ಕೂಡ್ಲಿಗಿ ತಾಲೂಕಿನಲ್ಲಿ ಹೆಚ್ಚುತ್ತಿರುವ ವಿಂಡ್ ಫ್ಯಾನ್‌ಗಳ ಶಬ್ದದಿಂದಾಗಿ ಅಂಕಸಮುದ್ರದಂತಹ ಪಕ್ಷಿಧಾಮಗಳಿಗೆ ಬರುವ ವಲಸೆ ಪಕ್ಷಿಗಳು ದೂರ ಸರಿಯುತ್ತಿವೆ. ರೈತರು ಹಣದಾಸೆಗೆ ಜಮೀನು ಲೀಸ್ ನೀಡುತ್ತಿದ್ದು, ಇದರಿಂದ ಪಕ್ಷಿಗಳ ವಾಸಸ್ಥಾನಕ್ಕೆ ಕುತ್ತು ಬಂದಿದೆ.

ವರದಿ: ಭೀಮಣ್ಣ ಗಜಾಪುರ

ಕೂಡ್ಲಿಗಿ: ಈಗ ಚಳಿಗಾಲ. ಸ್ಥಳೀಯ ಪಕ್ಷಿಗಳು, ದೂರದ ದೇಶಗಳಿಂದ ವಲಸೆ ಪಕ್ಷಿಗಳು ಸಹ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಅಂಕಸಮುದ್ರಕ್ಕೆ ಆಗಮಿಸುತ್ತವೆ. ಆಹಾರ ಹುಡುಕಿ ಕೂಡ್ಲಿಗಿ ತಾಲೂಕಿನವರೆಗೂ ಪಕ್ಷಿಗಳು ಬರುತ್ತವೆ. ಆದರೆ ವಿಂಡ್ ಫ್ಯಾನ್ ರಕ್ಕಸ ಶಬ್ದದ ಅಲೆಗಳಿಗೆ ಪುನಃ ಬೇರೆ ಕಡೆಗೆ ಹೋಗುತ್ತಿವೆ. ಇದರಿಂದ ಪಕ್ಷಿಗಳ ವಾಸಸ್ಥಾನಕ್ಕೆ ಕುತ್ತು ಬಂದಿದೆ.

ಅಂಕಸಮುದ್ರ ಪಕ್ಷಿಧಾಮ

ತಾಲೂಕಿನ ಅಗ್ರಹಾರ ಕೆರೆಗೆ ಸಹಸ್ರಾರು ಪಕ್ಷಿಗಳ ನೆಲೆಯಾಗಿ ಮತ್ತೊಂದು ಅಂಕಸಮುದ್ರ ಪಕ್ಷಿಧಾಮವಾಗಿ ರೂಪುಗೊಳ್ಳುತ್ತಿದೆ. ಇದರ ಬೆನ್ನಲ್ಲೇ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ, ಗುಡೇಕೋಟೆ ಹೋಬಳಿ ವ್ಯಾಪ್ತಿ ವಿಂಡ್ ಫ್ಯಾನ್‌ಗಳು ನಾಯಿಕೊಡೆಯಂತೆ ಆಕಾಶದೆತ್ತರಕ್ಕೆ ತಲೆ ಎತ್ತಿವೆ. ಇದಕ್ಕೆ ಅಗ್ರಹಾರ ಗ್ರಾಮವೂ ಹೊರತಾಗಿಲ್ಲ. ಇಲ್ಲಿಯೂ ವಿಂಡ್ ಫ್ಯಾನ್‌ಗಳ ಅರ್ಭಟಕ್ಕೆ ಕೆಲವು ವಲಸೆ ಪಕ್ಷಿಗಳು ಈ ಕೆರೆಯಿಂದ ನೆಮ್ಮದಿಯ ಸ್ಥಳ ಹುಡುಕಿಕೊಂಡು ಹೋಗುತ್ತಿವೆ. ಪಕ್ಷಿ ತಜ್ಞರು, ಪರಿಸರವಾದಿಗಳಿಗೆ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುವ ಶಕ್ತಿ ಇಲ್ಲದಾಗಿದೆ. ರೈತರಂತೂ ತಮ್ಮ ಜಮೀನು ಸೋಲಾರ್, ಗಾಳಿಯಂತ್ರ ಸ್ಥಾವರ ಮಾಡುವ ದೊಡ್ಡ ಕಂಪನಿಗಳಿಗೆ ಲಕ್ಷಗಟ್ಟಲೇ ಹಣದಾಸೆಗೆ ಬಿದ್ದು ಲೀಜ್ ನೀಡುತ್ತಿರುವುದು ತಾಲೂಕಿನಲ್ಲಿ ಕಂಡು ಬರುತ್ತಿದೆ. ಹೀಗಾಗಿ ಪ್ರಾಣಿ- ಪಕ್ಷಿಗಳ ಗೋಳು ಕೇಳುವವರಿಲ್ಲದಂತಾಗಿದೆ. ಪ್ರಕೃತಿ ಸೌಂದರ್ಯ, ಗಿಡ-ಮರ, ಪ್ರಾಣಿ-ಪಕ್ಷಿಗಳು ಇದ್ದರೆ ನಾವೆಲ್ಲ ಎಂಬ ಸತ್ಯ ಇಲ್ಲಿಯ ಜನತೆಗೆ ಅರಿವು ಮೂಡಿಸುವರಾರು ಎಂಬುದು ಯಕ್ಷಪ್ರಶ್ನೆಯಾಗಿದೆ. ಅರಣ್ಯ ಇಲಾಖೆ, ಕಂದಾಯ ಇಲಾಖೆ, ಮಾಲಿನ್ಯ ನಿಯಂತ್ರಣ ಇಲಾಖೆ ಅಧಿಕಾರಿಗಳು ತಮ್ಮ ಲೆಕ್ಕಪತ್ರಗಳು, ಮೀಟಿಂಗ್, ಸ್ಥಳ ತನಿಖೆ ಅದೂ ಇದೂ ಅಂತ ಬ್ಯುಜಿ ಆಗಿದ್ದಾರೆ.

