ಮೈಸೂರಿನಲ್ಲಿ, ತನಗೆ ಗೌರವ ನೀಡುತ್ತಿಲ್ಲ ಎಂಬ ಕಾರಣಕ್ಕೆ ಪಾನಿಪುರಿ ವ್ಯಾಪಾರಿಯೊಬ್ಬ ತನ್ನ ಪತ್ನಿಯನ್ನೇ ಕೊಲ್ಲಲು 5 ಲಕ್ಷ ರೂಪಾಯಿ ಸುಪಾರಿ ನೀಡಿದ್ದಾನೆ. ಸುತ್ತಿಗೆಯಿಂದ ಹೊಡೆದು, ಮನೆಗೆ ಬೆಂಕಿ ಹಚ್ಚಿ ಅಪಘಾತವೆಂದು ಬಿಂಬಿಸಲು ಯತ್ನಿಸಿದರೂ, ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೈಸೂರು (ಡಿ.19): ತನಗೆ ಮರ್ಯಾದೆ, ಗೌರವ ನೀಡುತ್ತಿಲ್ಲ ಎನ್ನುವ ಕಾರಣಕ್ಕೆ ಹೆಂಡ್ತಿಯನ್ನು ಕೊಲ್ಲಲು ಪತಿಯೇ ಸುಪಾರಿ ಕೊಟ್ಟಿರುವ ಘಟನೆ ಮೈಸೂರನಲ್ಲಿ ನಡೆದಿದೆ. ತನ್ನ ಸಹಾಯಕರಿಗೆ ಸುಪಾರಿ ಕೊಟ್ಟು ಹತ್ತಿರದಲ್ಲಿಯೇ ಹೆಂಡತಿ ಸಾಯೋದನ್ನೇ ಪಾನಿಪುರಿ ವ್ಯಾಪಾರಿ ಕಾಯುತ್ತಿದ್ದ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಮಹಿಳೆಯನ್ನು ಸುತ್ತಿಗೆಯಿಂದ ಹೊಡೆದು, ಮನೆಗೆ ಪಾನಿಪುರಿ ವ್ಯಾಪಾರಿಯ ಸ್ನೇಹಿತರು ಬೆಂಕಿಹಚ್ಚಿದ್ದರು. ಗ್ಯಾಸ್ ಸಿಲಿಂಡರ್‌ಗಳನ್ನು ಸೋರಿಕೆ ಮಾಡಿ, ಅಗ್ನಿ ಅವಘಡ ಎಂದು ಬಿಂಬಿಸಲು ಯತ್ನಿಸಿದ್ದರು.
ಆದರೆ, ಯಾವುದೇ ಅನುಭವ ಇವರಿಗಿಲ್ಲದ ಕಾರಣಕ್ಕೆ, ಇವರುಗಳು ಮಾಡಿದ ಎಡವಟ್ಟಿನಿಂದ ಒಂದೇ ದಿನದಲ್ಲಿ ಕೊಲೆಗೆ ಯತ್ನಿಸಿದ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಮೈಸೂರಿನ ಬಿಎಂಶ್ರೀ ನಗರದಲ್ಲಿ ಘಟನೆ ನಡೆದಿದ್ದು, ಇಡೀ ನಗರವನ್ನು ಬೆಚ್ಚಿಬೀಳಿಸಿದೆ.
ಮನೆಯಲ್ಲಿ ಒಬ್ಬಳೇ ಇದ್ದ ಮಹಿಳೆಗೆ ಸುತ್ತಿಗೆಯಿಂದ ಹೊಡೆದು ಕೊಲೆಗೆ ಯತ್ನ ಮಾಡಲಾಗಿದೆ. ಹಲ್ಲೆ ನಂತರ ಮನೆಗೆ ಬೆಂಕಿ ಹಾಕಿ, ಸಿಲಿಂಡರ್ ಸೋರಿಕೆ ಮಾಡಲಾಗಿತ್ತು. ಹಲ್ಲೆಗೆ ಒಳಗಾದ ಮಹಿಳೆಯನ್ನು 45 ವರ್ಷದ ನಾಗರತ್ನ ಎಂದು ಗುರುತಿಸಲಾಗಿದ್ದು, ಭಾಸ್ಕರ್ ಹಾಗೂ ಅಭಿಷೇಕ್ ಕೊಲೆಗೆ ಯತ್ನಿಸಿದ ಆರೋಪಿಗಳು ಎಂದು ಗುರುತಿಸಲಾಗಿದೆ.
