ನಿಧಾನ ಕತೆಯ ಹರಿವಿನ ಜೊತೆ ಪದೇ ಪದೇ ಬರುವ ಗಿಡುಗನನ್ನೂ ಸಹಿಸಬೇಕು. ಕೊನೆಯ ಭಾಗ ಕಾವ್ಯದ ಹಾಗೆ ಮನಸ್ಸಲ್ಲುಳಿಯುತ್ತದೆ. ಪುರಾಣ ಕಾಲದ ಕರ್ಣ ನೆನಪಾಗುತ್ತಾನೆ. ಆ ಹೊತ್ತಿನ ಹಾಡೂ ಮನಸ್ಸಲ್ಲುಳಿಯುತ್ತದೆ.
ಪ್ರಿಯಾ ಕೆರ್ವಾಶೆ
ಕ್ರೌರ್ಯ, ದ್ವೇಷ ಮತ್ತು ಪ್ರೀತಿ ಮತ್ತು ಇವುಗಳ ಸಾರದಂತಿರುವ ನೋವು. ಈ ಭಾವವನ್ನು ಆಳವಾಗಿ ಮನಸ್ಸಿಗೆ ದಾಟಿಸುವ ಸಿನಿಮಾ ‘ಧರ್ಮಂ’. 80ರ ದಶಕದಂತೆ ಕಾಣುವ ಪರಿಸರ. ಕಳ್ಳಭಟ್ಟಿ ದಂಧೆಯ ಅಟ್ಟಹಾಸ. ಪೊಲೀಸರಿಂದ ದಂಧೆ ಮಾಡುವವರ ಮೇಲೆ ಅವ್ಯಾಹತ ದಾಳಿ. ಇವಿಷ್ಟು ಮೇಲ್ನೋಟಕ್ಕೆ ಕಾಣುವ ಸಂಗತಿ. ಸೀನ್ ಕಟ್ ಮಾಡಿದರೆ ಅಲ್ಲೊಬ್ಬ ರೌಡಿ ಇದ್ದಾನೆ. ಅವನ ಜೊತೆಗೆ ವಿಲನ್ ಗ್ಯಾಂಗ್ ಇದೆ. ಕಳ್ಳ ಭಟ್ಟಿ ಕಾಯಿಸುವ ಅಮಾಯಕ ತಳವರ್ಗದವರಿದ್ದಾರೆ, ಅವರ ನೋವಿನ ಬದುಕಿದೆ.
ಅಂಥಾ ಬೇಗುದಿಯ ಬದುಕಿಗೆ ತಂಗಾಳಿಯಂತೆ ಬರುವವರು ಕರಿಮುತ್ತ ಮತ್ತು ನೀಲಾ ಎಂಬ ಪ್ರೇಮಿಗಳು. ಅರಿವಿಲ್ಲದೇ ಇವರಿಬ್ಬರ ಬದುಕಿನ ಮೇಲೆ ಆಟವಾಡುವ ಬೆಳಕು ಕತ್ತಲೆಗಳ ನೆರಳಾಟವೇ ಕಥೆಯ ತಿರುಳು. ಇಂಥದ್ದೊಂದು ಜಗತ್ತು ಪ್ರೇಕ್ಷಕನ ಮನಸ್ಸಲ್ಲಿ ಗಟ್ಟಿಯಾಗಿ ನಿಲ್ಲುವವರೆಗೆ ಕಥೆ ಇಲ್ಲೇ ಇರುತ್ತದೆ. ಆಮೇಲೆ ಬಲು ಸಾವಧಾನಕ್ಕೆ ಮತ್ತೊಂದು ಮಗ್ಗುಲಿಗೆ ಹೊರಳಿಕೊಳ್ಳುತ್ತದೆ. ನಿರ್ದೇಶಕ ನಾಗಮುಖ ಅವರ ತಾದಾತ್ಮ್ಯದ ಕತೆ ಹೇಳುವಿಕೆಯಿಂದ ಒಂದು ಹಂತದಲ್ಲಿ ಇದೊಂಥರ ಬದುಕನ್ನು ಹಾಗೇ ಕತ್ತರಿಸಿ ತಂದು ಇಟ್ಟ ಹಾಗೆ ಭಾಸವಾಗುತ್ತದೆ.
ಚಿತ್ರ: ಧರ್ಮಂ
ನಿರ್ದೇಶನ: ನಾಗಮುಖ ಅಕ್ಕಿ ಆಲೂರು
ತಾರಾಗಣ: ಸಾಯಿ ಶಶಿಕುಮಾರ್, ವಿರಾನಿಕಾ ಶೆಟ್ಟಿ, ಎಸ್.ಕೆ. ರಾಮಕೃಷ್ಣ
ರೇಟಿಂಗ್: 3
ಆದರೆ ವ್ಯವಧಾನವೇ ಪ್ರಧಾನ. ನಿಧಾನ ಕತೆಯ ಹರಿವಿನ ಜೊತೆ ಪದೇ ಪದೇ ಬರುವ ಗಿಡುಗನನ್ನೂ ಸಹಿಸಬೇಕು. ಕೊನೆಯ ಭಾಗ ಕಾವ್ಯದ ಹಾಗೆ ಮನಸ್ಸಲ್ಲುಳಿಯುತ್ತದೆ. ಪುರಾಣ ಕಾಲದ ಕರ್ಣ ನೆನಪಾಗುತ್ತಾನೆ. ಆ ಹೊತ್ತಿನ ಹಾಡೂ ಮನಸ್ಸಲ್ಲುಳಿಯುತ್ತದೆ. ನಾಗಶೆಟ್ಟಿ ಮಳಗಿ ಸಿನಿಮಾಟೋಗ್ರಫಿ ಸೊಗಸಾಗಿದೆ. ಆದರೆ ಕೆಲವೊಮ್ಮೆ ಇದು ಅತಿ ಸುಂದರವಾಗಿ ಕಥೆಯಿಂದಾಚೆ ನಿಲ್ಲುವುದೂ ಇದೆ. ಹರೀಶ್ ಕೊಮ್ಮೆ ಎಡಿಟಿಂಗ್ಗೆ ಫುಲ್ ಮಾರ್ಕ್ಸ್. ಒಟ್ಟಿನಲ್ಲಿ ಮನಸ್ಸಲ್ಲಿ ಚಿತ್ರದಂತೆ ಉಳಿಯುವ ಸಿನಿಮಾವಿದು.


