, ಯುವತಿ ತನ್ನ ಹಳೆಯ ಗೆಳೆಯನೊಂದಿಗೆ ರಸ್ತೆ ಬದಿಯಲ್ಲಿ ಮಾತನಾಡುತ್ತಿದ್ದಳು. ಇದೇ ವೇಳೆ ಅಚಾನಕ್‌ ಆಗಿ ಆಕೆಯ ಹೊಸ ಗೆಳೆಯ ಸ್ಥಳಕ್ಕೆ ಆಗಮಿಸಿದ್ದಾನೆ. ಯುವತಿ ಮತ್ತೊಬ್ಬ ಯುವಕರೊಂದಿಗೆ ಮಾತನಾಡುತ್ತಿರುವುದನ್ನು ಕಂಡು ಕೆರಳಿದ ಆತ, ತಕ್ಷಣವೇ ಮಧ್ಯಪ್ರವೇಶ ಮಾಡಿ ಪ್ರಶ್ನಿಸಲು ಆರಂಭಿಸಿದ್ದಾನೆ.

ಯುವತಿಯನ್ನು ಅಡ್ಡಹಾಕಿ ತಡೆಯಲು ಯತ್ನ

ಈ ಸಂದರ್ಭ, ಹಳೆಯ ಗೆಳೆಯ ಯುವತಿಯೊಂದಿಗೆ ಮಾತನಾಡಲು ಮುಂದಾಗುತ್ತಿದ್ದಂತೆ, ಹೊಸ ಗೆಳೆಯ ಅಡ್ಡಿಪಡಿಸಿ, “ನಿಲ್ಲು, ಮಾತಾಡ್ಬೇಕು” ಎಂದು ಹೇಳಿ ಯುವತಿಯ ಕೈ ಹಿಡಿದು ಎಳೆದಿದ್ದಾನೆ. ಅಲ್ಲದೆ, ಯುವತಿಗೆ ದಾರಿ ಬಿಡದೆ ನಡುರಸ್ತೆಯಲ್ಲೇ ಅಡ್ಡಹಾಕಿ ತಡೆಯಲು ಯತ್ನಿಸಿದ್ದಾನೆ. ಇದರಿಂದ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ವೇಳೆ ಯುವತಿ ಮತ್ತು ಇಬ್ಬರು ಯುವಕರ ನಡುವೆ ಮಾತಿನ ಚಕಮಕಿ ಜೋರಾಗಿ ನಡೆಯಿತು. ಸಾರ್ವಜನಿಕ ಸ್ಥಳದಲ್ಲೇ ನಡೆದ ಈ ವಾಗ್ವಾದ ‘ಕೋಲ್ಡ್ ವಾರ್’ ರೀತಿಯಲ್ಲಿ ಕೆಲಕಾಲ ಮುಂದುವರಿದಿದ್ದು, ಸುತ್ತಮುತ್ತಲಿನ ಜನರ ಗಮನ ಸೆಳೆಯಿತು. ಸ್ಥಳೀಯರು ಈ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮಧ್ಯೆ ಪ್ರವೇಶಿಸಿದ ಸ್ನೇಹಿತರು

ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಳ್ಳುವ ಮುನ್ನವೇ, ಯುವತಿಯ ಕಾಲೇಜು ಸ್ನೇಹಿತರು ಸ್ಥಳಕ್ಕೆ ಆಗಮಿಸಿ ಆಕೆಯನ್ನು ಅಲ್ಲಿಂದ ಕರೆದುಕೊಂಡು ಹೋಗಿದ್ದಾರೆ. ಇದರಿಂದ ದೊಡ್ಡ ಗಲಾಟೆ ಜೋರಾಗಿ ಸಂಭವಿಸುವುದು ತಪ್ಪಿದೆ.

ಈ ಘಟನೆ ಹೆಚ್‌ಎಸ್‌ಆರ್ ಲೇಔಟ್ ಪ್ರದೇಶದಲ್ಲಿ ಸಾರ್ವಜನಿಕರ ಮುಂದೆ ನಡೆದಿರುವುದು, ಇಂತಹ ವೈಯಕ್ತಿಕ ವಿಚಾರಗಳು ಸಾರ್ವಜನಿಕ ಸ್ಥಳಗಳಲ್ಲಿ ನಡೆದಿರುವುದು ಈಗಿನ ವಿದ್ಯಾರ್ಥಿಗಳ ಮನಸ್ಥಿತಿಯ ಬಗ್ಗೆ ಬೆಳಕು ಚೆಲ್ಲುತ್ತದೆ.