ಅಪ್ಪನದ್ದು ಪ್ರಾಮಾಣಿಕತೆ ನೇರ ದಾರಿ. ಮಗನದ್ದು ಕ್ರಿಕೆಟ್ಟು, ಬೆಟ್ಟಿಂಗ್‌ನ ಎನ್ನುವ ಅಡ್ಡದಾರಿ. ಈಗ ಗೆಲ್ಲೋದು ಅಪ್ಪನ ದಾರಿಯೋ, ಮಗನದ್ದೋ ಎನ್ನುವ ಪ್ರಶ್ನೆಯನ್ನು ಪ್ರೇಕ್ಷಕರ ಮುಂದಿಟ್ಟು ‘ಬ್ರ್ಯಾಟ್’ ಸಿನಿಮಾ ಹಲವು ತಿರುವುಗಳಲ್ಲಿ ಸಂಚರಿಸುತ್ತದೆ.
ಆರ್. ಕೇಶವಮೂರ್ತಿ
ಅಪ್ಪನದ್ದು ಪ್ರಾಮಾಣಿಕತೆ ನೇರ ದಾರಿ. ಮಗನದ್ದು ಕ್ರಿಕೆಟ್ಟು, ಬೆಟ್ಟಿಂಗ್‌ನ ಎನ್ನುವ ಅಡ್ಡದಾರಿ. ಈಗ ಗೆಲ್ಲೋದು ಅಪ್ಪನ ದಾರಿಯೋ, ಮಗನದ್ದೋ ಎನ್ನುವ ಪ್ರಶ್ನೆಯನ್ನು ಪ್ರೇಕ್ಷಕರ ಮುಂದಿಟ್ಟು ‘ಬ್ರ್ಯಾಟ್’ ಸಿನಿಮಾ ಹಲವು ತಿರುವುಗಳಲ್ಲಿ ಸಂಚರಿಸುತ್ತದೆ. ‘ಆದರೆ, ಗೆಲ್ಲೋದು ಪ್ರಾಮಾಣಿಕ ದಾರಿಯೇ’ ಎನ್ನುವ ಊಹೆ ನಿಮ್ಮದಾಗಿದ್ದರೆ ಅದು ತಪ್ಪು! ಹೀಗೆ ಪ್ರೇಕ್ಷನ ಪೂರ್ವ ನಿರ್ಧರಿತ ಅಂದಾಜುಗಳಿಗೆ ಸಿಲುಕದೆ ಸಾಗುವ ಈ ಕತೆಯಲ್ಲಿ ಅಪ್ಪ ಮತ್ತು ಮಗ ಇಬ್ಬರು ಗೆಲ್ಲುತ್ತಾರೆ! ಅದು ಹೇಗೆ ಎನ್ನುವುದೇ ಈ ಚಿತ್ರದ ಅಸಲಿ ಟ್ವಿಸ್ಟ್.
ಈ ಚಿತ್ರದ ಕತೆ ಏನು ಎಂಬುಕ್ಕಿಂತ ಹೆಚ್ಚಾಗಿ ನಿರ್ದೇಶಕ ಶಶಾಂಕ್ ಅವರು ರೂಟ್ ಬದಲಿಸಿದ್ದಾರೆ ಎಂಬುದು ವಿಶೇಷ. ಫ್ಯಾಮಿಲಿ, ಲವ್, ಸೆಂಟಿಮೆಂಟ್ ಕತೆಗಳ ಹೆದ್ದಾರಿಯಲ್ಲಿ ಸಾಗುತ್ತಿದ್ದ ಶಶಾಂಕ್ ಅವರು ‘ಬ್ರ್ಯಾಟ್’ ಮೂಲಕ ಯೂ ಟರ್ನ್ ತೆಗೆದುಕೊಂಡು ಅಡ್ಡದಾರಿಗೆ ಹೋಗಿ ಅಲ್ಲಿನ ಕಾನೂನು ಬಾಹಿರ ಚಟುವಟಿಕೆಗಳನ್ನು ಚಾಚು ತಪ್ಪದೆ ತೆರೆ ಮೇಲೆ ತಂದಿದ್ದಾರೆ. ಈ ಪೈಕಿ ಕ್ರಿಕೆಟ್ ಬೆಟ್ಟಿಂಗ್ ಕೂಡ ಒಂದು. ಚಿತ್ರದ ಪ್ರತಿ ದೃಶ್ಯವನ್ನು ಸುಂದರಮಯವಾಗಿಸಿರುವ ನಿರ್ದೇಶಕರ ಈ ಸಾಹಸಕ್ಕೆ ಸಾಕಷ್ಟು ಉದಾರತೆಯಿಂದ ಕೂಡಿರುವ ನಿರ್ಮಾಪಕ ಮಂಜುನಾಥ್ ಕಂದಕೂರ ಅವರ ಬಜೆಟ್ ಪಾಲಿಸಿ ಸಾಥ್ ಕೊಟ್ಟಿದೆ.