5 ಕ್ಷ ಸುಪಾರಿ ಕೊಟ್ಟಿದ್ದ ಮಹೇಶ್
ಹೆಂಡತಿ ಕೊಲೆಗೆ ಪತಿ ಮಹೇಶ್ 5 ಲಕ್ಷ ಸುಪಾರಿ ಕೊಟ್ಟಿದ್ದ. ಪತ್ನಿ ವರ್ತನೆಯಿಂದ ಬೇಸತ್ತು ತನ್ನ ಸ್ನೇಹಿತರಿಗೆ ಇದರ ಸುಪಾರಿ ನೀಡಿದ್ದ. ವಿರಾಜಪೇಟೆ ಮೂಲದ ಭಾಸ್ಕರ್ , ಅಭಿಷೇಕ್ ಎನ್ನುವವರು ಮಹೇಶ್‌ನ ಪತ್ನಿಯನ್ನು ಸಾಯಿಸುವ ಜವಾಬ್ದಾರಿ ವಹಿಸಿಕೊಂಡಿದ್ದರು. ಮಹೇಶ್ ಪಾನಿಪುರಿ ವ್ಯಾಪಾರಿಯಾಗಿದ್ದರೆ, ಗಂಡನ ಸಂಪಾದನೆಯನ್ನು ಬಡ್ಡಿಗೆ ಬಿಟ್ಟು, ಅದರ ಹಣವನ್ನು ಗಂಡನಿಗೆ ನೀಡುತ್ತಿರಲಿಲ್ಲ. ಇದರ ಬಗ್ಗೆ ಪ್ರಶ್ನೆ ಮಾಡಿದಾಗ ಆತನಿಗೆ ಮರ್ಯಾದೆ ಕೊಡದೆ ಮಾತನಾಡಿಸುತ್ತಿದ್ದಳು. ಇದರಿಂದಾಗಿ ಆಕೆಯ ಕೊಲೆಗೆ ಪ್ಲ್ಯಾನ್ ರೂಪಿಸಿದ್ದ ಎನ್ನಲಾಗಿದೆ.
ಮನೆಗೆ ನುಗ್ಗಿ ಗ್ಯಾಸ್ ಪೈಪ್ ಕತ್ತರಿಸಿ ಪೆಟ್ರೋಲ್ ಸುರಿದು ಹೆಂಡ್ತಿ ಕೊಲೆ ಮಾಡಿ ಎಂದು ಸ್ವತಃ ಮಹೇಶ್ ಪ್ಲ್ಯಾನ್ ಹೇಳಿದ್ದ. ಈ ಹಿನ್ನಲೆ ರಾತ್ರಿ ಮನೆಗೆ ನುಗ್ಗಿ ನಾಗರತ್ನ ಮೇಲೆ ಹಲ್ಲೆ ಮಾಡಲಾಗಿತ್ತು. ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಾಕಲು ಯತ್ನಿಸಿದ್ದರು. ಈ ವೇಳೆ ಮನೆಯ ಕೆಲವಸ್ತುಗಳು ಬೆಂಕಿಗೆ ಆಹುತಿಯಾಗಿತ್ತು. ತೀವ್ರವಾಗಿ ಗಾಯಗೊಂಡ ನಾಗರತ್ನ ಆಸ್ಪತ್ರೆಗೆ ದಾಖಲಾಗಿದ್ದರು. ತನಿಖೆಯಲ್ಲಿ ಗಂಡನೇ ಹೆಂಡತಿಯನ್ನು ಕೊಲ್ಲುವಂತೆ ಸುಫಾರಿ ನೀಡಿದ್ದು ಬೆಳಕಿಗೆ ಬಂದಿದೆ. ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಿ ಪೊಲೀಸರು ಜೈಲಿಗೆ ಅಟ್ಟಿದ್ದಾರೆ.


