ಬಿಳಿ ಪಂಚೆ, ಬಿಳಿ ಅಂಗಿ ತೊಟ್ಟ ದರ್ಶನ್ ಯಾವುದೋ ಒಂದು ಹಳ್ಳಿಯ ಪುಟ್ಟ ದೇಗುಲದ ಪಕ್ಕ ಇರುವ ಕಟ್ಟೆಯಲ್ಲಿ ಹೋಗಿ ಕೂರುತ್ತಾರೆ. ಅವರನ್ನು ನೋಡಿದ್ದೇ ತಡ, ಕ್ಷಣಾರ್ಧದಲ್ಲಿ ಅಲ್ಲಿ ಸಾವಿರಾರು ಜನ ಬಂದು ಸೇರುತ್ತಾರೆ.
ರಾಜ್
ಬಿಳಿ ಪಂಚೆ, ಬಿಳಿ ಅಂಗಿ ತೊಟ್ಟ ದರ್ಶನ್ ಯಾವುದೋ ಒಂದು ಹಳ್ಳಿಯ ಪುಟ್ಟ ದೇಗುಲದ ಪಕ್ಕ ಇರುವ ಕಟ್ಟೆಯಲ್ಲಿ ಹೋಗಿ ಕೂರುತ್ತಾರೆ. ಅವರನ್ನು ನೋಡಿದ್ದೇ ತಡ, ಕ್ಷಣಾರ್ಧದಲ್ಲಿ ಅಲ್ಲಿ ಸಾವಿರಾರು ಜನ ಬಂದು ಸೇರುತ್ತಾರೆ. ಪ್ರೇಕ್ಷಕರಿಂದ ಚಪ್ಪಾಳೆ ಸುರಿಮಳೆಯಾಗುತ್ತದೆ. ಆಗ ದರ್ಶನ್, ‘ನೀನು ಎಲ್ಲಿ ಹೋಗಿ ನಿಂತರೂ ಯಾವಾಗ ಅಲ್ಲಿಗೆ ಜನ ಬಂದು ಸೇರುತ್ತಾರೋ ಅವತ್ತು ನೀನು ಹೀರೋ ಅಂತ ಹೇಳಿದ್ರಲ್ಲ, ಇವತ್ತಿನಿಂದ ನಾನು ಹೇಳಿದ್ದೇ ನಡೆಯೋದು’ ಅನ್ನುತ್ತಾರೆ. ನೆರೆದ ಪ್ರೇಕ್ಷಕರಿಂದ ಚಪ್ಪಾಳೆ ಸುರಿಮಳೆಯಾಗುತ್ತದೆ.
ದರ್ಶನ್ ಎಂದರೆ ಒಟ್ಟು ಸೇರುವ ಅಂಥಾ ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡೇ ಪ್ರಕಾಶ್ ‘ದಿ ಡೆವಿಲ್’ ಸಿನಿಮಾ ಮಾಡಿದ್ದಾರೆ. ದರ್ಶನೋತ್ಸವ ಆಚರಿಸಿದ್ದಾರೆ. ಎಲ್ಲಿರುವನು ನಿನ್ನ ಹರಿ ಎಂದು ಹಿರಣ್ಯಕಶಿಪು ಕೇಳಿದಾಗ ಪ್ರಹ್ಲಾದ ಎಲ್ಲಾ ಕಡೆ ಹರಿಯನ್ನು ತೋರಿಸುವಂತೆ ಇಲ್ಲಿ ದರ್ಶನ್ ಎಲ್ಲಾ ಕಡೆ ವ್ಯಾಪಿಸಿದ್ದಾರೆ. ಬಹುತೇಕ ಫ್ರೇಮುಗಳನ್ನು ಅವರೇ ತುಂಬಿಕೊಂಡಿದ್ದಾರೆ. ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ.