ಬೆಟ್ಟಿಂಗ್, ಮಧ್ಯಮ ಹುಡುಗರ ಜೀವನದ ಕನಸುಗಳು, ಪ್ರೀತಿ- ಪ್ರೇಮ, ಮೋಸ, ವಂಚನೆಗಳ ಜೊತೆಗೆ ಸ್ನೇಹದ ಮಹತ್ವವನ್ನು ಸಾರುವ ಈ ಚಿತ್ರದ ಕತೆ ಮತ್ತು ಅದರ ತಿರುವುಗಳನ್ನು ತೆರೆ ಮೇಲೆ ನೋಡಿಯೇ ಅನುಭವಿಸಬೇಕು. ಅರ್ಜುನ್ ಜನ್ಯ ಅವರು ಎರಡು ಹಾಡುಗಳ ಮೂಲಕ ಚಿತ್ರಕ್ಕೆ ಬಲ ತುಂಬಿದ್ದಾರೆ. ಅಂದಹಾಗೆ ಚಿತ್ರದ ಕೊನೆಯಲ್ಲಿ ಬರೋ ವಿಶೇಷತೆಗೆ ನಟ ನವೀನ್ ಶಂಕರ್‌ಗೂ ಒಂದು ನಂಟಿದೆ ನೋಡಿ.
ಚಿತ್ರ: ಬ್ರ್ಯಾಟ್
ತಾರಾಗಣ: ಡಾರ್ಲಿಂಗ್ ಕೃಷ್ಣ, ಮನೀಶಾ ಕಂದಕೂರ, ಅಚ್ಯುತ್ ಕುಮಾರ್, ಮಾನಸಿ ಸುಧೀರ್, ರಮೇಶ್ ಇಂದಿರಾ, ಡ್ರ್ಯಾಗನ್ ಮಂಜು
ನಿರ್ದೇಶನ: ಶಶಾಂಕ್
ರೇಟಿಂಗ್ : 3
ಪಾತ್ರಧಾರಿಗಳ ಪೈಕಿ ಒಳ್ಳೆಯ ಅಪ್ಪನಾಗಿ ಅಚ್ಯುತ್ ಕುಮಾರ್ ಗೆದ್ದಿದ್ದಾರೆ. ಡಾರ್ಲಿಂಗ್ ಕೃಷ್ಣ ಅವರು ಈ ಜನರೇಷನ್‌ನ ಸೆಲೆಬ್ರಿಟಿಯಂತೆ ತಮ್ಮ ಪಾತ್ರದಲ್ಲಿ ಕಂಗೊಳಿಸಿದ್ದಾರೆ. ಈ ಚಿತ್ರದ ಮೂಲಕ ಕನ್ನಡಕ್ಕೆ ಭರವಸೆಯ ಪ್ರತಿಭಾವಂತ ನಟಿ ಸಿಕ್ಕಿದ್ದಾರೆ ಎನ್ನುವ ಮಟ್ಟಿಗೆ ಮನೀಶಾ ಕಂದಕೂರ ಅವರು ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಚಿತ್ರದಲ್ಲಿ ಖಳನಾಯಕನಾಗಿ ನಟಿಸಿರುವ ಡ್ರ್ಯಾಗನ್ ಮಂಜು ಅವರ ಪಾತ್ರ, ಅವರ ಇಂಗ್ಲಿಷ್ ಡೈಲಾಗ್ ಹಾಗೂ ಪೊಲೀಸ್ ಅಧಿಕಾರಿ ರಮೇಶ್ ಇಂದಿರಾ ಅವರ ಪಾತ್ರಗಳು ಖಾಲಿ ಕುಷ್ಕಾದಲ್ಲಿ ಸಿಗೋ ನಲ್ಲಿ ಮೂಳೆಯಷ್ಟೇ ರುಚಿಕರ.


