ಕಟ್ಟಿ ಒಂದೇ ವಾರ ಆಗಿತ್ತು ಅಷ್ಟೇ.. ಆಗಲೇ ಸಾವಿರಾರು ಬಲಿಗಾಗಿ ಕಾಯುತ್ತಿದೆ ಆ ಸೇತುವೆ.. ಒಂದಲ್ಲಾ ಎರಡಲ್ಲಾ ಬರೋಬ್ಬರಿ 60 ಕೋಟಿ ರು. ವ್ಯಯಿಸಿ ಕಟ್ಟಿದ ಸೇತುವೆ ಅದು. ಉದ್ಘಾಟನೆಗೂ ಮುನ್ನವೇ ಸೇತುವೆ ಮುರಿದು ಬೀಳುತ್ತಿರುವ ಎಕ್ಸ್'ಕ್ಲೂಸಿವ್ ಬಿಗ್ ಸ್ಟೋರಿ ಇಲ್ಲಿದೆ...​

ಕಾರವಾರ(ಏ. 03): ಬರೋಬ್ಬರಿ 60 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸೇತುವೆ.. ಹೊನ್ನಾವರ ಬಳಿ ಶರಾವತಿ ನದಿಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ 1.2 ಕಿ.ಮೀ ಉದ್ದದ ಸೇತುವೆ ಕಾಮಗಾರಿಯನ್ನು ಮೊನ್ನೆ ಮೊನ್ನೆಯಷ್ಟೇ ಮುಗಿಸಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಉದ್ಘಾಟನೆ ಆಗಬೇಕು. ಅಷ್ಟರಲ್ಲೇ ಇದರ ಬಂಡವಾಳ ಬಯಲಾಗಿದೆ.

ಸೇತುವೆಯ ಗರ್ಡರ್ ಬೇರಿಂಗ್'​ನಲ್ಲೇ ಲೋಪ:
ಈ ರಿಪೋರ್ಟ್​ ಕೊಟ್ಟಿದ್ದು ಬೇರೆ ಯಾರೂ ಅಲ್ಲಾ, ಸ್ವತಃ ಕಾಮಗಾರಿ ಗುತ್ತಿಗೆ ಪಡೆದಿದ್ದ ಕಂಪನಿಯೇ ಪರಿಶೀಲನೆಗೆಂದು ನೇಮಿಸಿದ್ದ ತಂತ್ರಜ್ಞರು. ಸೇತುವೆಯ ಆರಂಭದ ಕಂಬದ ಮೇಲೆ ಅಳವಡಿಸಿರುವ ಗರ್ಡರ್ ಬೇರಿಂಗ್'ನಲ್ಲಿ ಲೋಪ ಕಂಡು ಬಂದಿದೆ. ಸೇತುವೆ ಸ್ಪಾನ್ ನಂ 21 G2, G3 ಬೇರಿಂಗ್ ನ P1, P2 ಒಳಬಾಗಿದೆ. ಇದ್ರಿಂದ ಯಾವುದೇ ಕ್ಷಣದಲ್ಲಿ ಬೇಕಾದರೂ ಸೇತುವೆ ಮುರಿದು ಬೀಳಬಹುದು ಎಂದು ವರದಿಯೊಂದು ಹೇಳ್ತಿದೆ.

ಕನ್ಸಲ್ಟಂಟ್ ಕಂಪನಿಯು ಮಾರ್ಚ್​ 8 ರಂದೇ ಗುತ್ತಿಗೆದಾರ ಕಂಪನಿಗೆ ನೂನ್ಯತೆ ಬಗ್ಗೆ ರಿಪೋರ್ಟ್​ ನೀಡಿ, ಬೇರಿಂಗ್ ಬದಲಾಯಿಸುವಂತೆ ಸಲಹೆ ನೀಡಿದೆ. ಆದ್ರೆ, ಕಂಪನಿ ಕ್ಯಾರೇ ಎಂದಿಲ್ಲ.. ಬದಲಾಗಿ ಸಾರ್ವಜನಿಕ ಬಳಕೆಗೆ ಅನುವು ಮಾಡಿಕೊಟ್ಟಿದೆ. 

ಅಷ್ಟಕ್ಕೂ ಇದು ರಾಷ್ಟ್ರೀಯ ಹೆದ್ದಾರಿಯಲ್ಲಿನ ಸೇತುವೆ. ಭಾರೀ ವಾಹನಗಳ ಓಡಾಟ ಹೆಚ್ಚಾಗೇ ಇರುತ್ತೆ. ಅಂಥದ್ರಲ್ಲಿ ಈಗಲೇ ಕುಸಿಯುವ ಮುನ್ಸೂಚನೆ ಸಿಕ್ಕ ಸೇತುವೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಮುಂದಾಗುವ ಅನಾಹುತಕ್ಕೆ ಬ್ರೇಕ್ ಹಾಕಬೇಕಿದೆ.

- ಕಡತೋಕಾ ಮಂಜು, ಸುವರ್ಣ ನ್ಯೂಸ್