ಈ ನಡುವೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ನಾಗರಕಟ್ಟೆ, ಉಜ್ಜಿನಿ, ಕೊಟ್ಟೂರು ತಾಲೂಕಿನ ಗಜಾಪುರ, ಬಡೇಲಡಕು ಕಂದಾಯ ಗ್ರಾಮಗಳಲ್ಲಿ ಹೊಸದಾಗಿ ವಿಂಡ್ ಫ್ಯಾನ್‌ಗಳನ್ನು ಅಳವಡಿಸಲು ಕಂಪನಿಗಳು ಮುಂದಾಗಿವೆ. ಹಳ್ಳಿಗಾಡಿನಲ್ಲಿ ವಿಂಡ್ ಫ್ಯಾನ್‌ಗಳು ಹೆಚ್ಚಾಗಲು ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರೇ ಬ್ರೋಕರ್ ಕೆಲಸ ಮಾಡುತ್ತಿದ್ದಾರೆ. ಜನತೆಯ ಆರೋಗ್ಯದ ಬಗ್ಗೆ ಕಾಳಜಿ ಇರುವ ಶಾಸಕರೇ ಕೈ ಚೆಲ್ಲಿ ಕುಳಿತಿರುವುದು ಯಾವ ನ್ಯಾಯ ಎನ್ನುತ್ತಾರೆ ತಾಲೂಕಿನ ಪ್ರಜ್ಞಾವಂತರು.

ಅನ್ನ ಬೆಳೆಯುವ ನೆಲವನ್ನು ನುಂಗಿ ಹಾಕಿದ ವಿಂಡ್ ಫ್ಯಾನ್‌

ಕೂಡ್ಲಿಗಿ ತಾಲೂಕಿನಲ್ಲಿ ಅನ್ನ ಬೆಳೆಯುವ ನೆಲವನ್ನು ದೈತ್ಯಾಕಾರದ ವಿಂಡ್ ಫ್ಯಾನ್‌ಗಳು ನುಂಗಿ ಹಾಕಿವೆ. ಉಳಿದ ನೆಲದಲ್ಲಿ ರೈತರು ಬೆಳೆದರೂ ಫ್ಯಾನ್ ಗಾಳಿಗೆ ಭೂಮಿಯ ತೇವಾಂಶ ಹಾಳಾಗಿ ಉತ್ತಮ ಇಳುವರಿ ಬರುತ್ತಿಲ್ಲ. ತಾಲೂಕಿನ ಶಾಸಕರು, ಜನಪ್ರತಿನಿಧಿಗಳು ಎಚ್ಚೆತ್ತು ರೈತರ ಭವಿಷ್ಯದ ಬಗ್ಗೆ, ಪ್ರಾಣಿ-ಪಕ್ಷಿಗಳ ಆವಾಸ ಸ್ಥಾನಕ್ಕೆ ಕುತ್ತು ಬಂದಿರುವ ಬಗ್ಗೆ ಗಂಭೀರವಾಗಿ ಕ್ರಮ ಕೈಗೊಳ್ಳಬೇಕು. ಊರ ಪಕ್ಕದ, ಕಾಡಿನ ಪಕ್ಕದ ವಿಂಡ್ ಫ್ಯಾನ್‌ಗಳಿಗೆ ನಿಯಂತ್ರಣ ಹಾಕದಿದ್ದರೆ ತಾಲೂಕಿನ ರೈತರು ಪ್ರಾಣಿ-ಪಕ್ಷಿಗಳ ಬದುಕು ಅತಂತ್ರವಾಗುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ಕುರಿಹಟ್ಟಿ ಗ್ರಾಮದ ಓಬಣ್ಣ.