ಸ್ಕ್ರೀನ್ ಪ್ರೆಸೆನ್ಸ್ನಲ್ಲಿ ಅದ್ದೂರಿತನವಿದೆ. ಅವರ ಸಿನಿಮಾದಲ್ಲಿ ಇರಲೇಬೇಕಾದ ಆಕರ್ಷಕ ಫೈಟ್ಗಳಿವೆ. ವಿದೇಶದಲ್ಲಿನ ಕಲರ್ಫುಲ್ ಡ್ಯುಯೆಟ್ ಇದೆ. ಬಡವರ ಬಂಧು ಪಾತ್ರ ಚಿತ್ರಣವಿದೆ. ಶಿಷ್ಟ ರಕ್ಷಣೆ, ದುಷ್ಟ ಶಿಕ್ಷಣೆ ಥೀಮ್ ಇದೆ. ಅಚ್ಚರಿ ಎಂಬಂತೆ ನೆಗೆಟಿವ್ ಶೇಡ್ನಲ್ಲಿಯೂ ಕಾಣಿಸಿಕೊಂಡಿರುವ ದರ್ಶನ್ ಸೊಗಸಾಗಿ ನಟಿಸಿದ್ದಾರೆ.
ಚಿತ್ರ: ದಿ ಡೆವಿಲ್
ನಿರ್ದೇಶನ: ಪ್ರಕಾಶ್ ಜಯರಾಮ್
ತಾರಾಗಣ: ದರ್ಶನ್, ರಚನಾ ರೈ, ಮಹೇಶ್ ಮಂಜ್ರೇಕರ್, ಅಚ್ಯುತ್ ರಾವ್, ವಿನಯ್ ಗೌಡ, ಹುಲಿ ಕಾರ್ತಿಕ್
ರೇಟಿಂಗ್: 3
ಈ ಎಲ್ಲಾ ಕಾರಣದಿಂದಲೋ ಏನೋ ಕತೆ- ಚಿತ್ರಕತೆಗಾರ ಪ್ರಕಾಶ್ ಹಿನ್ನೆಲೆಗೆ ಸರಿದಿದ್ದಾರೆ. ದರ್ಶನ್ ಅಬ್ಬರದ ಮುಂದೆ ಮಂಕಾಗಿದ್ದಾರೆ. ಅವರು ಇಲ್ಲಿ ಒಳ್ಳೆಯವನು ಮತ್ತು ಕೆಟ್ಟವನು ಎಂಬ ಎರಡು ವ್ಯಕ್ತಿತ್ವಗಳನ್ನು ರಾಜಕೀಯದ ಹಿನ್ನೆಲೆಯಲ್ಲಿ ಇಟ್ಟಿದ್ದಾರೆ. ಕೆಟ್ಟವನ ಬದಲಿಗೆ ಒಳ್ಳೆಯವನು ಹೋದಾಗ, ಕೆಟ್ಟವನಿಗೆ ದುರಾಸೆ ಕೆದರಿದಾಗ ಕತೆ ಏನಾಗುತ್ತದೆ ಎಂಬುದನ್ನು ಕೊಂಚ ಸುದೀರ್ಘ ಪಯಣದಲ್ಲಿ ಹೇಳಿದ್ದಾರೆ. ಈ ಪ್ರಯಾಣ ಪೂರ್ತಿ ಅವರ ಹುಮ್ಮಸ್ಸು ಚಿತ್ರಣದಲ್ಲಿ ಮಾತ್ರ ಕಾಣುತ್ತದೆ.
ದರ್ಶನ್ ಬಿಟ್ಟರೆ ಇಲ್ಲಿ ಗಮನ ಸೆಳೆಯುವುದು ಅಚ್ಯುತ್ ರಾವ್. ಕಣ್ಣಲ್ಲೇ ನಟಿಸಬಲ್ಲ ಅವರು ತಣ್ಣಗೆ ಮನಸ್ಸು ಗೆದ್ದುಬಿಡುತ್ತಾರೆ. ರಚನಾ ರೈ ಬಹಳ ಚೆನ್ನಾಗಿ ಕಾಣಿಸುತ್ತಾರೆ. ಮಹೇಶ್ ಮಂಜ್ರೇಕರ್ಗೆ ಒಳ್ಳೆಯ ಪಾತ್ರವಿದೆ. ಇಲ್ಲಿ ಸಾಕಷ್ಟು ಕಲಾವಿದರಿದ್ದಾರೆ. ಅವರವರ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅಭಿಮಾನಿಗಳಿಗೆ ಖುಷಿ ಕೊಡುವ ಮಾತುಗಳು, ದೃಶ್ಯಗಳು ಸಾಕಷ್ಟಿವೆ. ಅಷ್ಟರ ಮಟ್ಟಿಗೆ ಈ ಸಿನಿಮಾ ಸಂಪೂರ್ಣ ಅಭಿಮಾನಿಗಳ ದರ್ಶನೋತ್ಸವ.


